ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ 12 ಜನರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇಂದು 42ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿತು. ಕೊಲೆ ಆರೋಪ ಎದುರಿಸುತ್ತಿರುವವರ ಪೈಕಿ 12 ಆರೋಪಿಗಳನ್ನು 5 ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿತು. ಇಂದು ಕೂಡ ಕೋರ್ಟ್ ಹಾಲ್ ನಲ್ಲಿ ಆರೋಪಿ ಪವಿತ್ರಾ ಗೌಡ ಕಣ್ಣೀರು ಹಾಕಿದರು. ಆಗ ನ್ಯಾಯಾಧೀಶರು ಪೊಲೀಸರು ತೊಂದರೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ದರ್ಶನ್ ಹಾಗೂ ಪವಿತ್ರಾ ಗೌಡ, ಇಲ್ಲ ಎಂದು ಉತ್ತರಿಸಿದರು.
ಸರ್ಕಾರದ ಎಸ್‌ಎಸ್‌ಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು. ಆರೋಪಿಗಳಿಂದ 10 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸಿಡಿಆರ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಬೇಕಿದೆ. 30 ಲಕ್ಷ ರೂ. ಹಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಐಪಿಡಿಆರ್ ಡೇಟಾಗಾಗಿ ಕಾಯಲಾಗುತ್ತಿದೆ. ಹೀಗಾಗಿ ವಶಕ್ಕೆ ನೀಡಬೇಕೆಂದು ಮನವಿ ಮಾಡಲಾಯಿತು.
ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಿಡಿಯನ್ನು ಪೊಲೀಸರು ನೀಡಿದರು. ಎ1-ಎ5 ಹಾಗೂ ಎ10 ಇಂದ ಎ14 ವರೆಗಿನ ಆರೋಪಿಗಳು ಕಸ್ಟಡಿಗೆ ಬೇಕಿದೆ. ದರ್ಶನ್ ಮತ್ತು ಪವಿತ್ರಾ ಗೌಡರನ್ನು ಮತ್ತೆ ಕಸ್ಟಡಿಗೆ ನೀಡಬೇಕು. ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಇದಕ್ಕೆ ದರ್ಶನ್ ಪರ ವಕೀಲ ಅನಿಲ್ ಬಾಬು ಆಕ್ಷೇಪಿಸಿದರು. ಎ13, ಎ5ಗೆ ಪೊಲೀಸರು ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ ಎಂದು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿಗಳನ್ನು ಮತ್ತೆ 5 ದಿನ ಕಸ್ಟಡಿಗೆ ವಹಿಸಿ ಆದೇಶ ನೀಡಿದರು.