ಬೆಂಗಳೂರು : ದೇಶದಲ್ಲಿ ಕೊರೊನಾ ವೈರಸ್ ಹೆಮ್ಮಾರಿಯಾಗಿ ಕಾಡುವ ಮುನ್ನ ಯಡಿಯೂರಪ್ಪ ಅವರ ಸ್ಥಾನ ಅಲುಗಾಡುತ್ತಿತ್ತು. ಅವರ ವಯಸ್ಸು ಮತ್ತು ಇತರೆ ಆಂತರಿಕ ವಿಚಾರವಾಗಿ ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಸ್ವತಃ ಬಿಎಸ್ ವೈ ಕೂಡ ಚಿಂತಿತರಾಗಿದ್ದು ಎದ್ದು ಕಾಣುತ್ತಿತ್ತು. ಆದ್ರೆ ಇದೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.
ಕೊರೊನಾ ವೈರಸ್ ಸಂದಿಗ್ಧ ಪರಿಸ್ಥಿತಿಯ ಕಾಲದಲ್ಲಿ ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವಂತೆ ತೋರುತ್ತಿದೆ. ತಮ್ಮ ಸ್ಥಾನದಿಂದ ನಿರ್ಗಮಿಸಿ ವಿಶ್ರಾಂತಿಗೆ ತೆರಳಲಿದ್ದಾರೆ ಎಂದು ಎದ್ದಿದ್ದ ಎಲ್ಲ ಊಹಾಪೋಹಗಳಿಗೆ 78 ವರ್ಷದ ಬಿಜೆಪಿಯ ಹಿರಿಯ ಕಟ್ಟಾಳು ಕಳೆದ 50 ದಿನಗಳಲ್ಲಿ ಸಾಧಿಸಿದ ವಿಜಯಗಳಿಂದ ತೆರೆ ಎಳೆದಿದ್ದಾರೆ.
ಚತುರ ರಾಜಕಾರಣಿ ಹಾಗೂ ಅನುಭವಿ ಆಡಳಿತಗಾರರಾದ ಯಡಿಯೂರಪ್ಪ ಅವರು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿಯೇ ಬಳಸಿಕೊಂಡಿದ್ದಾರೆ. ಆರಂಭಿಕ ಕೆಲ ಅಡೆತಡೆಗಳನ್ನು ಹೊರತುಪಡಿಸಿ, ನಂತರದಲ್ಲಿ ಇಡೀ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಅಂದಿನಿಂದ ಕೊರೊನಾ ಯುದ್ಧದಲ್ಲಿ ಮುಂದಾಳತ್ವ ವಹಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ರಾಜ್ಯಕ್ಕೆ ಕೊರೊನಾ ವೈರಸ್ ಸೋಂಕು ಕಾಲಿಟ್ಟ ಕೂಡಲೇ ಅಲರ್ಟ್ ಆದ ಬಿಎಸ್ ವೈ, ಅಂದಿನಿಂದ ಇಂದಿನ ವರೆಗೂ ಯುವ ನಾಯಕರನ್ನೂ ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟ ಸಮಯದಲ್ಲಿ ಎಲ್ಲರೂ ಒಂದಾಗಿ ಸಾಗುವಂತೆ ಮೊದಲು ಎಲ್ಲ ಪಕ್ಷಗಳ ಪ್ರಮುಖ ಮುಖಂಡರೊಂದಿಗೆ ಸಿಎಂ ಸಭೆ ನಡೆಸಿದರು. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಜಕೀಯ ಬೇಡ. ಈ ಬಿಕ್ಕಟ್ಟಿನಲ್ಲಿ ಏಕ ವ್ಯಕ್ತಿಗೆ ಸ್ಥಾನವಿಲ್ಲ ಎಂದು ಘೋಷಿಸಿದರು. ಇಲ್ಲಿ ಬಿಎಸ್ ವೈ ಅವರ ಬುದ್ಧಿವಂತ ನಡೆ ಉದ್ವಿಗ್ನತೆಯನ್ನು ತಗ್ಗಿಸಿತು ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ಅವರಿಗೆ ಸಂಪೂರ್ಣ ಬೆಂಬಲ ನೀಡುವಂತೆ ಮಾಡಿತು.
ದೃಢವಾದ ಹೆಜ್ಜೆ ಇಟ್ಟು ಘರ್ಜಿಸಿದ ರಾಜಾಹುಲಿ
ಮೊದಲೇ ಕೊರೊನಾ ಸಂಕಷ್ಟದಿಂದ ತಲೆಕೆಡಿಸಿಕೊಂಡಿದ್ದ ಸಿಎಂಗೆ ತಬ್ಲಿಘಿ ಜಮಾತ್ ಸಭೆ ಮತ್ತಷ್ಟು ಸಂಕಷ್ಟ ತಂದೊಡ್ಡಿತು. ಅದರಲ್ಲೂ ತಬ್ಲಿಘಿ ಜಮಾತ್ ಸಭೆ ಒಂದು ಕೋಮಿನ ವಿಚಾರವಾಗಿ ತಿರುಗಿದಾಗ ಸಿಎಂ ಬಿಎಸ್ ವೈ ಇಟ್ಟ ದೃಢವಾದ ಹೆಜ್ಜೆ ಎಲ್ಲರ ಪ್ರಶಂಸೆಗೆ ಕಾರಣವಾಯಿತು. ಮಾರಕ ಕೊರೊನಾ ವೈರಸ್ ಹರಡುವಿಕೆಯಲ್ಲಿ ಒಂದು ಸಮುದಾಯವನ್ನು ಗುರಿಮಾಡಿ, ದೂಷಿಸುವುದು ತಪ್ಪು ಎಂದು ಸಿಎಂ ಘೋಷಿಸಿದರು. ಮಾಧ್ಯಮಗಳಿಗೆ ಸರಣಿ ಸಂದರ್ಶನ ನೀಡಿ, ತಮ್ಮ ದೃಢ ನಿಲುವು ವ್ಯಕ್ತಪಡಿಸಿದರು. ಕೋಮುವಾದ ಹರಡುವವರು ಯಾರೇ ಆದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದರು. ಇದು ತಮ್ಮದೇ ಪಕ್ಷದ ಕೆಲ ಉಗ್ರ ಹಿಂದೂವಾದಿಗಳ ಕೋಪಕ್ಕೂ ಕಾರಣವಾಯಿತು.
ಇಲ್ಲಿ ಬಿಎಸ್ ವೈ ತೆಗೆದುಕೊಂಡ ನಿರ್ಧಾರ, ನಡೆದುಕೊಂಡ ರೀತಿಗೆ ವಿಪಕ್ಷಗಳು ತಲೆಬಾಗಿದವು. ಅಲ್ಲದೆ
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪಕ್ಷಬೇದ ಮರೆತು ಈ ವಿಚಾರದಲ್ಲಿ ಬಿಎಸ್ ವೈ ಬೆನ್ನಿಗೆ ನಿಂತರು. ಕೆಲವು ದಿನಗಳ ನಂತರ ಪ್ರಧಾನಿ ಮೋದಿ ಮತ್ತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಬಿಎಸ್ ವೈ ಅವರ ನಿಲುವನ್ನು ಸಮರ್ಥಿಸಿಕೊಂಡರು.
ಹೀಗೆ ತಮ್ಮ ಚಾಣಾಕ್ಷತೆಯಿಂದ ಸದ್ಯದ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿರುವ ಸಿಎಂ ಬಿಎಸ್ ವೈ, ಕೊರೊನಾ ಹೋರಾಟದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ “ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೇ ನಮ್ಮಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇರುವುದು, ಆಸ್ಪತ್ರೆಯಿಂದ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿರುವುದೇ ಉದಾಹರಣೆ.
ಒಟ್ಟಾರೆ ಲಾಕ್ ಡೌನ್ ಮುಂಚಿನ ದಿನಗಳಲ್ಲಿ ಬಿಎಸ್ ವೈ ಅವರನ್ನು ಕೆಳಗಿಳಿಸಲು ಪಕ್ಷದೊಳಗಿನ ಶತ್ರುಗಳು ಅವರ ವಿರುದ್ಧ ಅಪಪ್ರಚಾರ ಆರಂಭಿಸಿದ್ದರು. ಆದರೆ, ಬಿಎಸ್ ವೈ ಅವರು ತಮ್ಮ ಹಳೆ ಶೈಲಿಯ ರಾಜಕಾರಣ ಮತ್ತು ಘನತೆಯಿಂದ ಹೋರಾಡುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.