ಕನ್ನಡದಲ್ಲಿದ್ದ ಚೆಕ್ ತಿರಸ್ಕಾರ – ಬ್ಯಾಂಕ್ ಗೆ 85,177 ರೂ ದಂಡ…
ಕನ್ನಡದಲ್ಲಿ ಬರೆದಿದ್ದ ಚೆಕ್ ತಿರಸ್ಕರಿಸಿದ್ದ ಕಾರಣಕ್ಕೆ ಗ್ರಾಹಕ ವ್ಯಾಜ್ಯಗಳ ಕೋರ್ಟ್ ಬ್ಯಾಂಕ್ ಗೆ 85,177 ರುಪಾಯಿ ದಂಡ ವಿಧಿಸಿದೆ.
ಧಾರವಾಡದ ವಾದಿರಾಜಾಚಾರ್ಯ ಇನಾಮದಾರ್ ಎಂಬುವವರ ಚೆಕ್ನ್ನು ಕನ್ನಡದಲ್ಲಿ ಬರೆದಿದ್ದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಎಸ್ಬಿಐ ಬ್ಯಾಂಕ್ ತಿರಸ್ಕರಿತ್ತು. ಚೆಕ್ ಮೂಲಕ ವಾದಿರಾಜಾಚಾರ್ಯ ವಿದ್ಯುತ್ ಬಿಲ್ ಪಾವತಿ ಮಾಡಿದ್ದು 6000 ರೂ. ಎಂದು ಕನ್ನಡದಲ್ಲಿ ಬರೆದು ಚೆಕ್ ನೀಡಿದ್ದರು. ಕನ್ನಡದ ಅಂಕಿಗಳು ತಿಳಿಯದ ಕಾರಣ ಬ್ಯಾಂಕ್ ಚೆಕ್ ಅಮಾನ್ಯ ಮಾಡಿತ್ತು.
ಇದು ಕನ್ನಡಕ್ಕಾದ ಅವಮಾನ ಅಂತಾ ವಾದಿರಾಜಾಚಾರ್ಯ ಅವರು ಕಾನೂನು ಹೋರಾಟ ಮುಂದಾಗಿದ್ದರು. ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರು ಎಲ್ಲ ವ್ಯವಹಾರಕ್ಕೂ ಕನ್ನಡ ಬಳಕೆ ಮಾಡುತ್ತಿದ್ದಾರೆ. ಕನ್ನಡಕ್ಕಾಗಿ ಕಾನೂನು ಹೋರಾಟ ಮಾಡಿ ಕೊನೆಗೆ 8 ತಿಂಗಳ ವಿಚಾರಣೆ ಬಳಿಕ ಗೆಲುವು ಸಾಧಿಸಿದ್ದಾರೆ.
ಕನ್ನಡ ಕಡೆಗಣಿಸೋ ಬ್ಯಾಂಕ್ಗಳಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಬೇಕು. ನಾನು ಇಂಗ್ಲಿಷ್ ಉಪನ್ಯಾಸಕನಾಗಿದ್ದರು, ಕನ್ನಡ ನಮ್ಮ ಆಡಳಿತ ಭಾಷೆ. ಕನ್ನಡಿಗರಾಗಿ ಕನ್ನಡ ಬಳಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಾದಿರಾಜಾಚಾರ್ಯರು ಹೇಳಿದ್ದಾರೆ.