ಅಲ್ಲ ಮರಾಯ…”ಯಾರು” ನೀನು..? “ಏನು” ಗುರು ನಿಂದು ಆಟ…? ಇಷ್ಟು ದಿನ ಈ ಪೊಗರು “ಎಲಿ”್ಲ ಹೋಗಿತ್ತು..? ಯಾವಾಗಲೂ ಸ್ಥಿರ ಪ್ರದರ್ಶನ ನೀಡಲು ನಿನಗೇನು ಕಷ್ಟ..? 13 ಮ್ಯಾಚ್‍ನಲ್ಲಿ “ಏಕೆ” ನಿನ್ನ ಸೌಂಡೇ ಇರಲಿಲ್ಲ..? ಎಲ್ಲರಿಂದಲೂ ವೇಸ್ಟ್ ಬಾಡಿ ಅಂತ ಬೈಸಿಕೊಳ್ಳಲು ಮನಸ್ಸಾದ್ರೂ “ಹೇಗೆ” ಬಂತು..? ಜಾಸ್ತಿ ಬೇಡ… ಈ ರೀತಿ ನಾಲ್ಕೈದು ಮ್ಯಾಚ್‍ನಲ್ಲಿ ಆಡುತ್ತಿದ್ರೆ ನೀನೇ ಟೀಮ್ ಇಂಡಿಯಾ ಕ್ಯಾಪ್ಟನ್ ಆಗ್ತಿದ್ದೇಯಲ್ವಾ.. ಎಂಥಾ ಚಾನ್ಸ್ ಮಿಸ್ ಮಾಡ್ಕೊಂಡೆ..! ಡೋಂಟ್ ವರಿ. ಕಾದು ನೋಡು..ಆಟದ ಕಡೆ ಗಮನ ಕೊಡು..ನಿಂಗೂ ಟೈಮ್ ಬಂದೇ ಬರುತ್ತೆ..!
ಯಾಕಂದ್ರೆ ನೀನು ಅಂತಿಂಥನವಲ್ಲ..!
ಘನಘೋರ ಅಪಘಾತದಲ್ಲಿ ಬೆಂಕಿಯ ಜ್ವಾಲೆಯ ಜೊತೆ ಸರಸವಾಡಿದವನು ಸಣ್ಣ ಪುಟ್ಟ ವಿಚಾರಕ್ಕೆಲ್ಲ ತಲೆಕೆಡಿಸಿಕೊಳ್ಳುವನಲ್ಲ. ಭಯಾನಕ ಸಾವನ್ನೇ ಗೆದ್ದು ಬಂದವನಿಗೆ ಫಾರ್ಮ್ ಕಂಡುಕೊಳ್ಳುವುದು ದೊಡ್ಡ ವಿಷ್ಯವೇನಲ್ಲ. ಸಚಿನ್, ವಿರಾಟ್‍ನಂತೆ ಎಂಟು ವರ್ಷಗಳ ಹಿಂದೆ ತನ್ನ ಅಪ್ಪನ ನಿಧನದ ಸೂತಕದÀ ನಡುವೆಯೂ ಅಬ್ಬರಿಸಿ ಆಡಿದವನ ಆತ್ಮವಿಶ್ವಾಸ ಯಾವತ್ತೂ ಕುಗ್ಗಿ ಹೋಗಲ್ಲ. ಟೀಕೆ, ಆರೋಪ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹಂಗಿಸಿದವರಿಗೆ ಬ್ಯಾಟ್‍ನಿಂದಲೇ ತಕ್ಕ ಉತ್ತರ ನೀಡಿರುವುದು ತಮಾಷೆಯ ಸಂಗತಿಯೂ ಅಲ್ಲ.
ಅದರಲ್ಲೂ 2025ರ ಐಪಿಎಲ್‍ನ 27 ಕೋಟಿಯ ಆಟಗಾರನ ಕಳಪೆ ಪ್ರದರ್ಶನವನ್ನು ಮರೆಮಾಚುವಂತೆ ಮಾಡಿದ್ದು ಅದೊಂದು ಸ್ಫೋಟಕ ಶತಕ ಎಂಬುದು ಕೂಡ ಸುಳ್ಳಲ್ಲ.
ಕೆಟ್ಟ ಹೊಡೆತ, ಕೆಟ್ಟ ಫಾರ್ಮ್‍ನಿಂದ ಕಂಗೆಟ್ಟಿದ್ದ ರಿಷಬ್ ಪಂತ್‍ಗೆ ಈ ಶತಕ ಖಂಡಿತವಾಗಿಯೂ ಬೂಸ್ಟ್ ನೀಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ದುಬಾರಿ ದುಡ್ಡು ಕೊಟ್ಟು ಕೆಟ್ಟೆ ಎಂದು ಕೊರಗುತ್ತಿದ್ದ ಎಲ್‍ಎಸ್‍ಜಿ ಮಾಲೀಕನಿಗೆ ತುಸು ನೆಮ್ಮದಿಯನ್ನುಂಟು ಮಾಡಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗೇ, ಅಪಾಯಕಾರಿಯಾಗಿ ಪಲ್ಟಿ ಹೊಡೆದು ಶತಕವನ್ನು ಸಂಭ್ರಮಿಸುವ ಅಗತ್ಯವಿರಲಿಲ್ಲ. ಆದ್ರೆ ಐಪಿಎಲ್‍ನಲ್ಲಿ ಏಳು ವರ್ಷದ ಬಳಿಕ ಸಿಡಿಸಿದ ಶತಕ ಹಾಗೂ ಈ ಪರಿಯ ಸಂಭ್ರಮದಿಂದ ಕಳೆದುಹೋಗಿದ್ದ ಸ್ಪೈಡರ್ ಮ್ಯಾನ್‍ನ ಗ್ರೇಟ್ ಕಮ್ ಬ್ಯಾಕ್ ಎಂದು ಅನ್ನುವುದರಲ್ಲಿ ತಪ್ಪೇನಿಲ್ಲ.
ಹೌದು, ರಿಷಬ್ ಪಂತ್ ಐಪಿಎಲ್‍ನಲ್ಲಿ ಸುಮಾರು ವರ್ಷಗಳ ನಂತರ ಮಹೋನ್ನತ ಇನಿಂಗ್ಸ್ ಆಡಿದ್ದಾರೆ. ಟಿಪಿಕಲ್ ಪಂತ್ ಆಟವನ್ನು ನೋಡುವುದೇ ಚೆಂದ. ಆದ್ರೆ ಯಾವಾಗ ಔಟ್ ಆಗ್ತಾನೆ ಅನ್ನೋ ಆತಂಕ ಮಾತ್ರ ಕಾಡುತ್ತಲೇ ಇರುತ್ತದೆ. ಆದ್ರೂ ಕ್ರೀಸ್‍ನಲ್ಲಿದ್ದಷ್ಟು ಸಮಯ ಮಾತ್ರ ಪಂತ್ ಪಕ್ಕಾ ಎಂಟೈಟೇನರ್. ಅದ್ರಲ್ಲಿ ದೂಸ್ರಾ ಮಾತೇ ಇಲ್ಲ.
ಯಾಕಂದ್ರೆ ಪಂತ್ ಬ್ಯಾಟಿಂಗ್ ಶೈಲಿಯೇ ವಿಚಿತ್ರವಾಗಿದೆ. ಒಂದೇ ಕೈಯಲ್ಲಿ ಸಿಕ್ಸ್ ಹೊಡಿತಾನೆ.. ವೈಡ್ ಬಾಲ್‍ಗೂ ಹೊಡೆಯೋಕೆ ಹೋಗಿ ನೆಲಕ್ಕೆ ಬೀಳ್ತಾನೆ. ಎದ್ದೋ ಬಿದ್ದೋ ಆಡೋದು ಆತನ ಜಾಯಮಾನ. ಪರಿಪೂರ್ಣ 360 ಡಿಗ್ರಿ ಅಂತಲ್ಲ. ಆದ್ರೆ 360 ಡಿಗ್ರಿಯಲ್ಲಿ ಆಡುವ ಕಲೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾನೆ. ಒಂದು ರೀತಿಯಲ್ಲಿ ಪಂತ್‍ನನ್ನು ಅರ್ಥಮಾಡಿಕೊಳ್ಳುವುದು ಕೂಡ ಕಷ್ಟ ಕಷ್ಟ.
ಕೆಲವರು ಪಂತ್ ಆಟವನ್ನು ಇಷ್ಟಪಡಲ್ಲ. ತಂಡದಲ್ಲಿರುವುದೇ ವೇಸ್ಟ್ ಅಂತ ಹೀಯಾಳಿಸುತ್ತಾರೆ. ಆದ್ರೆ ನೆನಪಿಡಿ, ರಿಷಬ್‍ನನ್ನು ಹಾಗೇ ಸುಮ್ಮನೆ ತಂಡದಲ್ಲಿ ಸೇರಿಕೊಂಡಿಲ್ಲ.ಆತನ ಪ್ರತಿಭೆ, ಸಾಮಥ್ರ್ಯವನ್ನು ಅರಿತುಕೊಂಡೇ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ. ಆತನ ಹುಡುಗಾಟದ ಬ್ಯಾಟಿಂಗ್‍ನಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾನೆ. ತಾಳ್ಮೆ ಮತ್ತು ಸಮಯೋಚಿತವಾಗಿ ಆಡಲ್ಲ. ಕಠಿಣ ಸಂದರ್ಭದಲ್ಲೂ ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೊಟ್ಟುಬಿಡ್ತಾನೆ. ಹೀಗೆ ಪಂತ್ ಕ್ರಿಕೆಟ್ ಪಂಡಿತರು, ಕ್ರಿಕೆಟ್ ಪ್ರೇಮಿಗಳು ಟೀಕೆ ಟಿಪ್ಪಣಿ ಮಾಡ್ತಾರೆ. ಆದ್ರೂ ಒಂದಂತೂ ಸತ್ಯ, ಕೆಲವೊಂದು ಪಂದ್ಯಗಳಲ್ಲಿ ಸೋಲುವ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾನೆ. ಗೆಲ್ಲುವ ಪಂದ್ಯವನ್ನು ಸೋಲಿನತ್ತ ಮುಖಮಾಡುವಂತೆ ಮಾಡಿದ್ದಾನೆ. ಆಟ ಅಂದ ಮೇಲೆ ಇದೆಲ್ಲಾ ಸಹಜ. ಹಾಗಂತ ಎಲ್ಲಾ ಪಂದ್ಯಗಳನ್ನು ಗೆಲ್ಲಿಸಬೇಕು… ಎಲ್ಲಾ ಪಂದ್ಯಗಳಲ್ಲಿ ಶತಕ ದಾಖಲಿಸಬೇಕು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಆದ್ರೂ ಸ್ಥಿರ ಪ್ರದರ್ಶನ ನೀಡುವತ್ತ ಚಿತ್ತ ಹರಿಸಬೇಕು. ತಂಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಿಷಬ್ ಪಂತ್ ವರ್ಕ್ ಮಾಡಲೇಬೇಕು.
ಹಾಗೇ ನೋಡಿದ್ರೆ ರಿಷಬ್ ಪಂತ್‍ಗೆ ಟೀಮ್ ಇಂಡಿಯಾದ ನಾಯಕತ್ವ ತಾನಾಗಿಯೇ ಒಲಿದುಬರಬೇಕಿತ್ತು. ಕ್ಯಾಪ್ಟನ್‍ಗೆ ಬೇಕಾಗಿರುವ ಎಲ್ಲಾ ಅರ್ಹತೆಗಳಿದ್ದವು. ವಿಕೆಟ್ ಹಿಂದೆ ನಿಂತುಕೊಂಡೇ ಪಂದ್ಯದ ಗತಿಯನ್ನು ಅರಿತುಕೊಳ್ಳುವ ಕಲೆಯನ್ನು ಕಲಿಯುತ್ತಿದ್ದ. ಆದ್ರೆ ಯಶಸ್ಸಿನ ಹಾದಿಯಲ್ಲಿರುವಾಗಲೇ ಭಯಾನಕ ಅಪಘಾತ ಪಂತ್‍ನ ಕನಸನ್ನು ನುಚ್ಚುನೂರು ಮಾಡುವಂತೆ ಮಾಡಿತ್ತು. ಇನ್ನೇನೂ ಕ್ರಿಕೆಟ್ ಬದುಕು ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ ಮತ್ತೆ ಮೇಲೆದ್ದು ಬಂದ ರೀತಿ ಪವಾಡ ಅಂತ ಭಾಸವಾಗುತ್ತದೆ.
ದೇಹಕ್ಕೆ ಘಾಸಿಯಾದ್ರೂ ಪಂತ್ ಮನಸ್ಸಿಗೆ ಮಾತ್ರ ಒಂಚೂರು ಘಾಸಿಯಾಗಿರಲಿಲ್ಲ. ಮತ್ತೆ ಆಡಿಯೇ ಆಡ್ತಾನೆ ಅನ್ನೋ ಅಪಾರವಾದ ಆತ್ಮವಿಶ್ವಾಸವೇ ರಿಷಬ್ ಪಂತ್‍ನ ಮರುಜನ್ಮದ ಶಕ್ತಿ.
ಹುಟ್ಟಿದ ಮಗು ಹಂತ ಹಂತವಾಗಿ ಯಾವ ರೀತಿ ಬೆಳೆಯುತ್ತದೆಯೋ ಅದೇ ರೀತಿ ಪಂತ್ ಕೂಡ ಬೆಳೆದಿರುವುದು. ಕೈ ಕಾಲಿಗೆ ಪ್ಲ್ಯಾಸ್ಟರ್ ಹಾಕೊಂಡು, ಹಾಸಿಗೆ ಮೇಲೆ ಮಲಗಿದ್ದ ಪಂತ್‍ಗೆ ಕೆಲವು ದಿನ ತನ್ನ ದೈನಂದಿನ ದಿನಚರಿ ಮಾಡುವುದಕ್ಕೂ ಕಷ್ಟವಾಗುತ್ತಿತ್ತು. 25 ವರ್ಷದ ಪಂತ್‍ನನ್ನು ಅವರ ತಾಯಿ ಸರೋಜ ಪಂತ್ ಮತ್ತೆ ಪುಟ್ಟ ಮಗುವಿನಂತೆ ಲಾ¯ನೆ ಪಾ¯ನೆ ಮಾಡಿದ್ದರು. ಯಾವಾಗ ಊರುಗೋಲಿನ ನೆರವಿನಿಂದ ಪಂತ್ ನಡೆದಾಡಲು ಶುರು ಮಾಡಿದ್ದ ನಂತರ ಮತ್ತೆ ಕ್ರಿಕೆಟ್ ಆಡಬಲ್ಲೇ ಎಂಬ ನಂಬಿಕೆ ಹೆಚ್ಚಾಯ್ತು. ವೈದ್ಯರು ಹೇಳಿರುವುದಕ್ಕಿಂತ ಮುನ್ನವೇ ರಿಕವರಿ ಆಗಿದ್ದ ರಿಷಬ್ ಪಂತ್‍ನನ್ನು ರಿಷಬ್ ಪಂತ್‍ನನ್ನಾಗಿಸಿದ್ದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ. ಬಳಿಕ ಅಂತಾರಾಷ್ಟ್ರೀಯ ಮೈದಾನದಲ್ಲಿ ಕಾಣಿಸಿಕೊಂಡ ರಿಷಬ್ ಪಂತ್‍ನನ್ನು ಕ್ರಿಕೆಟ್ ಜಗತ್ತು ಅಭೂತಪೂರ್ವವಾಗಿಯೇ ಬರಮಾಡಿಕೊಂಡಿತ್ತು.
ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ರೆ ಇವತ್ತು ರಿಷಬ್ ಪಂತ್ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಗಬೇಕಿತ್ತು. ಸಚಿನ್, ಗಂಗೂಲಿ, ರಾಹುಲ್, ಧೋನಿ, ವಿರಾಟ್, ರೋಹಿತ್‍ನಂತೆ ಟೀಮ್ ಇಂಡಿಯಾದ ಘನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಎಲ್ಲಾ ಅರ್ಹತೆ ಪಂತ್‍ಗಿತ್ತು. ಸಚಿನ್, ಸೆಹ್ವಾಗ್, ಧೋನಿ, ವಿರಾಟ್, ರೋಹಿತ್‍ನಂತೆ ಪ್ರೇಕ್ಷಕರನ್ನು ಮೈದಾನಕ್ಕೆ ಕರೆತರುವ ಚಾರ್ಮು ರಿಷಬ್ ಬ್ಯಾಂಟಿಂಗ್‍ನಲ್ಲಿದೆ. ಅಲ್ಲದೆ, ವಿಶ್ವ ಕ್ರಿಕೆಟ್‍ನ ಕಾರ್ಪೊರೇಟ್ ಕಂಪೆನಿಗಳ ಕಣ್ಮನಿ ಕೂಡ ಆಗಿದ್ದಾನೆ. ರಿಷಬ್ ಪಂತ್ ಅನ್ನೋ ನೇಮ್‍ಗೆ ತನ್ನದೇ ಆದ ಬ್ರ್ಯಾಂಡ್ ವ್ಯಾಲ್ಯೂ ಕೂಡ ಇದೆ.
ಆದ್ರೆ ರಿಷಬ್ ಮಾಡುತ್ತಿರುವ ಕೆಲವೊಂದು ಎಡವಟ್ಟುಗಳು, ಹುಂಬುತನ, ಅತೀಯಾದ ಆತ್ಮವಿಶ್ವಾಸ ಅವರ ಏಳಿಗೆಗೆ ಅಡ್ಡಿಯನ್ನುಂಟು ಮಾಡಿವೆ. ಅದನ್ನು ಸರಿಪಡಿಸಿಕೊಂಡು ಮುನ್ನಡೆದ್ರೆ ಪಂತ್ ಟೀಮ್ ಇಂಡಿಯಾದ ತಾರೆಯಾಗಬಹುದು.ವಿಶ್ವ ಕ್ರಿಕೆಟ್‍ನಲ್ಲೂ ಪ್ರಜ್ವಲಿಸಬಹುದು.. ಆ ನಿಟ್ಟಿನಲ್ಲಿ ಈಗ ಟೈಮ್ ಸರಿ ಇಲ್ಲದಿರಬಹುದು.. ಯಾವುದಕ್ಕೂ ಕಾದು ನೋಡೋಣ.. ಯಾಕಂದ್ರೆ ಸಾವನ್ನು ಗೆದ್ದವನಿಗೆ ಕ್ರಿಕೆಟ್ ಜಗತ್ತನ್ನು ಆಳುವುದು ಕಷ್ಟವೇನೂ ಆಗಲ್ಲ. ಯಾರಿಗೆ ಗೊತ್ತು ಯಾರ ಹಣೆಯಲ್ಲಿ ಏನೇನು ಬರೆದಿದೆ ಅಂತ.
ಸನತ್ ರೈ








