ಬೆಂಗಳೂರು ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಹೆಸರಿಗೆ ದಾಖಲೆ ಬರೆಸಿಕೊಂಡಿದ್ದಾರೆ.
ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮೊಹಮ್ಮದ್ ತಂಡದ ಗೆಲುವಿನಲ್ಲಿ ಪ್ರಮುಖ ರೂವಾರಿಯಾಗಿದ್ದಾರೆ. ಟಾಸ್ ಗೆದ್ದ ಆರ್ಸಿಬಿ ತಂಡವು ಬೌಲಿಂಗ್ ಆಯ್ದುಕೊಂಡಿತ್ತು.
ಅದರಂತೆ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಮೊದಲ ಓವರ್ನಲ್ಲಿ ಕೇವಲ 2 ರನ್ ಮಾತ್ರ ನೀಡಿ, ನಂತರ 2ನೇ ಓವರ್ ನಲ್ಲಿ ರೀಸ್ ಟೋಪ್ಲಿ 9 ರನ್ ನೀಡಿದ್ದರು. 3ನೇ ಓವರ್ ನಲ್ಲಿ ಮತ್ತೆ ದಾಳಿಗಿಳಿದ ಸಿರಾಜ್ ಕೇವಲ 1 ರನ್ ಮಾತ್ರ ನೀಡಿದರು. ಅಷ್ಟೇ ಅಲ್ಲದೆ ಇಶಾನ್ ಕಿಶನ್ ವಿಕೆಟ್ ಪಡೆದರು.
ಈ ವಿಕೆಟ್ ನೊಂದಿಗೆ ಮೊಹಮ್ಮದ್ ಸಿರಾಜ್ ಆರ್ಸಿಬಿ ಪರ 50 ವಿಕೆಟ್ ಗಳನ್ನು ಪಡೆದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಆರ್ಸಿಬಿಯ 6ನೇ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ವಿನಯ್ ಕುಮಾರ್, ಅನಿಲ್ ಕುಂಬ್ಳೆ ಹಾಗೂ ಎಸ್ ಅರವಿಂದ್ ಈ ಸಾಧನೆ ಮಾಡಿದ್ದರು. ಸದ್ಯ ಮೊಹಮ್ಮದ್ ಸಿರಾಜ್ 6ನೇ ಬೌಲರ್ ಆಗಿದ್ದಾರೆ. ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಯುಜ್ವೇಂದ್ರ ಚಹಾಲ್ ಅಗ್ರಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ಮೊದಲ 3 ಓವರ್ಗಳಲ್ಲಿ ಸಿರಾಜ್ ಕೇವಲ 5 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಆದರೆ ತಮ್ಮ ಕೊನೆಯ ಓವರ್ನಲ್ಲಿ 16 ರನ್ ಬಿಟ್ಟು ಕೊಟ್ಟರು. ಇದಾಗ್ಯೂ 21 ರನ್ ನೀಡಿ 1 ವಿಕೆಟ್ ಕಬಳಿಸುವ ಮೂಲಕ 4 ಓವರ್ಗಳನ್ನು ಅಂತ್ಯಗೊಳಿಸಿದರು.








