“ನಾನು ಏನು ಹೇಳ್ತೇನೋ ಅದನ್ನ ಮಾಡ್ತೇನೆ… ವಿಶ್ವಾಸ ಉಳಿಸಿಕೊಳ್ತೇನೆ” : ರಾಹುಲ್ ಗಾಂಧಿ
ಗೋವಾ: ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿಜೆಪಿ ಹಾಗೂ ಇತರೇ ಪಕ್ಷಗಳು ಈಗಿನಿಂದಲೇ ಬಿರುಸಿನ ಪ್ರಚಾರವನ್ನ ಆರಂಭಿಸಿವೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗೋವಾಗೆ ತೆರಳಿ ಭರ್ಜರಿ ಪ್ರಚಾರ ಮಾಡಿದ್ದಾರೆ. ದಕ್ಷಿಣ ಗೋವಾದಲ್ಲಿ ಮೀನುಗಾರರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಜನರಲ್ಲಿ ಏಕತೆ ಮೂಡಿಸುವಲ್ಲಿ ಮತ್ತು ಎಲ್ಲರನ್ನೂ ಒಟ್ಟಾಗಿ ಮುಂದೆ ಕರೆದುಕೊಂಡು ಹೋಗುವಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಕಾಂಗ್ರೆಸ್ ಪ್ರೀತಿಯನ್ನು ಪ್ರಸರಿಸುತ್ತದೆ.
ಆದರೆ ಬಿಜೆಪಿ ಜನರ ಮಧ್ಯೆ ದ್ವೇಷ ಹುಟ್ಟಿಸುತ್ತಿದೆ. ಸಮುದಾಯಗಳನ್ನು ಇಬ್ಭಾಗ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ನಾನು ನನ್ನ ಸಮಯ ಹಾಳು ಮಾಡಿಕೊಳ್ಳಲೂ ಇಲ್ಲಿಗೆ ಬಂದಿಲ್ಲ. ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲ ಕೇವಲ ನಮ್ಮ ಬದ್ಧತೆಯಲ್ಲ. ನಿಶ್ಚಿತವಾಗಿಯೂ ನಡೆಸಿಕೊಡುತ್ತೇವೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನನಗೆ ತುಂಬ ಮುಖ್ಯ. ಉಳಿದ ನಾಯಕರಂತೆ ನಾನೂ ಸಹ ಇರಲು ಸಾಧ್ಯವಿಲ್ಲ. ನಾನೇನಾದರೂ ಹೇಳಿದ್ದೇನೆ ಅಂದರೆ ಅದನ್ನು ನಾನು ಮಾಡೇ ಮಾಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಗೋವಾವವನ್ನು ಕಲ್ಲಿದ್ದಲು ಗಣಿಗಾರಿಕೆ ಹಬ್ ಮಾಡಲು ಅವಕಾಶ ಕೊಡುವುದಿಲ್ಲ. ಅದಕ್ಕೆ ನೀವು ಸಹಕರಿಸಬೇಕು. ನಾನೀಗ ಹೇಳಿದ್ದನ್ನು ಮಾಡುತ್ತೇನೆ. ಇಲ್ಲದೆ ಇದ್ದರೆ ನಾನು ಮುಂದೆ ಇನ್ನೊಮ್ಮೆ ಬರುವಷ್ಟರಲ್ಲಿ ನೀವೆಲ್ಲ ನನ್ನ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುತ್ತೀರಿ ಎಂದಿದ್ಧಾರೆ. ಈ ಮೂಲಕ ಡಬಲ್ ಮಾಡುವ ಯೋಜನೆಯನ್ನು ವಿರೋಧಿಸುತ್ತಿರುವ ಅಲ್ಲಿನ ಮೀನುಗಾರರಿಗೆ ಬೆಂಬಲಕ್ಕೆ ನೀಡುವ ಭರವಸೆಯನ್ನು ನೀಡಿದ್ದಾರೆ.