ತಿರುವನಂತಪುರಂ : ಕೊರೊನಾ ಲಾಕ್ ಡೌನ್ ಹಿನ್ನೆಲೆ ಕೇರಳದಲ್ಲಿ ಆನ್ ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಅಲ್ಲಿನ ಸರ್ಕಾರ ಫಸ್ಟ್ ಬೆಲ್ ಎಂಬ ಕಾರ್ಯಕ್ರಮದಡಿ ಆನ್ಲೈನ್ ತರಗತಿಗಳನ್ನು ನಡೆಸುತ್ತಿದೆ. ಕೆಐಟಿಇ ವಿಕ್ಟರ್ಸ್ ಸೇರಿದಂತೆ ವಿವಿಧ ಟಿವಿ ಚಾನೆಲ್ಗಳಲ್ಲಿ ಈ ತರಗತಿಗಳು ನೇರ ಪ್ರಸಾರವಾಗುತ್ತದೆ. ಆದ್ರೆ ಅಲ್ಲಿನ ಆದಿವಾಸಿಗಳ ಬಳಿ ಟಿವಿ ಇಲ್ಲದ ಕಾರಣ, ಆದಿವಾಸಿ ವಿದ್ಯಾರ್ಥಿಗಳು ತರಗತಿಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಇದರ ಮಾಹಿತಿ ಪಡೆದ ವಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಆದಿವಾಸಿ ವಿದ್ಯಾರ್ಥಿಗಳ ಆನ್ ಲೈನ್ ತರಗತಿಗಾಗಿ 175 ಸ್ಮಾರ್ಟ್ ಟಿವಿಗಳನ್ನು ನೀಡಿದ್ದಾರೆ.
ಈ ಕುರಿತು ರಾಹುಲ್ ಗಾಂಧಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರವನ್ನು ಬರೆದು ಆದಿವಾಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ಹೇಳಿದ್ದರು. ಅದರಂತೆ ಬುಧವಾರ 175 ಟಿವಿಗಳನ್ನು ವಿದ್ಯಾರ್ಥಿಗಳಿಗಾಗಿ ರಾಹುಲ್ ಗಾಂಧಿ ಕಳುಹಿಸಿಕೊಟ್ಟಿದ್ದಾರೆ. ಇದಲ್ಲದೇ ರಾಹುಲ್ ಗಾಂಧಿ ತಮ್ಮ ಜನ್ಮದಿನಾಚರಣೆ ದಿನವಾದ ಜೂನ್ 19ರಂದು ಕೂಡ 50 ಟಿವಿಗಳನ್ನು ಕಳುಹಿಸಿಕೊಟ್ಟಿದ್ದರು.
ಇದಕ್ಕೂ ಮುನ್ನ ರಾಹುಲ್ ಗಾಂಧಿ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆನ್ಲೈನ್ ಶಿಕ್ಷಣಕ್ಕಾಗಿ ಎಷ್ಟು ಮನೆಗಳಿಗೆ ಟಿವಿ, ಸ್ಮಾರ್ಟ್ ಪೋನ್ ಅಗತ್ಯವಿದೆ ಎಂದು ವರದಿ ಕೇಳಿದ್ದರು. ಜಿಲ್ಲಾಡಳಿತ ಆದಿವಾಸಿಗಳು ಇರುವ ಮನೆಗಳ ಪಟ್ಟಿಯನ್ನು ಕಳುಹಿಸಿಕೊಟ್ಟಿತ್ತು. ಇದೀಗ ರಾಹುಲ್ ಗಾಂಧಿ ಟಿವಿ ಗಳನ್ನು ಕಳುಹಿಸಿಕೊಟ್ಟಿದ್ದು, ಅವು ಆದಿವಾಸಿಗಳ ಮನೆ ಸೇರಲಿವೆ.