ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ RBI
ನವದೆಹಲಿ: ರೆಪೋ ದರ , ಪ್ರಮುಖ ಬಡ್ಡಿದರಗಳಲ್ಲಿ RBI ಯಥಾಸ್ಥಿತಿ ಕಾಯ್ದುಕೊಂಡಿದೆ.. ರಿವರ್ಸ್ ರೆಪೋ ದರದಲ್ಲಿಯೂ ಯಾವುದೇ ರೀತಿಯಾದ ಬದಲಾವಣೆಯಾಗಿಲ್ಲ. ಮುಂದಿನ ಆರ್ಥಿಕ ಚೇತರಿಕೆಗೆ ನೆರವಾಗಲು ಹೊಂದಾಣಿಕೆಯ ನಿಲುವಿನೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಈ ನಿರ್ಧಾರವನ್ನು ಕೈಗೊಂಡಿದೆ..
ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇ 4 ರಲ್ಲಿ ಮುಂದುವರಿಸಿರುವ ಆರ್ಬಿಐನ ಹಣಕಾಸು ನೀತಿ ಸಮಿತಿ, ರಿವರ್ಸ್ ರೆಪೋ ದರವನ್ನು ಕೂಡ ಶೇ. 3.35ರೊಂದಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಕೋವಿಡ್ ಎರಡನೇ ಅಲೆಯ ಪ್ರಭಾವದಿಂದ ಕುಸಿದಿರುವ ಆರ್ಥಿಕತೆ ಮತ್ತೆ ಚೇತರಿಕೆ ಪಡೆದುಕೊಳ್ಳುವವರೆಗೂ ಆರ್ಬಿಐ ಹಣಕಾಸು ಸಮಿತಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ತಿಳಿಸಿದರು. ಅನೇಕ ಆರ್ಥಿಕ ಕ್ಷೇತ್ರಗಳು ಪ್ರಗತಿಯಲ್ಲಿದ್ದು, ಸದ್ಯ ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮ ಹಾದಿಯತ್ತ ಸಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಶೇಷವಾಗಿ ದೇಶದ ಕೆಲವು ಭಾಗಗಳಲ್ಲಿ ಕರೊನಾ ಸೋಂಕುಗಳು ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಕಾವಲುಗಾರರನ್ನು ಕೈಬಿಡದೇ, ಮೂರನೇ ಅಲೆಯ ಯಾವುದೇ ಸಾಧ್ಯತೆಯ ವಿರುದ್ಧ ಜಾಗರೂಕರಾಗಿರುವುದು ತುಂಬಾ ಪ್ರಮುಖವಾಗಿದೆ ಎಂದರು. ಆದಾಗ್ಯೂ, ಆರ್ಥಿಕತೆಯಲ್ಲಿ ಪೂರೈಕೆ-ಬೇಡಿಕೆ ಸಮತೋಲನವನ್ನು ಪುನಃಸ್ಥಾಪಿಸಲು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಹೇಳಿದರು. ಸತತ ಏಳನೇ ಅವಧಿಗೆ ಆರ್ಬಿಐ ಪ್ರಮುಖ ಬಡ್ಡಿದರಗಳಲ್ಲಿ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಕಾಯ್ದುಕೊಂಡಿರೂದು ಗಮನಾರ್ಹ. ಮುಂದಿನ ಹಣಕಾಸು ವರ್ಷ 2022ರ ಹೊತ್ತಿಗೆ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 9.5ಕ್ಕೆ ಉಳಿಸಿಕೊಳ್ಳಲಾಗಿದೆ.