ಮೀಸಲಾತಿ ವಿಚಾರ : ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ
ಬೆಂಗಳೂರು : ಮೀಸಲಾತಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ನಲ್ಲಿ ಚಾಟಿ ಬೀಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಗಳನ್ನ ಮಾಡಿರುವ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತ ಬಂದಿದೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಈ ವರೆಗೆ ಸ್ವೀಕರಿಸದಿರುವುದು ಖಂಡನೀಯ. ತಕ್ಷಣ ವರದಿ ಸ್ವೀಕರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.
ಸ್ವಾತಂತ್ರ್ಯ ನಂತರದಿಂದ ಈ ವರೆಗೆ ಸಮಾಜದ ವಿವಿಧ ಸಮುದಾಯಗಳಲ್ಲಾದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಲು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಅನುಕೂಲವಾಗಲಿದೆ.
ಬೆಂಗಳೂರು ನಗರದ ಶೇ.90 ಹಾಗೂ ರಾಜ್ಯದ ಗ್ರಾಮೀಣ ಭಾಗದ ಶೇ.100 ರಷ್ಟು ಕುಟುಂಬಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಇರುವ ವೈಜ್ಞಾನಿಕ ಸಮೀಕ್ಷೆಯೊಂದರ ವರದಿ ಸ್ವೀಕರಿಸದಿರಲು ಕಾರಣ ಏನು ಎಂಬುದನ್ನು ರಾಜ್ಯ ಬಿಜೆಪಿ ಸರ್ಕಾರ ಹೇಳಲಿ.
ರಾಜ್ಯದ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟದ ಹಾದಿ ಹಿಡಿದಿವೆ. ಇದಕ್ಕೆ ನಮ್ಮ ವಿರೋಧ ಖಂಡಿತಾ ಇಲ್ಲ. ಶೋಷಿತ ಸಮುದಾಯಗಳು ಮೀಸಲಾತಿ ಪಡೆಯುವುದು ಅವುಗಳ ಸಂವಿಧಾನಬದ್ಧ ಹಕ್ಕು. ಯಾವ ಸಮುದಾಯಗಳು ಸಂವಿಧಾನದ ನಿಯಮಗಳಡಿ ಮೀಸಲಾತಿಗೆ ಅರ್ಹವಿದ್ದಾವೆ ಅವುಗಳೆಲ್ಲವಕ್ಕೂ ಸರ್ಕಾರ ಮೀಸಲಾತಿ ನೀಡಲು ಕ್ರಮ ವಹಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
