RCB ಪ್ಲೇ ಆಫ್ಸ್ ಲೆಕ್ಕಾಚಾರ ಹೇಗಿದೆ ಗೊತ್ತಾ..?
ವರ್ಷದಿಂದ ವರ್ಷಕ್ಕೆ ಆಟಗಾರರ ಬದಲಾದ್ರೂ, ಜೆರ್ಸಿ ಬದಲಾದ್ರೂ, ಕೊನೆಗೆ ನಾಯಕ ಬದಲಾದ್ರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಸೀಬು ಮಾತ್ರ ಬದಲಾಗುತ್ತಿಲ್ಲ.
ತಂಡದಲ್ಲಿ ಎಷ್ಟೇ ಮ್ಯಾಚ್ ವಿನ್ನರ್ ಗಳಿದ್ದರೂ, ಪವರ್ ಪ್ಯಾಕ್ಡ್ ಆಟಗಾರರಿದ್ದರೂ ಬೆಂಗಳೂರು ತಂಡ ಮಾತ್ರ ಪ್ರತಿಬಾರಿ ಪ್ಲೇ ಆಫ್ಸ್ ಗೆ ತಲುಪಲು ಪರದಾಟ ನಡೆಸುತ್ತಲೇ ಇದೆ.
ಅದರ ಮುಂದುವರೆದ ಭಾಗವಂತೆ ಈ ಬಾರಿ ಕೂಡ ಆರ್ ಸಿಬಿಯ ಹಣೆಬರಹ ಬದಲಾಗಿಲ್ಲ. ತಂಡದಲ್ಲಿ ಫಾಫ್ ಡುಪ್ಲಸಿಸ್, ವಿರಾಟ್ ಕೊಹ್ಲಿ, ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ರಂತಹ ಬ್ಯಾಟರ್ ಗಳು, ಹೆಜಲ್ ವುಡ್, ವನಿಂದು ಹಸರಂಗ ಅವರಂತಹ ವಿಶ್ವ ಶ್ರೇಷ್ಠ ಬೌಲರ್ ಗಳು ಇದ್ದರೂ ಹ್ಯಾಟ್ರಿಕ್ ಸೋಲು ಕಂಡು ಡೋಲಾಯಮಾನ ಸ್ಥಿತಿಯಲ್ಲಿದೆ.
ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದ ಆರ್ ಸಿಬಿ ತಂಡ, ಆರಂಭದಲ್ಲಿ ಪಂದ್ಯವೊಂದನ್ನು ಸೋತು ನಂತರ ಹ್ಯಾಟ್ರಿಕ್ ಜಯ ಸಾಧಿಸಿ ಮೆರೆದಿತ್ತು.
ಆದ್ರೆ ಇದೀಗ ಹ್ಯಾಟ್ರಿಕ್ ಸೋಲುಂಡು ಪ್ಲೇ ಆಫ್ ಪ್ರವೇಶ ಗಿಟ್ಟಿಸಿಕೊಳ್ಳಲು ಪರದಾಡುತ್ತಿದೆ.
ಹೈದರಾಬಾದ್ ತಂಡದ ವಿರುದ್ಧ ಆರ್ ಸಿಬಿ ಸೋತಿದ್ದೇ ಸೋತಿದ್ದು, ಅಲ್ಲಿಂದ ಗೆಲ್ಲೋ ಮ್ಯಾಚ್ ಗಳನ್ನ ಕೂಡ ಬೆಂಗಳೂರು ತಂಡದ ಕೈ ಚೆಲ್ಲುತ್ತಿದೆ.
ಎಸ್ ಆರ್ ಹೆಚ್ ವಿರುದ್ಧ ಹೀನಾಯವಾಗಿ ಸೋತ ಆರ್ ಸಿಬಿ, ನಂತರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಗೆಲ್ಲುವ ಅವಕಾಶವನ್ನು ಕೈ ತಪ್ಪಿಸಿಕೊಂಡು ಸೋಲನ್ನು ಅನುಭವಿಸಿತ್ತು.
ಇದಾದ ಬಳಿಕ ಗುಜರಾತ್ ಟೈಟನ್ಸ್ ತಂಡದ ವಿರುದ್ಧವೂ ಅಂತಿಮ ಹಂತದಲ್ಲಿ ಎಡವಿ ಸೋಲನ್ನು ಅನುಭವಿಸಿ ಹ್ಯಾಟ್ರಿಕ್ ಸೋಲನ್ನು ಕಂಡಿದೆ.
ಹೀಗಾಗಿ ಆರ್ ಸಿಬಿ ಪ್ಲೇ ಆಫ್ಸ್ ಗೆ ಹೋಗುತ್ತೋ ಇಲ್ಲವೋ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಹಾಗಾದ್ರೆ ಬೆಂಗಳೂರು ತಂಡ ಪ್ಲೇ ಆಫ್ಸ್ ಗೆ ತಲುಪುವ ಚಾನ್ಸಸ್ ಹೇಗಿದೆ.. ಅಂತ ನೋಡೋದಾದ್ರೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿದ 4 ಪಂದ್ಯಗಳ ಪೈಕಿ ಮೂರರಲ್ಲಿ ಗೆಲ್ಲಬೇಕು. ಹಾಗೇ ಕೇವಲ ಗೆಲುವು ಸಾಧಿಸಿದರೆ ಪ್ಲೇ ಆಫ್ ಪ್ರವೇಶ ಸುಲಭವಾಗಿಬಿಡುವುದಿಲ್ಲ.
ಬದಲಾಗಿ ಈ 3 ಗೆಲುವುಗಳು ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಆಗ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸುವ ಹಾದಿ ಸುಗಮವಾಗಲಿದೆ.
ಏಕೆಂದರೆ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ರನ್ ರೇಟ್ -0.558 ರಷ್ಟು ಇದೆ. ಈ ಕಾರಣ ಇತರೆ ತಂಡಗಳಿಗೆ ಪೈಪೋಟಿ ನೀಡಿ ಟಾಪ್ 4ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದರೆ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾಗಿದೆ.
ಅಥವಾ ಇನ್ನುಳಿದ 4 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿಯೂ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸುಲಭವಾಗಿ ಪ್ಲೇಆಫ್ ಪ್ರವೇಶಿಸಲಿದೆ.
ಒಂದು ವೇಳೆ ಆರ್ ಸಿಬಿ ತಂಡ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದರೇ ಅಲ್ಲಿಗೆ ಈ ಸಲನೂ ಕಪ್ ನಮ್ಮದಾಗಲ್ಲ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ಪಂದ್ಯಗಳಲ್ಲಿ ಸೋತರೆ ತಂಡದ ನೆಟ್ ರನ್ ರೇಟ್ ಕಡಿಮೆಯಾಗಲಿದೆ.
ಒಂದುವೇಳೆ ಇತರೆ ತಂಡಗಳಷ್ಟೇ ಅಂಕಗಳನ್ನು ಪಡೆದುಕೊಂಡರೂ ನೆಟ್ ರನ್ ರೇಟ್ ಕೊರತೆಯಿಂದ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಳ್ಳಲಿದೆ.
ಹೀಗಾಗಿ ಆರ್ ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಬೇಕಾದರೆ ಇರುವ ಏಕೈಕ ಮಾರ್ಗವೆಂದರೆ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕು.. ಇಲ್ಲಾ ನಾಲ್ಕಕ್ಕೆ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕು.









