RCB vs SRH | ಸನ್ ರೈಸರ್ಸ್ ದಂಡಯಾತ್ರೆ.. ಮುಗ್ಗರಿಸಿದ ಆರ್ ಸಿಬಿ
ಸನ್ ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳ ಸೋಲು ಕಂಡಿದೆ.
ಬಲಿಷ್ಠ ಬ್ಯಾಟಿಂಗ್ ವಿಭಾಗ ಇದ್ದರೂ ಕೂಡ ಸನ್ ರೈಸರ್ಸ್ ಬೌಲಿಂಗ್ ದಾಳಿಗೆ ಬೆಂಗಳೂರು ಬ್ಯಾಟರ್ ಗಳು ತತ್ತರಿಸಿದರು.
ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು.
ಪಂದ್ಯದ ಎರಡನೇ ಓವರ್ ನಲ್ಲಿ 5 ರನ್ ಗಳಿಸಿದ್ದ ಫಾಫ್ ಡುಪ್ಲಸಿಸ್ ಜಾನ್ಸನ್ ಗೆ ವಿಕೆಟ್ ಒಪ್ಪಿಸಿದರು.
ನಂತರದ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆದರು.
ಇದೇ ಓವರ್ ನ ಕೊನೆಯ ಎಸೆತದಲ್ಲಿಯೇ ಅನೂಜ್ ರಾವತ್ ಪೆವಿಲಿಯನ್ ಸೇರಿಕೊಂಡರು.
ಇಲ್ಲಿಗೆ ಕೇವಲ 8 ರನ್ ಗಳಿಗೆ ಆರ್ ಸಿಬಿ ತಂಡ ಟಾಪ್ ಆರ್ಡರ್ ಬ್ಯಾಟರ್ ಗಳನ್ನು ಕಳೆದುಕೊಳ್ತು..
ಇನ್ನು ಇನ್ನಿಂಗ್ಸ್ ನ ಐದನೇ ಓವರ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ 12 ರನ್ ಗಳಿಸಿ ಟಿ ನಟರಾಜನ್ ಗೆ ವಿಕೆಟ್ ನೀಡಿದರು.
ಇದಾದ ನಂತರ ಸುಯಾಶ್ ಪ್ರಭುದೇಸಾಯಿ 15 ರನ್ ಗಳಿಸಿ ಸುಚಿತ್ ಗೆ ವಿಕೆಟ್ ಕೊಟ್ಟರು.
8 ನೇ ಓವರ್ ನ ಐದನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಔಟ್ ಆದ್ರೆ 9 ನೇ ಓವರ್ ನ 2 ನೇ ಎಸೆತದಲ್ಲಿ ಶಹಬ್ಬಾಸ್ ಅಹ್ಮದ್ ಔಟ್ ಆದ್ರು.
ಟೂರ್ನಿಯಲ್ಲಿ ಇದೇ ಮೊದಲ ಬಾರಿ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾದರು. ಶಹಬ್ಬಾಸ್ ಅಹ್ಮದ್ 7 ರನ್ ಗಳಿಸಿದರು.
ಇಲ್ಲಿಗೆ 49 ರನ್ ಗಳಿಸುವಷ್ಟರಲ್ಲಿ ಆರ್ ಸಿಬಿ ತಂಡದ ನಂಬಿಕಸ್ತ ಬ್ಯಾಟರ್ ಗಳು ಎಲ್ಲರೂ ಪೆವಿಲಿಯನ್ ಸೇರಿಕೊಂಡರು.
ಕೊನೆಯಲ್ಲಿ ಹರ್ಷಲ್ ಪಟೇಲ್ ನಾಲ್ಕು ರನ್, ವನಿಂದು ಹಸರಂ 8 ರನ್ ಹೆಜಲ್ ವುಡ್ ಮೂರು ರನ್, ಸಿರಾಜ್ 2 ರನ್ ಗಳಿಸಿದರು.
ಅಂತಿಮವಾಗಿ 16.1 ಓವರ್ ಗಳಿಗೆ ಆರ್ ಸಿಬಿ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 68 ರನ್ ಗಳಿಸಲಷ್ಟೆ ಶಕ್ತವಾಯ್ತು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಮಾರ್ಕೋ ಜಾನ್ಸನ್, ನಟರಾಜನ್ ತಲಾ ಮೂರು ವಿಕೆಟ್ ಪಡೆದರು.
ಸುಚಿತ್ 2 ವಿಕೆಟ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ತಲಾ ಒಂದು ವಿಕೆಟ್ ಪಡೆದರು.
ಇನ್ನು ಆರ್ ಸಿಬಿ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಯಾವುದೇ ಅಡ್ಡಿ ಆತಂಕವಿಲ್ಲದೇ ಗುರಿ ತಲುಪಿತು.
ಸನ್ ರೈಸರ್ಸ್ ಆರಂಭಿಕ ಆಟಗಾರ ಅಭೀಷೇಕ್ ಶರ್ಮಾ 28 ಎಸೆತಗಳಲ್ಲಿ 47 ರನ್ ಗಳಿಸಿದರು.
ನಾಯಕ ಕೇನ್ ವಿಲಿಯಂ ಸನ್ 16 ರನ್ ಗಳಿಸಿದರು. ರಾಹುಲ್ ತ್ರಿಪಾಟಿ 7 ರನ್ ಗಳಿಸುವ ಮೂಲಕ 8 ಓವರ್ ಗಳಲ್ಲಿ ಹೈದರಾಬಾದ್ ತಂಡ ಒಂದು ವಿಕೆಟ್ ಕಳೆದುಕೊಂಡು 72 ರನ್ ಗಳಿಸಿತು.
ಈ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಐದು ಗೆಲುವುಗಳೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಬೆಂಗಳೂರು ತಂಡ ಅಷ್ಟೇ ಅಂಕಗಳಿದ್ದರೂ ನಾಲ್ಕನೇ ಸ್ಥಾನದಲ್ಲಿದೆ.
rcb-vs-srh-RCB vs SRH: RCB collapse for 68 all-out