ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಗುರುಗಳು..!
ರಾಹುಲ್ ದ್ರಾವಿಡ್… ಒಬ್ಬ ಆಟಗಾರನಾಗಿ ಟೀಮ್ ಇಂಡಿಯಾದ ಗೋಡೆಯಾಗಿದ್ದರು. ವಿಶ್ವ ಕ್ರಿಕೆಟ್ ನಲ್ಲಿ ದಿ ಗ್ರೇಟ್ ವಾಲ್ ಅಂತನೇ ಫೇಮಸ್ ಆಗಿದ್ದರು. ಅದು ಟೆಸ್ಟ್ ಪಂದ್ಯವೇ ಇರಲಿ, ಏಕದಿನ ಪಂದ್ಯವೇ ಇರಲಿ.. ರಾಹುಲ್ ದ್ರಾವಿಡ್ ಬ್ಯಾಟಿಂಗ್ ಮಾಡುತ್ತಿದ್ರೆ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನಿರಾಳವಾಗಿರುತ್ತಿತ್ತು. ಆದ್ರೆ ಎದುರಾಳಿ ತಂಡ ಸುಸ್ತಾಗುತ್ತಿದ್ದವು. ಈಗ ಅದೆಲ್ಲಾ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿದೆ.
ಇದೀಗ ರಾಹುಲ್ ದ್ರಾವಿಡ್ ಮಾಜಿ ಕ್ರಿಕೆಟಿಗ. ಹಾಗಂತ ಸುಮ್ಮನೆ ಕೂರಲಿಲ್ಲ. ಮನಸ್ಸು ಮಾಡಿದ್ರೆ ಎಸಿ ರೂಮ್ ನಲ್ಲಿ ಕುಳಿತುಕೊಂಡು ಆರಾಮವಾಗಿ ಕ್ರಿಕೆಟ್ ವೀಕ್ಷಣೆ ಮಾಡಿಕೊಂಡು ಇರಬಹುದಿತ್ತು. ಇಲ್ಲ ತನ್ನ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆಯಬಹುದಿತ್ತು.
ಆದ್ರೆ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಪ್ರೀತಿ ಮತ್ತು ಕ್ರಿಕೆಟ್ ಮೇಲಿನ ಬದ್ಧತೆ ಅವರನ್ನು ಸುಮ್ಮನೆ ಕೂರುವಂತೆ ಮಾಡಲಿಲಲ್ಲ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ಕೋಚಿಂಗ್ ಹುದ್ದೆಯನ್ನು.
ಹಾಗೇ ನೋಡಿದ್ರೆ ರಾಹುಲ್ ದ್ರಾವಿಡ್ ಯಾವಾಗಲೋ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಬಹುದಿತ್ತು. ಹಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡಿಕೊಂಡು ಇರಬಹುದಿತ್ತು. ಆದ್ರೆ ದ್ರಾವಿಡ್ ಅದನ್ನು ಮಾಡಲಿಲ್ಲ.
ಬದಲಾಗಿ ದ್ರಾವಿಡ್ ಕಿರಿಯರ ತಂಡಕ್ಕೆ ಕೋಚಿಂಗ್ ನೀಡಲು ಶುರು ಮಾಡಿದ್ರು. 19 ವಯೋಮಿತಿ, ಭಾರತ ಎ ತಂಡದ ಕೋಚ್ ಆಗಿ ಕೆಲಸ ಮಾಡಿದ್ದರು. ಯುವ ಕ್ರಿಕೆಟಿಗರ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ್ರು. ಅವರ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನೆಡೆಸಿದ್ದರು.
ಅದರ ಫಲವೇ ಇವತ್ತಿನ ಬಲಿಷ್ಠ ಟೀಮ್ ಇಂಡಿಯಾ. ಅಷ್ಟೇ ಅಲ್ಲ ಏಕ ಕಾಲಕ್ಕೆ ಎರಡು ಬಲಿಷ್ಠ ತಂಡಗಳನ್ನು ಕಟ್ಟಲು ಬಿಸಿಸಿಐಗೆ ಸಾಧ್ಯವಾಯ್ತು. ಇದು ರಾಹುಲ್ ದ್ರಾವಿಡ್ ಹಿರಿಮೆ..
ಒಬ್ಬ ಕ್ರಿಕೆಟಿಗನಾಗಿ ತಾನು ಅನುಭವಿಸಿದ್ದ ಕಷ್ಟವನ್ನು ಈಗೀನ ಹುಡುಗರು ಪಡಬಾರದು ಅನ್ನೋ ದ್ರಾವಿಡ್ ಅವರ ಮನೋಭಾವನೆಯನ್ನು ಮೆಚ್ಚಲೇಬೇಕು. ತಾವು ಆಡುತ್ತಿರುವಾಗ ಆಧುನಿಕ ಸೌಲಭ್ಯಗಳು ಇರಲಿಲ್ಲ. ಫಿಟ್ ನೆಸ್ ಮಹತ್ವವೂ ಗೊತ್ತಿರಲಿಲ್ಲ. ಜಿಮ್ ನಲ್ಲಿ ಕಸರತ್ತು ನಡೆಸುತ್ತಿರಲಿಲ್ಲ. ಏನಿದ್ರೂ ನೆಟ್ಸ್ ನಲ್ಲಿ ಬೌಲಿಂಗ್ ಮಾಡಬೇಕು. ಬ್ಯಾಟಿಂಗ್ ತಾಲೀಮು ನಡೆಸಬೇಕು. ಮೈದಾನದಲ್ಲಿ ವ್ಯಾಯಮಕ್ಕಾಗಿ ಓಡಾಡಬೇಕಿತ್ತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಫಿಟ್ ನೆಸ್ ಮತ್ತು ಅವರ ತಯಾರಿಯನ್ನು ನೋಡಿಕೊಂಡು ಅಸೂಯೆ ಪಡಬೇಕಾಗಿತ್ತು. ಆದ್ರೆ ದ್ರಾವಿಡ್ ತನ್ನ ಗರಡಿಯಲ್ಲಿ ಪಳಗಿದ ಹುಡುಗರನ್ನು ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನಾಗಿ ರೂಪುಗೊಳ್ಳುವಂತೆ ಮಾಡಿದ್ದಾರೆ. ಇದೀಗ ವಿದೇಶಿಗರೇ ಟೀಮ್ ಇಂಡಿಯಾ ಆಟಗಾರರನ್ನು ನೋಡಿ ಅಸೂಯೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ.
ಅಂದ ಹಾಗೇ ರಾಹುಲ್ ದ್ರಾವಿಡ್ ಅವರಲ್ಲಿ ಇನ್ನೊಂದು ವಿಶೇಷತೆ ಇದೆ. 19 ವಯೋಮಿತಿ ಅಥವಾ ಭಾರತ ಎ ತಂಡ ಪ್ರವಾಸ ಮಾಡುವಾಗ 15 ಆಟಗಾರರು ಇರುತ್ತಿದ್ದರು. ಆದ್ರೆ ಆ ಪ್ರವಾಸದಲ್ಲಿ ತಂಡದಲ್ಲಿರುವ ಎಲ್ಲಾ ಆಟಗಾರರು ಪಂದ್ಯವನ್ನು ಆಡುತ್ತಿದ್ದರು. ಅವರಿಗೆ ಅವಕಾಶವನ್ನು ನೀಡುತ್ತಿದ್ದರು.
ಯಾಕಂದ್ರೆ ರಾಹುಲ್ ದ್ರಾವಿಡ್ ಗೆ ತಾನು ಆಡುತ್ತಿರುವಾಗ ಈ ರೀತಿಯ ಅನುಭವಗಳು ಆಗಿವೆ. ಅದೇ ರೀತಿ ಬೇರೆ ಆಟಗಾರರಿಗೂ ಆಗಿದೆ. ಆಟಗಾರನೊಬ್ಬ ಸರಣಿಗೆ ಆಯ್ಕೆಯಾಗಬೇಕಾದ್ರೆ ಆತ ದೇಶಿ ಪಂದ್ಯಗಳಲ್ಲಿ 700-800 ರನ್ ಗಳನ್ನು ದಾಖಲಿಸಬೇಕಿತ್ತು. ಕಷ್ಟಪಟ್ಟು ರನ್ ಗಳಿಸಿ ತಂಡಕ್ಕೆ ಆಯ್ಕೆಯಾದಾಗ ಆತನಿಗೆ ಆಡುವ ಅವಕಾಶ ಸಿಗುತ್ತಿರಲಿಲ್ಲ. ಸರಣಿಯ ನಂತರ ಆತ ಮತ್ತೆ ದೇಶಿ ಪಂದ್ಯಗಳನ್ನು ಆಡಬೇಕು. ಆಗ ಆತನಿಗೆ ಅವಕಾಶ ಸಿಗೊತ್ತೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ 15 ಆಟಗಾರರು ಬಲಿಷ್ಠವಾಗಿರುವಾಗ ಎಲ್ಲಾ ಆಟಗಾರರಿಗೂ ಅವಕಾಶ ನೀಡುವ ದ್ರಾವಿಡ್ ಅವರ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು.
ಇದೀಗ ರಾಹುಲ್ ದ್ರಾವಿಡ್ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ಗುರುವಾಗಿದ್ದಾರೆ. ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿ ಜುಲೈ 13ರಿಂದ ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ.
ತಂಡದಲ್ಲಿ ನಾಯಕ ಶಿಖರ್ ಧವನ್ ಬಿಟ್ಟು ಉಳಿದವರೆಲ್ಲಾ ಯುವ ಆಟಗಾರರೇ. ಹೆಚ್ಚಿನ ಆಟಗಾರರು ದ್ರಾವಿಡ್ ಗರಡಿಯಲ್ಲಿ ಪಳಗಿದವರೇ. ಹೀಗಾಗಿ ದ್ರಾವಿಡ್ ಅವರ ಮಾರ್ಗದರ್ಶನ ಟೀಮ್ ಇಂಡಿಯಾದ ಭವಿಷ್ಯದ ಆಟಗಾರರಿಗೆ ಮತ್ತೆ ಸಿಗಲಿದೆ.
ಒಟ್ಟಾರೆ, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಗೋಡೆ ಮಾತ್ರವಲ್ಲ. ಇದೀಗ ಪೌಂಡೇಷನ್ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ವಿಶ್ವ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಯಶಸ್ಸಿನ ಗೋಪುರವನ್ನು ಕಟ್ಟುತ್ತಿದ್ದಾರೆ. ಅದಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯುವ ಕ್ರಿಕೆಟಿಗರನ್ನು ರೆಡಿ ಮಾಡುತ್ತಿದ್ದಾರೆ.