ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಜಸ್ಟಿನ್ ಬೀಬರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಆದ್ರೆ ಈ ಆರೋಪವನ್ನು ಜಸ್ಟಿನ್ ತಳ್ಳಿ ಹಾಕಿದ್ದು, ಇದು ವಾಸ್ತವಿಕವಾಗಿ ಅಸಾಧ್ಯ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಜಸ್ಟಿನ್.
ಇನ್ನು ಡೇನಿಯಲ್ ಎನ್ನುವ ಮಹಿಳೆ ಜಸ್ಟಿನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಈ ವಿಚಾರವನ್ನು ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಮಹಿಳೆ “21 ವರ್ಷವಿದ್ದಾಗ ಆಸ್ಟಿನ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಜಸ್ಟಿನ್ ಅನ್ನು ಭೇಟಿಯಾಗಿದ್ದೆ. ಆಗ ಅವರಿಗೆ 21 ವರ್ಷ. ಸಂಗೀತ ಕಾರ್ಯಕ್ರಮದ ನಂತರ ಬೀಬರ್, ನನ್ನನ್ನು ಮತ್ತು ನನ್ನ ಸ್ನೇಹಿತರನ್ನು ಫೋರ್ ಸೀಸನ್ಸ್ ಹೋಟೆಲ್ ಗೆ ಆಹ್ವಾನಿಸಿದರು. ಅಲ್ಲಿ ಪ್ರತ್ಯೇಕ ರೂಮ್ ಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಜಸ್ಟಿನ್, ಅಂದು ಅವರು ತಂಗಿದ್ದ ಹೋಟೆಲ್ ವಿವರಗಳನ್ನು ನೀಡಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಈ ಕಥೆಯಲ್ಲಿ ಯಾವುದೆ ಸತ್ಯವಿಲ್ಲ. ಲೈಂಗಿಕ ಕಿರುಕುಳದ ಪ್ರತಿ ಹಕ್ಕನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಅದಕ್ಕಾಗಿಯೇ ನನ್ನ ಪ್ರತಿಕ್ರಿಯೆಯ ಅಗತ್ಯವಿತ್ತು. ಆದರೆ ಈ ಕಥೆ ವಾಸ್ತವಿಕವಾಗಿ ಅಸಾಧ್ಯ” ಎಂದು ಬರೆದುಕೊಂಡಿದ್ದಾರೆ.
ಇನ್ನು ಜಸ್ಟಿನ್ ಬೀಬರ್, ವೇರ್ ಯೂ ನೌ, ಬಾಯ್ ಫ್ರೆಂಡ್, ಲವ್ ಯುವರ್ ಸೆಲ್ಫ್ ಸೇರಿದ್ದಂತೆ ಸಾಕಷ್ಟು ಪ್ರಸಿದ್ಧ ಹಾಡುಗಳನ್ನು ಹಾಡಿದ್ದಾರೆ.