ಮುಂಬೈ : ಭಾರತ ಕ್ರಿಕೆಟ್ ಕಂಡ ಬೆಸ್ಟ್ ಟೆಸ್ಟ್ ಬ್ಯಾಟ್ಸ್ ಮನ್ ಯಾರು..? ಈ ಪ್ರಶ್ನೆಗೆ ಅಲ್ಪಸ್ವಲ್ಪ ಕ್ರಿಕೆಟ್ ಗಂಧ ಗೊತ್ತಿರೋರು ಹೇಳೋ ಉತ್ತರ ಸಚಿನ್ ಅಂತಾ.. ಈಗಿನ ಜಮಾನದರವಾದರೇ ವಿರಾಟ್ ಹೆಸರೇಳುವರು. ಆದ್ರೆ ಕಳೆದ 50 ವರ್ಷದಲ್ಲಿ ಟೀಂ ಇಂಡಿಯಾ ಬೆಸ್ಟ್ ಬ್ಯಾಟ್ಸ್ಮನ್ ಯಾರು ಎಂಬ ಪ್ರಶ್ನೆ ನೀಡಿ ವಿಸ್ಡನ್ ಇಂಡಿಯಾ ನಡೆಸಿದ ಪೋಲ್ ನಲ್ಲಿ ಅಭಿಮಾನಿಗಳು ಅಚ್ಚರಿಯ ಉತ್ತರ ನೀಡಿದ್ದಾರೆ.
ಈ ಸಮೀಕ್ಷೆಯಲ್ಲಿ ಸಚಿನ್, ಸುನಿಲ್ ಗವಾಸ್ಕರ್, ವಿರಾಟ್ ಅವರನ್ನು ಹಿಂದಿಕ್ಕಿ ಗ್ರೇಟ್ ವಾಲ್ ರಾಹುಲ್ ಡ್ರಾವಿಡ್ ಮೊದಲ ಸ್ಥಾನ ಪಡೆದಿದ್ದಾರೆ.
ಹೌದು..! ವಿಸ್ಟನ್ ಇಂಡಿಯಾ ಪೋಲ್ ನಲ್ಲಿ 11,400 ಮಂದಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ಇದರಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಶೇ.52 ಮಂದಿ ಮತ ಹಾಕಿದ್ದಾರೆ. ಇದರೊಂದಿಗೆ ಈ ಪೋಲ್ ನಲ್ಲಿ ರಾಹುಲ್ ದ್ರಾವಿಡ್ ಗೆಲುವು ಸಾಧಿಸಿ, ಕಳೆದ 50 ವರ್ಷದಲ್ಲಿ ಟೀಂ ಇಂಡಿಯಾ ಬೆಸ್ಟ್ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ಪೋಲ್ ನ ಅಂತಿಮ ಹಂತದವರೆಗೂ ಸಚಿನ್ ಪೈಪೋಟಿ ನೀಡಿದ್ದರೂ ಕೊನೆಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕೊಹ್ಲಿ, ಗವಾಸ್ಕರ್ ಅವರು ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.
ಭಾರತ ಪರ 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳನ್ನಾಡಿ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ.