Ricky Ponting | ಡಿಕೆ ಟೀಂ ಇಂಡಿಯಾದ ಬೆಸ್ಟ್ ಫಿನಿಷರ್
2022ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಹಲವು ಅದ್ಭುತ ಇನ್ನಿಂಗ್ಸ್ ಗಳೊಂದಿಗೆ ತಂಡಕ್ಕೆ ಗೆಲುವುಗಳನ್ನು ತಂದುಕೊಟ್ಟರು.
ಈ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 16 ಪಂದ್ಯಗಳನ್ನಾಡಿದ ದಿನೇಶ್ ಕಾರ್ತಿಕ್, 55 ರ ಸರಾಸರಿಯಲ್ಲಿ 183.33 ರ ಸ್ಟ್ರೈಕ್ ರೇಟ್ ನಲ್ಲಿ 330 ರನ್ ಗಳಿಸಿದರು.
ಇದರಲ್ಲಿ ಒಂದು ಅರ್ಧಶತಕವಿದೆ. 16 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ನಾಟೌಟ್ ಆಗಿ ಉಳಿದಿದ್ದು, 27 ಬೌಂಡರಿ, 22 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಅಲ್ಲದೆ ಅವರ ವೈಯುಕ್ತಿಕ ಗರಿಷ್ಠ ಸ್ಕೋರ್ 66 ರನ್ ಆಗಿದೆ.
ಈ ಪ್ರದರ್ಶನದ ಹಿನ್ನೆಲೆಯಲ್ಲಿ ಬರೋಬ್ಬರಿ ಮೂರು ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟಿ 20 ಸರಣಿಗೆ ಅವರು ಆಯ್ಕೆ ಆಗಿದ್ದಾರೆ.
ನಿರೀಕ್ಷೆಯಂತೆಯೇ ಅವರು ಟೀಂ ಇಂಡಿಯಾದ ಮ್ಯಾಚ್ ಫಿನಿಷರ್ ಆಗಿ ಕಾಣಿಸಿಕೊಂಡು ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದಿದ್ದರು.
ದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಪಡೆದ ದಿನೇಶ್ ಕಾರ್ತಿಕ್ ಕೇವಲ 1 ರನ್ ಗಳಿಸಿದರು.
ಇದು ಹೀಗಿದ್ದರೇ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್, ದಿನೇಶ್ ಕಾರ್ತಿಕ್ ಅವರನ್ನ ಹಾಡಿಹೊಗಳಿದ್ದಾರೆ.

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೆ ಭಾರತ ಕ್ರಿಕೆಟ್ ತಂಡದಲ್ಲಿ ದಿನೇಶ್ ಕಾರ್ತಿಕ್ ಖಂಡಿತವಾಗಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್ ಸಿಬಿ ಪರ ದಿನೇಶ್ ಕಾರ್ತಿಕ್ ನೀಡಿದ ಪ್ರದರ್ಶನದ ಬಗ್ಗೆ ಮಾತನಾಡಿದ ರಿಕಿ ಪಾಂಟಿಂಗ್, ಟಿ 20 ವಿಶ್ವಕಪ್ ಗೆ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಭಾಗವಾಗುತ್ತಾರೆ ಎಂದು ನಾನು ಭಾವಿಸುತ್ತೇನೆ.
ದಿನೇಶ್ ಕಾರ್ತಿಕ್ ಐದು ಇಲ್ಲವೇ ಆರನೇ ಸ್ಥಾನದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ. ಈ ವರ್ಷದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಾರ್ತಿಕ್ ಮಿಂಚಿದ್ದು, ಜೊತೆಗೆ ಮ್ಯಾಚ್ ಫಿನಿಷ್ ಮಾಡಿದ್ದು ಅದ್ಭುತವಾಗಿತ್ತು.
ಈ ಸೀಸನ್ ಪೂರ್ತಿ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡಿದರು. ಅದೇ ರೀತಿ ಮುಂದಿನ ಟಿ 20 ವಿಶ್ವಕಪ್ ನಲ್ಲಿ ಕೂಡ ಕಾರ್ತಿಕ್ ಟೀಂ ಇಂಡಿಯಾಗೆ ಬೆಸ್ಟ್ ಫಿನಿಷರ್ ಪಾತ್ರ ಪೋಷಿಸುತ್ತಾರೆ ಎಂದು ನಾನು ನಂಬುತ್ತಿದ್ದೇನೆ ಎಂದು ರಿಕಿಪಾಂಟಿಂಗ್ ಹೇಳಿದ್ದಾರೆ.