ಹೊಸದಿಲ್ಲಿ: ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಕಡ್ಡಾಯಪಡಿಸಿರುವ ಆರೋಗ್ಯಸೇತು ಆಪ್, ‘ನಾಜೂಕಿನ ಕಣ್ಗಾವಲು ವ್ಯವಸ್ಥೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಆರೋಗ್ಯಸೇತು ಆಪ್ ನಯವಾದ ಕಣ್ಗಾವಲು ವ್ಯವಸ್ಥೆಯಾಗಿದ್ದು, ಇದನ್ನು ಖಾಸಗಿ ಕಂಪನಿಗೆ ಹೊರಗುತ್ತಿಗೆ ನೀಡಲಾಗಿದೆ. ಇದಕ್ಕೆ ಯಾವುದೇ ಸಾಂಸ್ಥಿಕ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲ. ಇದು ಮಾಹಿತಿ ಸುರಕ್ಷೆ ಮತ್ತು ಖಾಸಗಿತನದ ಬಗ್ಗೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ನಾವು ಸುರಕ್ಷಿತವಾಗಿರಲು ತಂತ್ರಜ್ಞಾನ ನೆರವಾಗುತ್ತದೆ. ಆದರೆ ನಾಗರಿಕರ ಒಪ್ಪಿಗೆ ಇಲ್ಲದೇ ಅವರ ಜಾಡು ಹಿಡಿಯುವ ಸಾಧನವಾಗಬಾರದು’.
ಈ ಆಪ್ ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು, ಇತರ ದೇಶಗಳಲ್ಲಿ ಸಂಪರ್ಕ ಟ್ರ‍್ಯಾಕ್ ಮಾಡಲು ನಿಗದಿಪಡಿಸಿದ ಮಾನದಂಡಕ್ಕಿಂತ ಕಳಪೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಿಪಿಎಸ್ ಆಧರಿತ ಲೊಕೇಷನ್ ಡಾಟಾ ಬಳಕೆ ದೊಡ್ಡ ಆತಂಕಕಾರಿ ಅಂಶ ಎನ್ನುವುದು ತಜ್ಞರ ಅಭಿಮತ ಎಂದಿದ್ದಾರೆ ರಾಹುಲ್ ಗಾಂಧಿ.
ಏಪ್ರಿಲ್ ನಲ್ಲಿ ಬಿಡುಗಡೆಯಾದ ಆಪ್ ಇದೀಗ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ. ಒಬ್ಬ ಖಾಸಗಿ ಕಂಪನಿಯ ಉದ್ಯೋಗಿ ತನ್ನ ಮೊಬೈಲ್ ನಲ್ಲಿ ಈ ಆಪ್ ಹೊಂದಿರದಿದ್ದರೆ, ಆ ಕಂಪನಿಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.