ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಜಕೀಯ ರಾಜಾಹುಲಿ Saaksha Tv
ಬೆಂಗಳೂರು: ರಾಜಕೀಯದ ರಾಜಾಹುಲಿ ಈಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸದಾ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರು ಈಗ ಬಣ್ಣದ ಲೋಕದಲ್ಲಿ, ಬಣ್ಣ ಹಚ್ಚಿದ್ದಾರೆ. ಹೌದು ಬಿ. ಎಸ್. ಯಡಿಯೂರಪ್ಪ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದು ತನುಜಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇವರೊಂದಿಗೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಕೂಡಾ ಬಣ್ಣ ಹಚ್ಚಿದ್ದು ಶನಿವಾರ ಮೊದಲ ದಿನ ಅವರ ಭಾಗದ ಚಿತ್ರೀಕರಣ ಯಶಸ್ವಿಯಾಗಿ ನಡೆದಿದ್ದು, ಅದ್ಭುತವಾಗಿ ನಟಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನೈಜ ಘಟನೆ ಆಧಾರಿತವಾದ ಚಿತ್ರಕ್ಕೆ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ.ಹಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ.
ಕೊರೊನಾ ಮೊದಲನೇ ಅಲೆಯಲ್ಲಿ ಯಡಿಯುರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಸನ್ನಿವೇಶವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಬಿಎಸ್ವೈ ಅವರೇ ಸಿಎಂ ಆಗಿದ್ದ ವೇಳೆ ತನುಜಾ ಎಂಬ ಹೆಣ್ಣುಮಗಳು ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆ ತೋಡಿಕೊಂಡಿದ್ದಳು.
ಬಳಿಕ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದಿದ್ದಳು. ನಂತರ ನೀಟ್ ಪರೀಕ್ಷೆ ಪಾಸಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು. ತನುಜಾ ಸುಮಾರು 350 ಕಿ.ಮೀ ದೂರದಿಂದ ಬಂದು ಪರೀಕ್ಷೆ ಬರೆದಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಇದನ್ನೇ ಒನ್ಲೈನ್ ಸ್ಟೋರಿ ಮಾಡಿಕೊಂಡು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದೆ.









