ಸೂತಕ ಮನೆಯಾಗಿದೆ ನಮ್ಮ ಬೆಂಗಳೂರು..! ಮನಸಾರೆ ಸಂಭ್ರಮಿಸಿಬೇಕಿದ್ದ ಆರ್ ಸಿಬಿ ಅಭಿಮಾನಿಗಳ ಕಣ್ಣಲ್ಲಿ ರಕ್ತ ಕಣ್ಣೀರು..! ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಆನಂದಭಾಷ್ಟ ಸುರಿಸಿದ್ದ ಆಟಗಾರರ ಕಂಗಳಲಿಲ್ಲ ಪಸೆ ಒಂಚೂರು..! 18 ವರ್ಷಗಳ ಕನಸು ನನಸಾದ ಸಂತೋಷದ ಕ್ಷಣ ಕೇವಲ 18 ಗಂಟೆಗಳಲ್ಲಿ ನುಚ್ಚುನೂರು..! ಹುಚ್ಚು ಅಭಿಮಾನದ ಅಂಧಾಭಿಮಾನಕ್ಕೆ 11 ಮಂದಿ ಅಮಾಯಕ ಅಭಿಮಾನಿಗಳ ಬಲಿ..! ಈ 11 ಮಂದಿಯ ಸಾವಿಗೆ ಉತ್ತರ ಕೊಡುವವರು ಯಾರು..? ಖಂಡಿತವಾಗಿಯೂ ಇಲ್ಲ.. ಯಾರು ಇಲ್ಲ ನಮ್ಮವರು..!
ಯಾವುದಕ್ಕೂ ಒಂದು ಇತಿ ಮಿತಿ ಅಂತ ಇರಬೇಕು. ಅದು ಯಾವತ್ತೂ ಅತಿರೇಕಕ್ಕೆ ಹೋಗಬಾರದು. ಅಭಿಮಾನ, ಪ್ರೀತಿ, ನಿಯತ್ತು, ಸಂಭ್ರಮ ಎಲ್ಲವೂ ಗೆರೆ ದಾಟಿ ಹೋಗಬಾರದು. ಅತೀಯಾದ ನಂತರ ಅಮೃತವೂ ವಿಷವಾಗುತ್ತೆ ಅಂತರಲ್ಲ.. ಹಾಗೇ ಇಲ್ಲಿ ಕೂಡ ಆಗಿದ್ದು ಅದೇ..! ಹುಚ್ಚು ಅಭಿಮಾನ, ಪ್ರಚಾರದ ಗೀಳು ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದು ಮಾತ್ರ ದೊಡ್ಡ ದುರಂತ. ಇಲ್ಲಿ ಯಾರನ್ನು ಪ್ರಶ್ನೆ ಮಾಡೋದು..? ಪ್ರಶ್ನೆ ಮಾಡಿದ್ರೂ ಹೋದ ಜೀವ ಮತ್ತೆ ಬರುತ್ತಾ..? ಸಾವಿಗೀಡಾದವರ ಮನೆಯವರಿಗೆ ಎಷ್ಟೇ ಸಾಂತ್ವನ ಹೇಳಿದ್ರೂ ಈ ಒಂದು ದುರ್ಘಟನೆ ಜೀವನ ಪರ್ಯಂತ ಕಾಡದೇ ಇರುತ್ತಾ..? ಆರ್‍ಸಿಬಿ ಚೊಚ್ಚಲ ಪ್ರಶಸ್ತಿ ಗೆದ್ದಾಗ ನನ್ನ ಮನೆ ಮಗ, ನನ್ನ ಮನೆ ಮಗಳನ್ನು ಬಲಿತೆಗೆದುಕೊಂಡಿತ್ತು ಎಂಬ ಕಳಂಕ ಇದ್ದೇ ಇರುತ್ತೆ ಅಲ್ವಾ..?
ಈಗ ಅನ್ನಿಸುತ್ತಿದೆ.. ಯಾವ ಖುಷಿಗೆ ಆರ್ ಸಿಬಿ ಐಪಿಎಲ್ ಟ್ರೋಫಿ ಗೆಲ್ಲಬೇಕಿತ್ತು ಅಂತ ? ಗೆಲ್ಲದೇ ಇರುತ್ತಿದ್ರೆ ಪಾಪ 11 ಮಂದಿಯ ಜೀವವಾದ್ರೂ ಉಳಿಯುತ್ತಿತ್ತು. ಅಭಿಮಾನಿಗಳು ರಸ್ತೆಗೆ ಬಂದು ವಿನಾಕಾರಣ ಶವವಾಗುತ್ತಿರಲಿಲ್ಲ. ಮನೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು, ಪ್ರತಿ ದಿನ ಕಣ್ಣೀರಿನ ಜೀವನ ನಡೆಸುವುದು ತಪ್ಪಿ ಹೋಗ್ತಿತ್ತು. ಮುಂದಿನ ಸಲ ಕಪ್ ನಮ್ದೆ ಅಂತ ಸಮಾಧಾನಪಟ್ಟುಕೊಳ್ಳುತ್ತಿದ್ರು ಏನೋ..? ಓ ವಿಧಿಯೇ ನೀನು ಎಷ್ಟೂ ಕ್ರೂರಿ..?
ಆದ್ರೆ ಇಲ್ಲಿ ತಪ್ಪು ಯಾರದ್ದು..? ಈ ಘನಘೋರ ದುರಂತಕ್ಕೆ ಹೊಣೆ ಯಾರು..? ಯಾರಿಂದಾಗಿ ಈ ದುರ್ಘಟನೆ ನಡೆಯಿತು.? ಸಂಭ್ರಮಾಚರಣೆಯನ್ನು ಗಡಿಬಿಡಿಯಲ್ಲಿ ಮಾಡುವ ಅಗತ್ಯವಾದ್ರೂ ಏನಿತ್ತು..? ಕಪ್ ನಮ್ಮ ಕೈಯಲ್ಲೇ ಇರುವಾಗ ತರಾತುರಿಯಲ್ಲಿ ಆಟಗಾರರನ್ನು ಸನ್ಮಾನಿಸಿದ್ದು ಯಾಕೆ..? ಅವರೇನೂ ಕಪ್ ಹಿಡಿದುಕೊಂಡು ಓಡಿ ಹೋಗುತ್ತಿದ್ರಾ..?
ಅಷ್ಟಕ್ಕೂ ಈ ಅವಘಢ ನಡೆದಿರುವುದಾದ್ರೂ ಹೇಗೆ..? ನಿಖರವಾದ ಉತ್ತರ ಯಾರ ಬಳಿಯೂ ಇಲ್ಲ..! ರಾಜ್ಯ ಸರ್ಕಾರದ ಕಡೆ ಬೊಟ್ಟು ಮಾಡಿ ಕೇಳಿದ್ರೆ ಅಭಿಮಾನಿಗಳತ್ತ ಕೈ ತೋರಿಸುತ್ತಾರೆ.. ಪೋಲಿಸ್ ಇಲಾಖೆಯ ಬಳಿ ಕೇಳಿದ್ರೆ ಕೆಎಸ್‍ಸಿಎ, ಆರ್‍ಸಿಬಿ ಕಡೆ ಬೊಟ್ಟು ಮಾಡ್ತಾರೆ…ಅಭಿಮಾನಿಗಳಲ್ಲಿ ಕೇಳಿದ್ರೆ ಸರ್ಕಾರದ ವಿರುದ್ಧ ಕಿಡಿ ಕಾರುತ್ತಾರೆ.. ಹಾಗಿದ್ರೆ ಯಾರ ಮಿಸ್ಟಿಕ್..? ಅದನ್ನು ಹುಡುಕುತ್ತಾ ಹೋದ್ರೆ ಉತ್ತರ ಸಿಗಲ್ಲ.. ಉತ್ತರ ಸಿಕ್ಕಾಗ ಮತ್ತೊಂದು ಐಪಿಎಲ್ ಸೀಸನ್ ಶುರುವಾಗುತ್ತೆ.. ಮತ್ತೆ ಅಂಧಾಭಿಮಾನದ ಮುಂದೆ ಎಲ್ಲವೂ ಮರೆತು ಹೋಗುತ್ತೆ.. ಆದ್ರೆ ಜೀವ ಕಳೆದುಕೊಂಡವರ ಕುಟುಂಬಸ್ಥರ ಗೋಳನ್ನು ಕೇಳುವವರು ಯಾರು..?
ಹಾಗೇ ನೋಡಿದ್ರೆ ಮೇಲ್ನೋಟಕ್ಕೆ ಇದು ಗ್ಯಾರಂಟಿ ಸರ್ಕಾರ ಮಾಡಿರೋ ಎಡವಟ್ಟು ಅಂತ ಕಾಣುತ್ತೆ. ಯಾಕಂದ್ರೆ, ಕೆಎಸ್‍ಸಿಎ ಆಗಲಿ ಅಥವಾ ಆರ್‍ಸಿಬಿ ಮ್ಯಾನೇಜ್‍ಮೆಂಟ್ ಆಗಲಿ.. ಈ ಹಿಂದೆ ಯಾವುದೇ ಕಾರ್ಯಕ್ರಮ ಅಥವಾ ಮ್ಯಾಚ್‍ಗಳನ್ನು ಸ್ವಲ್ಪನೂ ಅಡೆತಡೆಗಳಿಲ್ಲದೆ ಆಯೋಜನೆ ಮಾಡಿದೆ. ಈ ನಡುವೆ ಆರ್ ಸಿಬಿ ಮ್ಯಾನೇಜ್‍ಮೆಂಟ್ ಬೆಂಗಳೂರಿನಲ್ಲಿ ವಿಜಯೋತ್ಸವ ನಡೆಯಲಿದೆ ಎಂಬ ಟ್ವಿಟ್ ಅಭಿಮಾನಿಗಳ ಹುಮ್ಮಸ್ಸನ್ನು ಇಮ್ಮಡಿಗೊಳಿಸುವಂತೆ ಮಾಡಿದೆ. ಆರ್‍ಸಿಬಿ ಕೂಡ ಮಾಮೂಲಿಯಾಗಿ ರಸ್ತೆ ಮೇಲೆ ಮೆರವಣಿಗೆ, ಆದಾದ ನಂತರ ಚಿನ್ನಸ್ವಾಮಿ ಮೈದಾನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸಬಹುದು ಎಂಬ ಲೆಕ್ಕಚಾರ ಹಾಕಿಕೊಂಡಿತ್ತು. ಇದಕ್ಕೆ ಕಾರಣವೂ ಇದೆ. ಈ ಹಿಂದೆ ಕೂಡ ಆರ್‍ಸಿಬಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆಯನ್ನು ಚಿನ್ನಸ್ವಾಮಿ ಮೈದಾನದಲ್ಲಿ ನಡೆಸಿದೆ. ಆದ್ರೆ ಇಷ್ಟೊಂದು ಸಂಖ್ಯೆಯ ಅಭಿಮಾನಿಗಳು ಸೇರುತ್ತಾರೆ ಅಂತ ಅಂದುಕೊಂಡಿರಲಿಲ್ಲ.
ಇದೆಲ್ಲದರ ನಡುವೆ ಎಂಟ್ರಿಯಾಗಿದ್ದು ಸಿದ್ದರಾಮಯ್ಯನವರ ಸರ್ಕಾರ.. ಹಾಗಂತ ಇದು ತಪ್ಪು ಅಂತನೂ ಹೇಳುತ್ತಿಲ್ಲ. ಆದ್ರೆ ಸಡನ್ ಆಗಿ ವಿಧಾನಸೌಧದ ಮೆಟ್ಟಿಲಿನ ಮೇಲೆ ಆರ್‍ಸಿಬಿ ಆಟಗಾರರನ್ನು ಪ್ರತ್ಯೇಕವಾಗಿ ಸನ್ಮಾನಿಸುವ ಅಗತ್ಯವಾದ್ರೂ ಏನಿತ್ತು..? ಏನಿದ್ರೂ ಚಿನ್ನಸ್ವಾಮಿ ಮೈದಾನದಲ್ಲಿ ಅಥವಾ ಇನ್ನೊಂದು ದಿನ ಆಟಗಾರರನ್ನು ಕರೆಸಿ ಸನ್ಮಾನ ಮಾಡಬಹುದಿತ್ತು. ಆದ್ರೆ ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳಿಗೆ ಪ್ರಚಾರದ ಹುಚ್ಚು.. ಕ್ರಿಕೆಟ್ ಆಟಗಾರರ ಜೊತೆ ಫೋಟೋಗೆ ತೆಗೆಸಿಕೊಂಡ್ರೆ ತಮ್ಮ ಬ್ರ್ಯಾಂಡ್ ವ್ಯಾಲ್ಯೂ ಜಾಸ್ತಿ ಆಗುತ್ತೆ ಅನ್ನೋ ಭ್ರಮೆಯಲ್ಲೇ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಒಂದು ವಿಚಾರವನ್ನು ಘನವೆತ್ತ ರಾಜ್ಯ ಸರ್ಕಾರ ಕೂಡ ಅರ್ಥಮಾಡಿಕೊಳ್ಳಬೇಕಿತ್ತು.. ಆರ್‍ಸಿಬಿ ಏನು ಯುದ್ಧ ಗೆದ್ದಿಲ್ಲ..! 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಆಗಿದೆ ಅಷ್ಟೇ.. ಅದಕ್ಕೆ ಇಷ್ಟೊಂದು ಆತುರದಲ್ಲಿ ಮುತುವರ್ಜಿ ವಹಿಸಿಕೊಂಡು ಶಕ್ತಿಸೌಧದಲ್ಲಿ ಶಕ್ತಿ ಪ್ರದರ್ಶನ ಮಾಡುವ ಅಗತ್ಯವಾದ್ರೂ ಏನಿತ್ತು..? ಈ ಹಿಂದೆ ನಮ್ಮದೇ ರಾಜ್ಯದ ಬೇರೆ ಬೇರೆ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಬಂದವರಿಗೆ ವಿಧಾನಸೌಧದ ಮೆಟ್ಟಿಲಿನ ಮೇಲೆ ಸನ್ಮಾನಿಸಲಾಗಿತ್ತಾ..? ಪಾಪ ಅದೇಷ್ಟೋ ಕ್ರೀಡಾಪಟುಗಳು ನಾವು ಪ್ರಶಸ್ತಿ, ಪದಕ ಗೆದ್ದಿದ್ದೇವೆ ಅಂತ ಹೇಳಲು ಸಿಎಂ ಬಳಿ ಎಪಾಯಿಮೆಂಟ್ ತೆಗೆದುಕೊಳ್ಳಬೇಕು. ಆದ್ರೆ ಕ್ರಿಕೆಟಿಗರಿಗೆ ಮಾತ್ರ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸ್ತಾರೆ. ಇದು ಸರಿನಾ..ಸಿಎಂ ಸಾಹೇಬ್ರೇ..!
ಒಂದಂತೂ ಸತ್ಯ ಸಿಎಂ ಸಾಹೇಬ್ರೆ.. ನಿಮ್ಮನ್ನು ಈ ವಿಚಾರದಲ್ಲಿ ದಾರಿ ತಪ್ಪಿಸಿದ್ದು ನಿಮ್ಮ ಜೊತೆಗಿರುವ ಆ ಕಿತಾಪತಿ ಮನುಷ್ಯ ಎಂಬುದರಲ್ಲಿ ಎರಡು ಮಾತಿಲ್ಲ..!
ಕೊನೆಯದಾಗಿ ಪ್ರೀತಿಯ ಆರ್‍ಸಿಬಿ ಅಭಿಮಾನಿಗಳೇ, ಆರ್‍ಸಿಬಿ ಮೇಲೆ ನಿಮ್ಮ ಪ್ರೀತಿ, ಅಭಿಮಾನ ಇರಲಿ, ಅದು ಬೇಡ ಅನ್ನಲ್ಲ.. ಅದು ಇತಿಮಿತಿಯಲ್ಲಿ ಇರಲಿ.. ಮ್ಯಾಚ್ ಗೆದ್ರಾ ಖುಷಿ ಪಡಿ, ಸೋತ್ರಾ ಬೇಸರ ಸಮಾಧಾನಪಟ್ಟುಕೊಳ್ಳಿ.. ಹಾಗಂತ ಅತಿರೇಕಕ್ಕೆ ಹೋಗಬೇಡಿ.. ಕ್ರಿಕೆಟಿಗರಿಗೆ ಆಡಿದ್ರೆ ದುಡ್ಡ ಬರುತ್ತೆ..ನೇಮ್ ಫೇಮ್ ಎಲ್ಲವೂ ಸಿಗುತ್ತೆ. ಆದ್ರೆ ನೆನಪಿಡಿ ನಿಮಗೆ ಏನು ಸಿಗಲ್ಲ… ನೀವೊಬ್ಬ ಆರ್‍ಸಿಬಿ ಅಭಿಮಾನಿ ಅಂತ ಕ್ರಿಕೆಟಿಗರಿಗೆ ಒಂಚೂರು ಗೊತ್ತಾಗಲ್ಲ.. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ. ನಿಮ್ಮ ಹುಚ್ಚು ಅಭಿಮಾನದಿಂದ ನಿಮ್ಮ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಬದುಕು ಸಾಗಿಸುವಂತೆ ಮಾಡಬೇಡಿ ಪ್ಲೀಸ್. ಕ್ರಿಕೆಟ್ ಜಸ್ಟ್ ಗೇಮ್.. ಜಸ್ಟ್ ಎಂಜಾಯ್ ..! ಎಲ್ಲದಕ್ಕಿಂತ ಜೀವ ದೊಡ್ಡದು, ಜೀವ ಇದ್ದರೇ ಮಾತ್ರ ಜೀವನ. ಕ್ರಿಕೆಟ್ ಆಗಲೀ ಇನ್ಯಾವುದೇ ಮನೋರಂಜನೆಯಾಗಲೀ, ಅಭಿಮಾನವಾಗಲೀ ಜೀವನದ ಒಂದು ಭಾಗ ಮಾತ್ರ.
ಸನತ್ ರೈ