ಉಡುಪಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೇ ದೇಶದಿಂದ ಕೊರೊನಾ ದೂರವಾಗಲ್ಲ. ಬಿಜೆಪಿಗರು ಅವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣವನ್ನು ಸ್ವಾಗತಿಸುತ್ತೇವೆ. ಭವ್ಯವಾದ ರಾಮ ಮಂದಿರ ನಿರ್ಮಾಣ ಆಗಲಿ. ಮಂದಿರಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಉದ್ದೇಶ ದುರುಪಯೋಗ ಆಗುವುದು ಬೇಡ ಎಂದು ಬಿಜೆಪಿಗರ ವಿರುದ್ಧ ಹರಿಹಾಯ್ದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೊರೊನಾ ಚಿಕಿತ್ಸಾ ಸಾಮಗ್ರಿಗಳ ಖರೀದಿಯಲ್ಲಿ ವ್ಯಾಪಕ ಲೂಟಿಯಾಗಿದೆ. ಕಾಂಗ್ರೆಸ್ ಆರೋಪ ಮಾಡಿ 25 ದಿನವಾದರೂ ಉತ್ತರ ಸಿಕ್ಕಿಲ್ಲ. ಯಾವುದೇ ಮಾಹಿತಿ ವಿಪಕ್ಷ ನಾಯಕರಗೆ ಬಂದಿಲ್ಲ. ಸುಮಾರು ಎರಡು ಸಾವಿರ ಕೋಟಿ ರೂ.ಗಳನ್ನು ಬಿಜೆಪಿ ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಆರೋಪದ ಬಗ್ಗೆ ಪ್ರಶ್ನೆ ಮಾಡಿದರೆ ಲೀಗಲ್ ನೋಟಿಸ್ ಕೊಡುತ್ತಾರೆ. ಧೈರ್ಯ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಿ ಎಂದು ಸವಾಲ್ ಹಾಕಿದ ದಿನೇಶ್, ಕಾಂಗ್ರೆಸ್ ಕೋರ್ಟ್ ಮೂಲಕ ಹೋರಾಟ ಮಾಡುತ್ತದೆ. ವ್ಯಾಪಕ ಖರೀದಿಯ ಸಮಗ್ರ ತನಿಖೆಯಾಗಲಿ. ಕೊರೊನಾ ಸಲಕರಣೆ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.