Bengaluru: ಉಸಿರುಗಟ್ಟಿಸಿ ನಿವೃತ್ತ ಶಾಲಾ ಶಿಕ್ಷಕಿಯ ಕೊಲೆ..
ನಿವೃತ್ತ ಶಿಕ್ಷಕಿಯೊಬ್ಬರನ್ನ ಕೈಕಾಲು ಕಟ್ಟಿ, ಉಸಿರುಗಟ್ಟಿಸಿ ಕೊಲೆಗೈದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಪ್ರಸನ್ನ ಕುಮಾರಿ (60) ಕೊಲೆಯಾದ ನಿವೃತ್ತ ಶಿಕ್ಷಕಿ. ವಿಜಯವಾಡ ಮೂಲದ ಪ್ರಸನ್ನ ಕುಮಾರಿ ಚಿಂತಾಮಣಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಇತ್ತೀಚೆಗೆ ನಿವೃತ್ತಿಯಾಗಿದ್ದರು. ನಂತರ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು.
ವಿದ್ಯಾರಣ್ಯಪುರ ಅಂಬಾ ಭವಾನಿ ದೇವಸ್ಥಾನದ ಬಳಿ ನೆಲೆಸಿದ್ದ ಇವರ ಮನೆಗೆ ದುಷ್ಕರ್ಮಿಗಳು ನಿನ್ನೆ ತಡರಾತ್ರಿ ನುಗ್ಗಿ ಕೊಲೆ ಮಾಡಿದ್ದಾರೆ. ಆಕೆಯ ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಹತ್ಯೆ ಮಾಡಿ ನಂತರ ಚಿನ್ನಾಭರಣ ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರ ಠಾಣಾ ಪೊಲೀಸರು ಅಕ್ಕಪಕ್ಕದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ.