ನವದೆಹಲಿ : ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರಾ ರಾಹುಲ್ ಗಾಂಧಿ..? ಸದ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಪ್ರಶ್ನೆ ಇದು.. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡ ಕಾರಣಕ್ಕಾಗಿ ಅಧ್ಯಕ್ಷ ಪಟ್ಟಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ.
ಆದ್ರೆ ಇದೀಗ ಮತ್ತೆ ರಾಹುಲ್ ಗಾಂಧಿ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಬೇಕು ಅನ್ನೋ ಕೂಗು ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಲ ತಿಂಗಳುಗಳ ಕಾಲ ಮೌನವಾಗಿದ್ದ ರಾಹುಲ್ ಗಾಂಧಿ, ಕೊರೊನಾ, ಚೀನಾ ಗಡಿ ಕಿರಿಕ್ ವಿಚಾರದಲ್ಲಿ ಮತ್ತೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರುವ ಮೂಲಕ ಸದ್ದು ಮಾಡುತ್ತಿದ್ದಾರೆ. ಲಾಕ್ ಡೌನ್ ನಲ್ಲಿ ಸರಣಿ ಸುದ್ದಿಗೋಷ್ಠಿ, ಆರ್ಥಿಕ ಕುಸಿತದ ಬಗ್ಗೆ ಅರ್ಥತಜ್ಞರ ಜೊತೆ ಚರ್ಚಿಸಿ ಫುಲ್ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಚೀನಾ ಗಡಿ ಕಿರಿಕ್ ವಿಚಾರವಾಗಿ ಕಳೆದ 15 ದಿನಗಳಿಂದ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನ ನಿರಂತರವಾಗಿ ಟೀಕೆ ಮಾಡುತ್ತಿದ್ದಾರೆ.
ಇದೇ ಕಾರಣಕ್ಕಾಗಿ ಮತ್ತೆ ರಾಹುಲ್ ಗಾಂಧಿ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಬೇಕು ಅನ್ನೋ ಕೂಗು ಮುನ್ನೆಲೆಗೆ ಬಂದಿದೆ.
ರಾಹುಲ್ ಪರ ಅಶೋಕ್ ಗೆಹ್ಲೋಟ್ ಬ್ಯಾಟಿಂಗ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರಂತೆ.
ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ನ ಕಾರ್ಯಕಾರಣಿ ಸಭೆ ನಡೆಯಿತು. ಈ ಸಭೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಹುಲ್ ಗಾಂಧಿ ಮತ್ತೆ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಬೇಕು ಅನ್ನೋ ಧ್ವನಿಯನ್ನ ಎತ್ತಿದ್ದಾರೆ ಎನ್ನಲಾಗಿದೆ. ಅಶೋಕ್ ಗೆಹ್ಲೋಟ್ ಅವರ ಈ ಮಾತಿಗೆ ಯುವ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಕೂಡ ಬೆಂಬಲಿಸಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಲೋಕ ಕದನದಲ್ಲಿ ಪಕ್ಷ ಸೋಲುಂಡ ಕಾರಣಕ್ಕೆ ನೈತಿಕ ಜವಾಬ್ದಾರಿ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಗಾಂಧಿ, ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರಾ ಎಂಬೋದನ್ನ ಕಾದು ನೋಡಬೇಕಾಗಿದೆ.