ಸಾರ್ವಜನಿಕ ರ್ಯಾಲಿಗಳನ್ನ ರದ್ದುಗೊಳಿಸಿ ಮಾದರಿಯಾದ ರಾಹುಲ್..!!
ಕೋಲ್ಕತ್ತಾ : ದೇಶದಲ್ಲಿ ಕೊರೊನಾ ಎರಡನೇ ಅಲೆ ಯಾವುದೇ ಮುಲಾಜಿಲ್ಲದೇ ಸಿಕ್ಕ ಸಿಕ್ಕ ದೇಹಗಳನ್ನ ಹೊಕ್ಕಿ ಮರಣ ಮೃದಂಗ ಬಾರಿಸುತ್ತಾ ಸಾಗುತ್ತಿದೆ. ಪ್ರತಿ ದಿನ ದೇಶದಲ್ಲಿ ಕೊರೊನಾ ಸ್ಫೋಟವಾಗುತ್ತಿದ್ದರೂ ಸಹ, ಚುನಾವಣಾ ಪ್ರಚಾರ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಪಾಠ ಮಾಡುವ ರಾಜಕೀಯ ನಾಯಕರೇ ಬೃಹತ್ ಚುನಾವಣಾ ರ್ಯಾಲಿಗಳನ್ನ ನಡೆಸಿ ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ.
ಅದರಲ್ಲೂ ಎಲ್ಲರಿಗೂ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಿದ್ದ ಆಡಳಿತರೂಡ ಪಕ್ಷಗಳು, ಕೇವಲ ಅಧಿಕಾರ ಹಿಡಿಯೋದು ತಮ್ಮ ಗುರಿ ಎಂಬಂತೆ ಕೊರೊನಾವನ್ನು ಲೆಕ್ಕಿಸದೇ ಬೃಹತ್ ರ್ಯಾಲಿಗಳನ್ನ ನಡೆಸುತ್ತಿದ್ದಾರೆ. ಇದರ ಪರಿಣಾಮದ ಬಗ್ಗೆ ಅರಿವಿದ್ದರೂ ಕೂಡ ರಾಜಕೀಯ ಕೊಚ್ಚೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಇತ್ತ ಆಡಳಿತ ಪಕ್ಷಗಳ ನಡೆಯನ್ನ ರಚನಾತ್ಮಕವಾಗಿ ಟೀಕೆ ಮಾಡಬೇಕಿದ್ದ ವಿಪಕ್ಷಗಳು ಕೂಡ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ರಾಜಕೀಯ ನಾಯಕರ ಈ ವರ್ತನೆಯಿಂದ ಜನರಲ್ಲೂ ಕೊರೊನಾ ಬಗ್ಗೆ ಅಸಡ್ಡೆ ಮೂಡುವಂತಾಗಿದೆ. ಆದ್ರೆ ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಪ್ರಚಾರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರದ್ದು ಮಾಡಿರುವುದಾಗಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲ ರಾಜಕೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ನಾನು ಸಲಹೆ ನೀಡುತ್ತಿದ್ದೇನೆ. ನಾನು ಎಲ್ಲ ಸಾರ್ವಜನಿಕ ರ್ಯಾಲಿಗಳನ್ನು ಬಂದ್ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಇತರ ನಾಯಕರಿಗೆ ಮಾದರಿಯಾಗಿದ್ದಾರೆ.










