ದುಬೈನಲ್ಲಿ ಸಿಕ್ಸರ್ ಕಿಂಗ್ ಗಳ ಫೈಟ್
ದುಬೈನಲ್ಲಿ ಇಂದು ಸಿಕ್ಸರ್ ಕಿಂಗ್ ಗಳ ಫೈಟ್ ನಡೆಯಲಿದೆ. 14ನೇ ಆವೃತ್ತಿಯ ಐಪಿಎಲ್ ನಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಭಾರತದಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ 8 ಪಂದ್ಯಗಳಲ್ಲಿ 57 ಸಿಕ್ಸರ್ ಸಿಡಿಸಿತ್ತು. ರಾಯಲ್ಸ್ ಏಳೇ ಏಳು ಪಂದ್ಯಗಳಲ್ಲಿ 52 ಬಾರಿ ಬೌಂಡರಿ ಕ್ಲೀಯರ್ ಮಾಡಿತ್ತು. ಇನ್ನೂ ಇಂಟರೆಸ್ಟಿಂಗ್ ಅಂದ್ರೆ ಡೆತ್ ಓವರ್ಗಳಲ್ಲಿ 20 ಸಿಕ್ಸರ್ ಸಿಡಿಸಿದ್ದ ರಾಯಲ್ಸ್ ಡೇಂಜರಸ್ ತಂಡವಾಗಿ ಕಾಣಿಸಿಕೊಂಡಿತ್ತು. ಅಂಕಪಟ್ಟಿಯಲ್ಲೂ ಅಷ್ಟೇ. ಎರಡೂ ತಂಡಗಳ ನಡುವೆ ಹೆಚ್ಚಿನ ಅಂತವಿಲ್ಲ. ರಾಯಲ್ಸ್ 7 ಪಂದ್ಯಗಳಲ್ಲಿ 3 ಗೆದ್ದು 6 ಪಾಯಿಂಟ್ಗಳಿಂದಿಗೆ 5ನೇ ಸ್ಥಾನದಲ್ಲಿದೆ. ಪಂಜಾಬ್ 8 ಪಂದ್ಯಗಳನ್ನು ಆಡಿ 3 ಪಂದ್ಯಗಳನ್ನು ಗೆದ್ದು 6 ಪಾಯಿಂಟ್ ಗಳಿಸಿಕೊಂಡು 6 ಸ್ಥಾನದಲ್ಲಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮುಂದಕ್ಕೆ ಹೋಗಲು ಎರಡೂ ತಂಡಗಳಿಗೆ ಇದು ದೊಡ್ಡ ಅವಕಾಶ. ಅದರಲ್ಲೂ ಪಂಜಾಬ್ ಕಿಂಗ್ಸ್ ಒಂದು ಪಂದ್ಯ ಹೆಚ್ಚೇ ಆಡಿರುವುದರಿಂದ ಗೆಲುವು ಅನಿವಾರ್ಯ ಅನ್ನುವ ಹಾಗಾಗಿದೆ.
ಟೀಮ್ ಕಾಂಬಿನೇಷನ್ ಲೆಕ್ಕಾಚಾರದಲ್ಲಿ ಸಿಕ್ಸ್ ಹಿಟ್ಟರ್ಗಳ ದೊಡ್ಡ ಲೈನ್ ಅಪ್ ಇದೆ. ಪಂಜಾಬ್ಗೆ ಕ್ಯಾಪ್ಟನ್ ರಾಹುಲ್, ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡ ಮತ್ತು ಶಾರೂಖ್ ಖಾನ್ ಬಲವಿದೆ. ಮೊಹಮ್ಮದ್ ಶಮಿ ಬೌಲಿಂಗ್ ಲೀಡರ್ ಆಗಿದ್ದಾರೆ. ಅವರ ಜೊತೆ ಡೆತ್ ಓವರ್ ಸ್ಪೆಷಲಿಸ್ಟ್ ನಾಥನ್ ಎಲ್ಲಿಸ್ ಮೊದಲ ಪಂದ್ಯ ಆಡುವ ಬಗ್ಗೆ ಚರ್ಚೆ ಆಗುತ್ತಿದೆ. ಅರ್ಶದೀಪ್ ಸಿಂಗ್ ಕೂಡ ಸ್ವಿಂಗ್ ಮೂಲಕ ಕಾಡುವ ಬೌಲರ್. ರವಿ ಬಿಷ್ಣೋಯಿ ಸ್ಪಿನ್ ಬೌಲಿಂಗ್ನ ಟ್ರಂಪ್ ಕಾರ್ಡ್. ಫಾಬಿಯನ್ ಅಲೆನ್ ಅಥವಾ ಆದಿಲ್ ರಶೀದ್ ಕೂಡ ಪ್ಲೇಯಿಂಗ್ IXನಲ್ಲಿ ಆಡುವ ಸಾಧ್ಯತೆ ಇದೆ.
ರಾಜಸ್ತಾನ್ ಲೈನ್ ಅಪ್ ಕೂಡ ಸಿಕ್ಸ್ ಹಿಟ್ಟರ್ಗಳ ಲೈನ್ ಅಪ್ ಹೊಂದಿದೆ. ಹೊಸದಾಗಿ ತಂಡ ಸೇರಿಕೊಂಡಿರುವ ಎವಿನ್ ಲೆವಿಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೌಲರ್ಗಳ ಬೆವರಿಳಿಸಿದ್ದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್, ಕ್ಯಾಪ್ಟನ್ ಸಂಜು ಸ್ಯಾಮ್ಸನ್, ಲಿಯಮ್ ಲಿವಿಂಗ್ ಸ್ಟೋನ್, ರಿಯಾನ್ ಪರಾಗ್, ಶಿವಂ ದುಬೆ, ಕ್ರಿಸ್ ಮೊರಿಸ್, ರಾಹುಲ್ ತಿವಾಟಿಯಾ ತನಕ ಬ್ಯಾಟ್ಸ್ಮನ್ಗಳೇ. ಕಾರ್ತಿಕ್ ತ್ಯಾಗಿ, ಮುಸ್ತಫಿಝರ್ ರೆಹಮಾನ್ ಮತ್ತು ಚೇತನ್ ಸಕಾರಿಯಾ ಮಾತ್ರ ಅಷ್ಟಾಗಿ ಬ್ಯಾಟಿಂಗ್ ಮಾಡಿಲ್ಲ. ಬೌಲಿಂಗ್ ವಿಭಾಗವೂ ಆಲ್ರೌಂಡರ್ಗಳಿಂದ ತುಂಬಿರುವುದರಿಂದ ರಾಜಸ್ತಾನ್ ಕೂಡ ಬಲಿಷ್ಟವಾಗಿ ಕಾಣುತ್ತದೆ.
ದುಬೈ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಿಚ್ ಮೇಲೂ ನಾಯಕರ ಕಣ್ಣಿದೆ. ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಮಾಡ್ತಾರೆ ಅನ್ನುವ ಇತಿಹಾಸವನ್ನು ಈ ಕ್ರೀಡಾಂಗಣ ಹೊಂದಿದೆ.









