ಮಡಿಕೇರಿ: ರಾಜ್ಯದ ಮಲೆನಾಡು ಜಿಲ್ಲೆಗಳು ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಕ್ರಮೇಣ ಹೆಚ್ಚುತ್ತಿದ್ದು, ಮನೆಯೊಂದರ ಮೇಲೆ ಮಣ್ಣು ಕುಸಿದಿರುವ ಘಟನೆ ನಡೆದಿದೆ.
ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದ ಶ್ಯಾಂ ಎಂಬುವವರ ಮನೆಯ ಹಿಂಭಾಗದ ಧರೆಯ ಮಣ್ಣು ಕುಸಿದಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ 5 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಅವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದು, ಉಳಿದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಬುಧವಾರದ ನಂತರ ಕೊಡಗು ಜಿಲ್ಲೆಯ ಹಲವಡೆಗೆ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಕೂಡಲೇ ಮಡಿಕೇರಿ ಪೊಲೀಸರಿಗೆ ವಿಷಯ ಮುಟ್ಟಿಸಲಾಯತು. ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ತಂಡ, ಭೂ ವಿಜ್ಞಾನಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಈ ಪ್ರದೇಶದಲ್ಲಿ ಅಪಾಯದ ಮುನ್ಸೂಚನೆ ಅರಿತ ಅಧಿಕಾರಿಗಳು ಬಡಾವಣೆಯಲ್ಲಿದ್ದ ಐದು ಕುಟುಂಬಗಳನ್ನು ಸ್ಥಳಾಂತರಕ್ಕೆ ನಿರ್ದೇಶನ ನೀಡಿದರು. ಆನಂತರ 5 ಮನೆಗಳಿದ್ದವರನ್ನು ಮುಂಜಾಗೃತ ಕ್ರಮವಾಗಿ ಸ್ಥಳಾಂತರಿಸಲಾಯಿತು.
500 ಮನೆಗಳಿಗೆ ನೋಟಿಸ್
ಮಡಿಗೇರಿ ನಗರದ ತಗ್ಗು ಪ್ರದೇಶದ ನಿವಾಸಿಗಳು ಮನೆ ಖಾಲಿ ಮಾಡಿಕೊಂಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಕ್ಕೆ ತೆರಳುವಂತೆ ನಗರಸಭೆ 500 ಮನೆಗಳಿಗೆ ನೋಟಿಸ್ ನೀಡಿದೆ.
ಚಾಮುಂಡೇಶ್ವರಿ ನಗರ ಸೇರಿದಂತೆ ಅಪಾಯದ ಪ್ರದೇಶಗಳೆಂದು ಗುರುತಿಸಿರುವ ಪ್ರದೇಗಳ ಜನರು ಸಹ ಸುರಕ್ಷಿಂತ ಸ್ಥಳಗಳಿಗೆ ತೆರಳಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
2018ರಲ್ಲಿಮಹಾಮಳೆಗೆ ಸಿಲುಕಿ ಮನೆ ಕಳೆದುಕೊಂಡ 122 ಕುಟುಂಬಗಳಿಗೆ ಜಂಬೂರುವಿನಲ್ಲಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಕೆಲವರು ನಾವು ಇಲ್ಲೆ ಇರುತ್ತೇವೆ ಎಂದು ಹಠ ಹಿಡಿದಿದ್ದಾರೆ. ಆದರೆ, ಅಪಾಯದ ಬಗ್ಗೆ ಅಧಿಕಾರಿಗಳು ಮನವೊಲಿಸಿ ಸ್ಥಳಾಂತರಕ್ಕೆ ಮುಂದಾಗುತ್ತಿದ್ದಾರೆ.








