ವಿಂಬಲ್ಡನ್ ಅಂಗಣದಲ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ..!
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಸೋಲಿನ ನಂತರ ಸ್ವಲ್ಪ ಬಿಡುವಿನಲ್ಲಿದೆ. ಇಂಗ್ಲೆಂಡ್ ನಲ್ಲಿರುವ ಟೀಮ್ ಇಂಡಿಯಾ ಆಟಗಾರರು ಸೋಲಿನ ಕಹಿಯನ್ನು ನಿಧಾನವಾಗಿ ಮರೆಯುತ್ತಿದ್ದಾರೆ.
ಮುಂದಿನ ತಿಂಗಳಿಂದ ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಸದ್ಯ ಬಿಡುವಿನಲ್ಲಿರುವ ಟೀಮ್ ಇಂಡಿಯಾ ಆಟಗಾರರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಇಂಗ್ಲೆಂಡ್ ನ ನೆಚ್ಚಿನ ತಾಣಗಳಿಗೆ ಭೇಟಿ ಕೊಟ್ಟು ಎಂಜಾಯ್ ಕೂಡ ಮಾಡುತ್ತಿದ್ದಾರೆ. ರಿಷಬ್ ಪಂತ್ ಸೇರಿದಂತೆ ಒಂದಿಬ್ಬರು ಆಟಗಾರರು ಯೂರೋಕಪ್ ಫುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ.
ಅದರ ಜೊತೆಗೆ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಅವರು ವಿಂಬಲ್ಡನ್ ಟೂರ್ನಿಯತ್ತ ಚಿತ್ತವನ್ನಿಟ್ಟಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್ ನ ಸೆಂಟರ್ ಕೋರ್ಟ್ ನಲ್ಲಿ ನಡೆದಿದ್ದ ರೋಜರ್ ಫೆಡರರ್ ಮತ್ತು ರಿಚರ್ಡ್ ಗಾಸ್ಕ್ವೆಟ್ ನಡುವಿನ ಪಂದ್ಯವನ್ನು ರವಿಶಾಸ್ತ್ರಿ ವೀಕ್ಷಣೆ ಮಾಡಿದ್ದಾರೆ. ಸೆಂಟರ್ ಕೋರ್ಟ್‍ನ ಗ್ಯಾಲರಿಯಲ್ಲಿ ತೆಗೆದ ಫೋಟೋ ವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ.
ಅಂದ ಹಾಗೇ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಟ್ರೆಂಟ್ ಬ್ರಿಡ್ಜ್ ನ ನ್ಯಾಟಿಂಗ್ ಹ್ಯಾಮ್ ನಲ್ಲಿ ಆಗಸ್ಟ್ 4ರಿಂದ ಆರಂಭವಾಗಲಿದೆ. ಬಹುಶಃ ಇದು ಹೆಡ್ ಕೋಚ್ ರವಿಶಾಸ್ತ್ರಿ ಅವರ ಕೊನೆಯ ವಿದೇಶಿ ಸರಣಿಯೂ ಆಗಲಿದೆ.
ಬಿಸಿಸಿಐ ಈಗಾಗಲೇ ರವಿಶಾಸ್ತ್ರಿ ಅವರ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಪೂರಕವಾಗಿ ಟೀಮ್ ಇಂಡಿಯಾದ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿದೆ.








