Rain in Karnataka – ವರುಣನ ಆರ್ಭಟ; ಕರಾವಳಿ ಜಿಲ್ಲೆಗಳಲ್ಲಿ 3 ದಿನ ರೆಡ್ ಅಲರ್ಟ್…
ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಮುಂಗಾರು ತೀವ್ರಗೊಂಡಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕರಾವಳಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪಶ್ಚಿಮಘಟ್ಟದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಕುಮಾರಪರ್ವತದ ಸುಬ್ರಹ್ಮಣ್ಯ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಕುಮಾರಧಾರ – ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ, ಕುಮಾರಧಾರ ನದಿಯ ಉಪನದಿ ದರ್ಪಣ ತೀರ್ಥ ಸೇತುವೆ ಸಹ ಮುಳುಗಡೆಯಾಗಿದೆ. ದರ್ಪಣ ತೀರ್ಥ ಸೇತುವೆಯಿಂದ ಸುಮಾರು 200 ಮೀಟರ್ ದೂರದವರೆಗೆ ಹೆದ್ದಾರಿ ರಸ್ತೆ ಜಲಾವೃತವಾಗಿದೆ.
ಆಗುಂಬೆ ಘಾಟ್ ನಲ್ಲಿ ಭೂ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಈ ಪ್ರದೇಶಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಘಾಟ್ ನ 11 ಹಾಗೂ 12ನೇ ತಿರುವಿನಲ್ಲಿ ಉಂಟಾಗಿರುವ ಬಿರುಕು ಹಾಗೂ ರಸ್ತೆ ಕುಸಿತವನ್ನು ಪರಿಶೀಲಿಸಿದರು. ಆದಷ್ಟು ಬೇಗ ದುರಸ್ಥಿ ಕಾರ್ಯ ಕೈಗೊಂಡು, ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.