ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಬಂಧ ದೆಹಲಿಗೆ ಹಾರಲು ಸಜ್ಜಾಗಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದೆ. ಹೀಗಾಗಿ ಸಂಪುಟ ಸೇರಿ ಸಚಿವರಾಗುವ ಕನಸು ಕಾಣುತ್ತಿದ್ದ ಆಕಾಂಕ್ಷಿಗಳಿಗೆ ತಣ್ಣೀರೆರಚಿದಂತಾಗಿದೆ.
ರಾಜ್ಯದಲ್ಲಿ ಪ್ರವಾಹದಿಂದ ನಷ್ಟಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಆಗ್ರಹಿಸುವುದರ ಜೊತೆ ಜೊತೆಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್‍ನಿಂದ ಗ್ರೀನ್ ಸಿಗ್ನಲ್ ಪಡೆಯುವುದು ಯಡಿಯೂರಪ್ಪ ಅವರ ಪ್ಲಾನ್ ಆಗಿತ್ತು. ಕಳೆದ ವಾರ ದೆಹಲಿಗೆ ಹೋಗುತ್ತಿರುವ ಬಗ್ಗೆ ಮಾತನಾಡಿದ್ದರು.
ಆದರೆ, ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆ ಸದ್ಯಕ್ಕೆ ಇಲ್ಲ. ಈ ಸಂಬಂಧ ದೆಹಲಿಗೆ ಹೋಗಲು ತೀರ್ಮಾನಿಸಿಲ್ಲ. ಯಾರ ಭೇಟಿಗೂ ದಿನಾಂಕ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.
ಡ್ರಗ್ಸ್ ಜಾಲದ ಭೇದಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ. ಪ್ರತಿಷ್ಠಿತರು ಯಾರೇ ಇರಲಿ, ಬಿಗಿ ಕ್ರಮಕೈಗೊಳ್ಳಲಾಗುವುದು. ಯಾವುದೇ ಒತ್ತಡಕ್ಕೆ ಮಣಿಯದೆ ಪಿಡುಗು ಹತ್ತಿಕ್ಕುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಎಸ್‍ವೈ ಹೇಳಿದ್ದಾರೆ.
ಆದರೆ, ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಒತ್ತಡ ಹೆಚ್ಚುತ್ತಿದೆ. ಸರ್ಕಾರ ರಚನೆಗೆ ವಲಸೆ ಬಂದ ಶಾಸಕರಿಂದಲೂ ಸಿಎಂ ಮೇಲೆ ಒತ್ತಡ ಹೆಚ್ಚಾಗಿದೆ. ಮೊದಲು ಕೊರೊನಾ ಕಾರಣಕ್ಕೆ ಮುಂದಕ್ಕೆ ಹೋಗಿದ್ದ ಸಂಪುಟ ವಿಸ್ತರಣೆ ಸರ್ಕಸ್ ಹಲವು ನೆಪಗಳನ್ನು ಮುಂದಿಟ್ಟುಕೊಂಡು ಮುಂದಕ್ಕೆ ಹೋಗುತ್ತಿರುವುದು ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದೆ.