ರಾಹುಲ್ ದ್ರಾವಿಡ್ ಅನ್ನೋ ಕ್ರಿಕೆಟ್ ಮಹಾಗ್ರಂಥದ ಒಂದು ಸವಿಯಾದ ಕಥೆ..!
ರಾಹುಲ್ ದ್ರಾವಿಡ್. ವಿಶ್ವ ಕ್ರಿಕೆಟ್ ನ ಬುದ್ಧ. ನೂಲಿನಲ್ಲಿ ಗೆರೆ ಎಳೆದಂತೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಟಚ್ ಮಾಡುವ ಕಲಾತ್ಮಕ ಬ್ಯಾಟ್ಸ್ ಮೆನ್ . ಬೌಲರ್ ಗಳು ತಾಳ್ಮೆ ಕಳೆದುಕೊಳ್ಳುವಂತೆ ಕಾಡುವ ಹಾಗೂ ವಿಕೆಟ್ ಪಡೆಯಲು ಎದುರಾಳಿ ತಂಡ ಬೇಡುವಂತೆ ಮಾಡುವ ಜಾಯಮಾನ ನಮ್ಮ ಜ್ಯಾಮಿಯದ್ದು. ಇಂತಹ ಸ್ಟೈಲೀಸ್ ಪ್ಲೇಯರ್ ನ ಆಟ ಈಗ ನೆನಪು ಮಾತ್ರ. ಜಂಟಲ್ ಮೆನ್ ಗೇಮ್ ನ ಜಂಟಲ್ ಮೆನ್ ಆಟಗಾರನನ್ನು ಒಂದು ಕ್ಷಣ ನೆನಪಿಸಿಕೊಂಡಾಗ ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣ ಮುಂದೆ ಅವರ ಬ್ಯಾಟಿಂಗ್ ವೈಯಾರಗಳು ಹಾದು ಹೋಗುತ್ತವೆ. ಅಂತಹ ಜೀನಿಯಸ್ ಕ್ರಿಕೆಟಿಗನ ಕ್ರಿಕೆಟ್ ಬದುಕೇ ಒಂದು ಮಹಾನ್ ಗ್ರಂಥ.
ಹೌದು, ರಾಹುಲ್ ದ್ರಾವಿಡ್ ಕ್ರಿಕೆಟ್ ಬದುಕಿನ ಮಹಾನ್ ಗ್ರಂಥದ ಒಂದೊಂದು ಸವಿ ಸವಿ ನೆನಪುಗಳ ಅಧ್ಯಾಯಗಳು ಅನಾವರಣಗೊಂಡಾಗ ಅಚ್ಚರಿಯಾಗುತ್ತೆ. ತಪಸ್ಸು ಮಾಡುವ ಮುನಿಯಂತೆ ರಾಹುಲ್ ದ್ರಾವಿಡ್ ಕ್ರಿಕೆಟ್ ಅಟವನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ್ರು. ಊಟ, ನಿದ್ದೆ, ಕುಟುಂಬ ಹೀಗೆ ಎಲ್ಲವನ್ನೂ ಬಿಟ್ಟು ದ್ರಾವಿಡ್ ಕ್ರಿಕೆಟ್ ಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ರು. ಅದರ ಪರಿಣಾಮವೇ ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ನಲ್ಲಿ ಎಂದೂ ಮರೆಯದ ಕ್ರಿಕೆಟಿಗನಾದ್ರು. ಹಾಗಿದ್ರೆ ದ್ರಾವಿಡ್ ಯಶಸ್ಸಿನ ಗುಟ್ಟು ಏನು ? ಈ ಪ್ರಶ್ನೆಗೆ ಉತ್ತರ ತುಂಬಾನೇ ಸರಳ. ಜವಾಬ್ದಾರಿ ಮತ್ತು ಕ್ರಿಕೆಟ್ ಮೇಲಿನ ಅಪಾರ ಪ್ರೀತಿ. ಈ ಎರಡು ಅಂಶಗಳು ದ್ರಾವಿಡ್ ಬದುಕಿನಲ್ಲಿ ಯಾವ ರೀತಿ ಪರಿಣಾಮ ಬೀರಿದ್ದವು ಎಂಬುದರ ಬಗ್ಗೆ ಒಂದು ರೋಚಕ ಹಾಗೂ ನೈಜ ಕಥೆಯೇ ಇದೆ.
ಇದು ಸುಮಾರು 28 -ವರ್ಷಗಳ ಹಿಂದೆ ನಡೆದ ಸತ್ಯ ಕಥೆ. ರಾಹುಲ್ ದ್ರಾವಿಡ್ ದಿನದ ಇಪ್ಪತ್ತಾನಾಲ್ಕು ಗಂಟೆಯೂ ಕ್ರಿಕೆಟ್ ನ ಬಗ್ಗೆಯೇ ಯೋಚನೆ ಮಾಡುತ್ತಿದ್ದರು. ಮನೆ, ಕಾಲೇಜ್ ಬಿಟ್ಟು ಹೆಚ್ಚಿನ ಸಮಯವನ್ನು ಬರೀ ಮೈದಾನದಲ್ಲೇ ಕಾಲ ಕಳೆಯುತ್ತಿದ್ದರು. ಹಾಗಂತ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿರಲಿಲ್ಲ ಅಂತ ಅಂದುಕೊಳ್ಳಬೇಡಿ. ಆದ್ರೆ ನಿರಂತರ ಅಭ್ಯಾಸ ಹಾಗೂ ಪಂದ್ಯಗಳು ಇರುವುದರಿಂದ ಕಾಲೇಜ್ ಗೆ ಚಕ್ಕರ್ ಹೊಡೆಯುತ್ತಿದ್ದರು. ಇನ್ನೇನು ಪರೀಕ್ಷೆ ಹತ್ತಿರÀ ಬಂದಾಗ ಮಾತ್ರ ದ್ರಾವಿಡ್ ಕಾಲೇಜ್ ನಲ್ಲಿರುತ್ತಿದ್ದರು.
ಹಾಗೇ ಒಂದು ದಿನ ಸೇಂಟ್ ಜೊಸೇಫ್ ಕಾಲೇಜ್ ಗೆ ರಾಹುಲ್ ದ್ರಾವಿಡ್ ಎಂಟ್ರಿಯಾದ್ರು. ಯಾರಲ್ಲೂ ಮಾತನಾಡದೇ ಸೀದಾ ಬಂದು ಕ್ಲಾಸ್ ನಲ್ಲಿ ಕುಳಿತುಕೊಂಡು ಗಂಭೀರವಾಗಿ ನೋಟ್ಸ್ ಗಳನ್ನು ಬರೆಯುತ್ತಿದ್ದರು. ದ್ರಾವಿಡ್ ಅವತಾರವನ್ನು ನೋಡಿದ ಕಾಲೇಜ್ ಹುಡುಗರು ಹಾಗೂ ಗೆಳೆಯರು ಜೋರಾಗಿ ನಗುತ್ತಿದ್ದರು. ಎಷ್ಟೇ ನಕ್ಕಿದ್ರೂ ಎಷ್ಟೇ ಕಮೆಂಟ್ ಮಾಡಿದ್ರೂ ದ್ರಾವಿಡ್ ಮಾತ್ರ ತಲೆನೇ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ದ್ರಾವಿಡ್ ಮನದಲ್ಲಿದ್ದದ್ದು ಎರಡೇ ವಿಚಾರಗಳು. ಒಂದು ಜವಾಬ್ದಾರಿ. ಎರಡನೇಯದ್ದು ಕ್ರಿಕೆಟ್ ಮೇಲಿನ ಪ್ರೀತಿ. ಆದ್ರೂ ಗೆಳೆಯರಿಗೆ ಒಂದು ರೀತಿಯ ಕುತೂಹಲ. ಕ್ರಿಕೆಟ್ ಮೇಲಿನ ಅತೀಯಾದ ಪ್ರೀತಿಯಿಂದ ಇವನೇನು ಹುಚ್ಚಾನಾಗಿದ್ದಾನೋ ಎನ್ನುವ ಆತಂಕ. ಹಾಗಂತ ಕೇಳುವ ಧೈರ್ಯ ಹಾಗೂ ಮನಸ್ಸು ಯಾರು ಮಾಡಲಿಲ್ಲ. ಯಾಕಂದ್ರೆ ಸೌಮ್ಯ ಸ್ವಭಾವದ ಹುಡುಗ ಎಲ್ಲಿ ಬೇಜಾರು ಮಾಡ್ಕೊಳ್ಳುತ್ತಾನೋ ಅನ್ನೋ ಭಾವನೆ ದ್ರಾವಿಡ್ ಗೆಳೆಯರದ್ದು.
ಅಷ್ಟಕ್ಕೂ ದ್ರಾವಿಡ್ ಮೇಲೆ ಇಷ್ಟೆಲ್ಲಾ ಅನುಮಾನ ಮೂಡಲು ಕಾರಣ ಏನು ಗೊತ್ತಾ.. ಅದುವೇ ಒಂದು ಗ್ಲೌಸ್ನ್ ಕಥೆ. ರಾಹುಲ್ ದ್ರಾವಿಡ್ ನ ಗ್ಲೌಸ್ ನ ಕಥೆ. ಇದನ್ನು ಕೇಳಿದ್ರೆ ನೀವು ನಕ್ಕು ಬಿಡ್ತೀರಾ. ಕ್ಲಾಸ್ ನಲ್ಲಿ ಗಂಭೀರವಾಗಿ ನೋಟ್ಸ್ ಬರೆಯುತ್ತಿದ್ದ ರಾಹುಲ್ ದ್ರಾವಿಡ್ ಎರಡು ಕೈಗಳಿಗೆ ಗ್ಲೌಸ್ ಹಾಕೊಂಡಿದ್ದರು. ಅಷ್ಟೇನಾ ಅಂತ ಅಂದುಕೊಳ್ಳಬೇಡಿ. ಗ್ಲೌಸ್ ಹಾಕೊಂಡೇ ನೋಟ್ಸ್ ಬರೆಯುತ್ತಿದ್ದರು. ಇದನ್ನು ನೋಡಿದ್ದ ಕ್ಲಾಸ್ ಹುಡುಗರು ಬಿಡಿ ಯಾರು ಬೇಕಾದ್ರೂ ಒಂದು ಕ್ಷಣ ಜೋರಾಗಿ ನಗಬಹುದು.
ಆದ್ರೂ ದ್ರಾವಿಡ್ ಗೆಳೆಯರಿಗೆ ಏನೋ ಒಂಥರಾ ಕುತೂಹಲ. ಕೊನೆಗೂ ದ್ರಾವಿಡ್ ಬಳಿ ಗ್ಲ್ಯಾಸ್ ವಿಚಾರವಾಗಿ ಕೇಳಿಯೇ ಬಿಡ್ತಾರೆ. ಆದ್ರೆ ರಾಹುಲ್ ಮಾತ್ರ ಉತ್ತರ ನೀಡುವುದಿಲ್ಲ. ಆಗ ರಾಹುಲ್ ದ್ರಾವಿಡ್ ಅವರ ಆಪ್ತ ಸ್ನೇಹಿತ ಆದರ್ಶ್ ಬಂದು, ಏನೋ ಅನುಪಮಾಳನ್ನು ಇಂಪ್ರೇಸ್ ಮಾಡೋದಕ್ಕೆ ಈ ಪ್ಲ್ಯಾನ್ ಮಾಡ್ಕೊಂಡಿದ್ದೀಯಾ ಹೆಂಗೇ ಅಂತ ಅಣಕಿಸುತ್ತಾರೆ. (ಅನುಪಮಾ ದ್ರಾವಿಡ್ ಕ್ಲಾಸ್ ನಲ್ಲಿದ್ದ ಚೆಂದದ ಹುಡುಗಿ) ಅದಕ್ಕೂ ದ್ರಾವಿಡ್ ಗಂಭೀರವಾಗಿಯೇ ಉತ್ತರ ನೀಡುತ್ತಾರೆ. ಅವಳೇ ಇಂಪ್ರೇಸ್ ಆಗಿದ್ದಾಳೆ. ನನಗೆ ಇಂಪ್ರೇಸ್ ಮಾಡುವ ಅಗತ್ಯ ಇಲ್ಲ ಎಂದು ಕಡ್ಡಿ ಮುರಿದಂಗೆ ದ್ರಾವಿಡ್ ಹೇಳುತ್ತಾರೆ.
ಕೊನೆಗೆ ದ್ರಾವಿಡ್ ಬಂದು ಆದರ್ಶ್ ಬಳಿ ನಿನ್ನ ನೋಟ್ಸ್ ಪುಸ್ತಕ ಕೊಡ್ತಿಯಾ. ನಾನು ಝೆರಾಕ್ಸ್ ಮಾಡಿಕೊಳ್ಳುತ್ತೇನೆ ಅಂತ ಕೇಳ್ತಾರೆ. ಆಗ ಆದರ್ಶ್ ನೋಟ್ಸ್ ಕೊಡುತ್ತೇನೆ. ಆದ್ರೆ ಗ್ಲೌಸ್ ಹಾಕೊಂಡು ಯಾಕೆ ಬರೆಯುತ್ತಿದ್ದಿಯಾ ? ಲೆಕ್ಟರ್ ನೋಟ್ಸ್ ಡಿಕ್ಟೇಟ್ ಮಾಡುವಾಗಲೂ ಗ್ಲ್ಯಾಸ್ ಹಾಕೊಂಡೇ ಬರೆದಿದ್ದಿಯಾ ? ಏನು ನಿನ್ನ ಕಥೆ. ಮೊದಲು ಆ ವಿಚಾರವನ್ನು ಹೇಳು ಅಂತ ದ್ರಾವಿಡ್ ಗೆ ಮರು ಪ್ರಶ್ನೆ ಹಾಕ್ತಾರೆ ಆದರ್ಶ್.
ಕೊನೆಗೂ ರಾಹುಲ್ ದ್ರಾವಿಡ್ ಈ ಕುತೂಹಲಕಾರಿ ಕಥೆಯನ್ನು ಹೇಳಿಯೇ ಬಿಡ್ತಾರೆ. ಆದರ್ಶ್, ನಿನಗೆ ಗೊತ್ತಾ.. ನಾನು ಕಳೆದ ಎರಡು ರಣಜಿ ಪಂದ್ಯಗಳಲ್ಲಿ ಹಳೆಯ ಗ್ಲೌಸ್ಗಳನ್ನು ಹಾಕೊಂಡೇ ಬ್ಯಾಟಿಂಗ್ ಮಾಡಿದ್ದೆ. ಹಳೆಯ ಗ್ಲೌಸ್ ಸಡಿಲವಾಗಿದ್ದರಿಂದ ನಾನು ಎರಡು ಬಾರಿಯೂ ಔಟಾಗಿಬಿಟ್ಟೆ. ಚೆಂಡು ನನ್ನ ಬ್ಯಾಟ್ ಗೆ ಟಚ್ ಆಗದಿದ್ರೂ ವಿಕೆಟ್ ಕೀಪರ್ ಕ್ಯಾಚ್ ಹಿಡಿದಾಗ ಅಂಪೈರ್ ಔಟ್ ಕೊಟ್ಟುಬಿಟ್ರು. ಯಾಕಂದ್ರೆ ನನ್ನ ಗ್ಲೌಸ್ ಸಡಿಲವಾಗಿದ್ದರಿಂದ ಚೆಂಡು ಗ್ಲೌಸ್ ಗೆ ತಾಗುತ್ತಿತ್ತು. ಕೀಪರ್ ಕ್ಯಾಚ್ ಹಿಡಿದಾಗ ಸಹಜವಾಗಿ ಶಬ್ಧದ ಆಧಾರದಲ್ಲಿ ಅಂಪೈರ್ ಔಟ್ ಕೊಟ್ಟುಬಿಟ್ರು. ಆದ್ರೆ ಚೆಂಡು ನನ್ನ ಬ್ಯಾಟ್ ಗೆ ಟಚ್ ಆಗಿಲ್ಲ ಎಂಬ ವಿಚಾರ ನನಗೆ ಮಾತ್ರ ಗೊತ್ತಿದೆ.
ಈಗ ಹೊಸ ಗ್ಲೌಸ್ ತೆಗೆದುಕೊಂಡಿದ್ದೇನೆ. ಅದು ನನಗೆ ಎಡ್ಜೆಸ್ಟ್ ಆಗಬೇಕು. ಅದಕ್ಕಾಗಿ ನಾನು ಕೈಗೆ ಗ್ಲೌಸ್ ಹಾಕೊಂಡಿದ್ದೇನೆ. ಊಟ, ತಿಂಡಿ, ಕ್ಲಾಸ್ನಲ್ಲೂ ಅಷ್ಡೇ ಯಾಕೆ ನಿದ್ದೆ ಮಾಡುವಾಗಲೂ ನಾನು ಗ್ಲೌಸ್ ಹಾಕಿಕೊಳ್ಳುತ್ತೇನೆ.ಇನ್ನು 48 ಗಂಟೆಗಳ ಕಾಲ ನಾನು ಗ್ಲೌಸ್ ಹಾಕೊಂಡಿರುತ್ತೇನೆ. ಮುಂದಿನ ಎರಡು ದಿನಗಳಲ್ಲಿ ಮುಂದಿನ ಪಂದ್ಯಕ್ಕೆ ನಾನು ರೆಡಿಯಾಗಬೇಕು. ಪಂದ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡಬೇಕು. ಯಾವುದೇ ಅಡೆತಡೆ ಇಲ್ಲದೆ ನಾನು ಬ್ಯಾಟಿಂಗ್ ಮಾಡಬೇಕು ಅಂತ ದ್ರಾವಿಡ್ ತನ್ನ ಗ್ಲೌಸ್ನ ಕಥೆಯನ್ನು ಬಿಚ್ಚಿಟ್ಟರು.
ಹಾಗಂತ ಈ ಗ್ಲೌಸ್ ನ ಕಥೆ ಇಷ್ಟಕ್ಕೆ ಮುಗಿಯುವುದಿಲ್ಲ. ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಹೊಸ ಗ್ಲೌಸ್ ಹಾಕೊಂಡು ಬ್ಯಾಟಿಂಗ್ ಮಾಡಿದ್ದ ರಾಹುಲ್ ದ್ರಾವಿಡ್ ಶತಕ ಸಿಡಿಸಿದ್ದರು. ಬಳಿಕ ದೆಹಲಿ ವಿರುದ್ಧದ ಫೈನಲ್ ಪಂದ್ಯದಲ್ಲೂ ಸೆಂಚೂರಿ ದಾಖಲಿಸಿದ್ದರು. ಈ ಎರಡು ಪಂದ್ಯಗಳ ಬ್ಯಾಟಿಂಗ್ ಪ್ರದರ್ಶನದಿಂದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾಗೆ ಎಂಟ್ರಿಯಾದ್ರು. ಲಾಡ್ರ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಆಕರ್ಷಕ 95 ರನ್ ಸಿಡಿಸಿದ್ದರು. ಅದೇ ಪಂದ್ಯದಲ್ಲಿ ಸೌರವ್ ಗಂಗೂಲಿ ಚೊಚ್ಚಲ ಶತಕ ದಾಖಲಿಸಿದ್ದರು. ಅಚ್ಚರಿ ಅಂದ್ರೆ ಕಾಲೇಜ್ ನಲ್ಲಿ ನೋಟ್ಸ್ ಬರೆದಿದ್ದ ಗ್ಲೌಸ್ ನಲ್ಲಿಯೇ ಈ ಮೂರು ಪಂದ್ಯಗಳನ್ನು ಆಡಿದ್ದರು. ಇದು ರಾಹುಲ್ ದ್ರಾವಿಡ್ ಅವರ ಹೊಸ ಗ್ಲೌಸ್ನ ಕಥೆ. ಮುಂದಿನ ಕಥೆ ಏನು ಎಂಬುದು ಕ್ರಿಕೆಟ್ ಇತಿಹಾಸ ಹೇಳುತ್ತಾ ಹೋಗುತ್ತೆ.
ಅದೇನೇ ಇರಲಿ, ಈ ನೈಜ ಕಥೆಯ ನೀತಿಪಾಠ. ಬದುಕಿನಲ್ಲಿ ಜವಾಬ್ದಾರಿ ಇರಬೇಕು. ನಮ್ಮ ತಪ್ಪಿಗೆ ಬೇರೆಯವರನ್ನು ಹೊಣೆ ಮಾಡಬಾರದು. ದ್ರಾವಿಡ್ ಔಟ್ ಆಗಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹಾಗಂತ ಔಟ್ ಅಲ್ಲ ಅಂತ ಅಂಪೈರ್ ಜೊತೆ ವಾದ ಮಾಡಲಿಲ್ಲ. ವಿಕೆಟ್ ಕೀಪರ್ ಕೂಡ ಅಷ್ಟೇ. ಬ್ಯಾಟ್ ಮತ್ತು ಚೆಂಡಿನ ನಡುವೆ ಅಂತರವಿದ್ರೂ ಶಬ್ದ ಬಂದಾಗ ಸಹಜವಾಗಿಯೇ ಅಪೀಲ್ ಮಾಡ್ತಾರೆ. ಅಂಪೈರ್ ಔಟ್ ಕೊಟ್ಟು ಬಿಡ್ತಾರೆ. ಆಗ ಈಗೀನ ರೀತಿಯಲ್ಲಿ ಥರ್ಡ್ ಅಂಪೈರ್ ಇರಲಿಲ್ಲ. ರಣಜಿ ಪಂದ್ಯಗಳಲ್ಲಿ ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ. ಅದ್ರಿಂದ ಅಲ್ಲಿ ರಾಹುಲ್ ದ್ರಾವಿಡ್ ತಪ್ಪು ತನ್ನದೇ ಅಂತ ಅನ್ನಿಸಿಬಿಟ್ಟಿದೆ. ಯಾಕಂದ್ರೆ ಸಡಿಲವಾಗಿರುವ ಗ್ಲೌಸ್ ಹಾಕೊಂಡು ಆಡಿರುವುದು ನನ್ನ ತಪ್ಪು ಅಂತ ಅನ್ನಿಸಬಿಟ್ಟಿದೆ.
ಆದ್ರೆ ದ್ರಾವಿಡ್ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಗ್ಲೌಸ್ ಅನ್ನು 48 ಗಂಟೆಗಳ ಕಾಲ ಹಾಕೊಂಡು ಕ್ಲಾಸ್, ಮನೆ, ನೋಟ್ಸ್ ಬರೆಯುತ್ತಿದ್ದಾಗ ಎಲ್ಲರು ರೇಗಿಸಿದ್ದರು. ಆಗಲೂ ದ್ರಾವಿಡ್ ತಾಳ್ಮೆ ಕಳೆದುಕೊಳ್ಳಲಿಲ್ಲ. ದ್ರಾವಿಡ್ಗೆ ಗೊತ್ತಿತ್ತು. ತನ್ನ ಕ್ರಿಕೆಟ್ ಭವಿಷ್ಯವನ್ನು ಹೀಗೆಯೇ ರೂಪಿಸಿಕೊಳ್ಳಬೇಕು ಅಂತ. ಅದಕ್ಕಾಗಿ ಕ್ರಿಕೆಟ್ ಅನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದರು. ಎಲ್ಲವನ್ನು ತ್ಯಾಗ ಮಾಡಿದ್ದರು. ಬದ್ಧತೆ, ಏಕಾಗ್ರತೆಯಿಂದ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನೆಡೆದರು.
ವಿಶ್ವ ಕ್ರಿಕೆಟ್ನಲ್ಲಿ ಕ್ಲಾಸ್, ಕಮೀಟ್ಮೆಂಟ್, ಕನ್ಸಿಸ್ಟೇನ್ಸಿಯಿಂದಲೇ ಕ್ರಿಕೆಟ್ ಜಗತ್ತು ದ್ರಾವಿಡ್ ದ್ರಾವಿಡ್ಗೆ ಸಲಾಂ ಹೊಡೆಯುತ್ತಿದೆ. ಇದೊಂದು ನೈಜ ಕಥೆ ಅಷ್ಟೇ. ಏನೇ ಆಗ್ಲಿ ನಮ್ಮ ಬದುಕು ನಮ್ಮ ಕೈಯಲ್ಲಿದೆ. ಅದನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಅಷ್ಟೇ