ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದು, ಸಿಎಂ ಆಗಿ ರೇವಂತ್ ರೆಡ್ಡಿ (Revanth Reddy) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರೇವಂತ್ ರೆಡ್ಡಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರೊಂದಿಗೆ ಕೆಲವು ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಕ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಾಕ್ಷಿಯಾಗಿದ್ದಾರೆ.
ಇತ್ತೀಚೆಗೆ ಬಂದ ಫಲಿತಾಂಶದಲ್ಲಿ 119 ಸ್ಥಾನಗಳ ಪೈಕಿ 69 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿ, ಸ್ಪಷ್ಟ ಬಹುಮತ ಗಳಿಸಿ, ಅಧಿಕಾರದ ಗದ್ದುಗೆಗೆ ಏರಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ 56 ವರ್ಷದ ಅನುಮುಲಾ ರೇವಂತ್ ರೆಡ್ಡಿ ಮೊದಲು ಆರೆಸ್ಸೆಸ್ ನಲ್ಲಿ ಗುರುತಿಸಿಕೊಂಡು ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಸೇರಿದ್ದರು.
ಆರೆಸ್ಸೆಸ್ ನಲ್ಲಿ ಗುರುತಿಸಿಕೊಂಡಿದ್ದ ಅವರು ಟಿಡಿಪಿಗೆ (TDP) ಸೇರಿ 2009 ಮತ್ತು 2014 ರ ಚುನಾವಣೆಯಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ನಂತರ ಟಿಡಿಪಿ ತೊರೆದು 2017 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಸೇರಿದರು. 2018 ರಲ್ಲಿ ಬಿಆರ್‌ಎಸ್ (BRS) ವಿರುದ್ಧ ಸ್ಪರ್ಧಿಸಿ ಕೊಡಂಗಲ್‌ನಿಂದ ಸೋತರು. 2019 ರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.