RBI ನಿಂದ ರೆಪೋ ದರ ಏರಿಕೆ – ಸಾಲದ ಮೇಲಿನ ಬಡ್ಡಿದರ, EMI ಹೆಚ್ಚಳ…
ಭಾರತೀಯ ರಿಸರ್ವ್ ಬ್ಯಾಂಕ್ – RBI ಇಂದು ತನ್ನ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೋ ದರವನ್ನು ಶೇಕಡ 4.40ರಿಂದ 4.90ಕ್ಕೆ ಹೆಚ್ಚಿಸಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ , ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿರುವ ಹಲವು ಪ್ರಮುಖ ನಿರ್ಧಾರಗಳನ್ನು ಇಂದು ಘೋಷಿಸಿದ್ದು, ಮುಖ್ಯವಾಗಿ ರೆಪೋ ದರದಲ್ಲಿ 50 ಬೇಸಿಸ್ ಅಂಕಗಳನ್ನು ಹೆಚ್ಚಳ ಮಾಡುವುದರೊಂದಿಗೆ ರೆಪೋ ದರ ಶೇಕಡ 4.90 ಗೆ ಏರಿಕೆಯಾಗಿದೆ ಎಂದು ತಿಳಿಸಿದರು.
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಹಣದುಬ್ಬರ ಹೆಚ್ಚಾಗಿದೆ ಎಂದು ತಿಳಿಸಿದ ಅವರು, ದುಬಾರಿಯನ್ನು ನಿಯಂತ್ರಣದಲ್ಲಿಡುವುದು ನಮ್ಮ ಉದ್ದೇಶವಾಗಿದೆ. ಪ್ರಸ್ತುತ ದೇಶದ ಹಣದುಬ್ಬರ ಶೇಕಡ 6ರಷ್ಟಿದ್ದು, 2022-23ನೇ ಸಾಲಿನಲ್ಲಿ ಇದು ಶೇಕಡ 6.7ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಭಾರತದ ಅರ್ಥ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಲಾಗಿದ್ದು, ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.
ರೆಪೋ ದರ ಏರಿಕೆಗೂ ಮತ್ತು EMI ಗೂ ಸಂಪರ್ಕ
ರೆಪೊ ದರ ಎಂಬುದು ಬ್ಯಾಂಕ್ಗಳು ಆರ್ಬಿಐನಿಂದ ಸಾಲವನ್ನು ಪಡೆಯುವ ದರವಾಗಿದೆ, ಆರ್ಬಿಐ ರೆಪೊ ದರವನ್ನು ಕಡಿಮೆ ಮಾಡಿದಾಗ, ಬ್ಯಾಂಕ್ಗಳು ಬಡ್ಡಿದರಗಳನ್ನು ಕಡಿಮೆ ಮಾಡುತ್ತವೆ. ಅಂದರೆ, ಗ್ರಾಹಕರಿಗೆ ನೀಡುವ ಸಾಲದ ಮೇಲೆ ಬಡ್ಡಿ ದರಗಳು ಕಡಿಮೆ ಇರುತ್ತದೆ. ಹಾಗೆಯೇ ಇಎಂಐ ಕೂಡ ಕಡಿಮೆಯಾಗುತ್ತದೆ. ಅದೇ ರೀತಿ, ರೆಪೋ ದರದಲ್ಲಿ ಹೆಚ್ಚಳವಾದಾಗ, ಗ್ರಾಹಕರ ಮೇಲೆ ಬಡ್ಡಿದರ ಹೆಚ್ಚಳವಾಗುತ್ತದೆ. ಇದರಿಂದ ಗ್ರಾಹಕರಿಗೆ ಸಾಲ ಮತ್ತು EMI ಹೆಚ್ಚಿನ ಹೊರೆಯಾಗಿ ಪರಿಣಾಮಿಸುತ್ತದೆ. ಏಕೆಂದರೆ ವಾಣಿಜ್ಯ ಬ್ಯಾಂಕುಗಳು ಹೆಚ್ಚಿನ ಬೆಲೆಗೆ ಕೇಂದ್ರ ಬ್ಯಾಂಕ್ನಿಂದ ಹಣವನ್ನು ಪಡೆಯುತ್ತವೆ, ಇದರ ಬಡ್ಡಿ ಪರಿಣಾಮ ಜನ ಸಾಮಾನ್ಯರ ಮೇಲೆ ಬೀಳಲಿದೆ.
ರೆಪೋ ದರ ಏರಿಕೆ ಮಾಡಿರುವ ಕಾರಣ ಗೃಹ, ವಾಹನ ಸಾಲ ಪರ್ಸನಲ್ ಲೋನ್ ಗಳ ಬಡ್ಡಿ ದರ ಮತ್ತು EMI ನ ಮೊತ್ತ ಹೆಚ್ಚವಾಗಲಿದೆ.