ಚಿಕ್ಕಮಗಳೂರು : ಡ್ರಗ್ಸ್ ದಂಧೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೆ ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ್ದ ವಿಚಾರ ಚರ್ಚೆಗೆ ಬಂದಿದ್ದು, ಈ ಬಗ್ಗೆ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿ, ರಾಗಿಣಿಗೂ ನಮ್ಮ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೆಲವರು ವ್ಯವಸ್ಥೆ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದವರಿಗೆ ಓಲೈಸುವ, ಒತ್ತಡ ತರುವ ಕೆಲಸ ಮಾಡಿರಬಹುದು. ಬಿಜೆಪಿ ಇಂಥವರ ಜೊತೆ ರಾಜಿ ಮಾಡಿಕೊಂಡು ಸರ್ಕಾರ ಮಾಡಿಲ್ಲ. ಕಾಂಪ್ರಮೈಸ್ ಮಾಡಿಕೊಂಡು ಅವರ ಜೊತೆ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡುವ ಪಕ್ಷ ನಮ್ಮದಲ್ಲ. ಯಾರೇ ಆದರೂ ಸರಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ರಾಜ್ಯಕ್ಕೆ ಡ್ರಗ್ ಕೇಸ್ ಹೊಸದಲ್ಲ. ಇಷ್ಟೊಂದು ಗಂಭೀರವಾಗಿರೋದು ಇದೇ ಮೊದಲು. ತನಿಖೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತದೆಯೋ ಗೊತ್ತಿಲ್ಲ. ಸಾಂದರ್ಭಿಕ ಸಾಕ್ಷಿಯಲ್ಲಿ ರಾಗಿಣಿಯವರ ಮೇಲೆ ಸಂಶಯ ಬಂದು ತನಿಖೆ ನಡೆಯುತ್ತಿದೆ. ಅವರಿಗೆ ನೇರವಾಗಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲ. ರಾಗಿಣಿ ನಟಿಯಾಗಿ ತನ್ನದೇ ಆದ ಸ್ಥಾನ ಪಡೆದವರು. ನಮ್ಮ ಪಕ್ಷಕ್ಕೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿದ್ದು, ಹೊಸ ಆಯಾಮ ಸಿಕ್ಕರೆ ಕೇಂದ್ರದ ಸಹಾಯ ಪಡೆಯಬಹುದು ಎಂದು ತಿಳಿಸಿದ್ದಾರೆ.