ಬೆಂಗಳೂರು: ರಾಜ್ಯದ ನೀರಾವರಿ ಹಿತಾಸಕ್ತಿ ಮತ್ತು ನದಿ ಜೋಡಣೆ ವಿಚಾರದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತೋರುತ್ತಿರುವ ಧೋರಣೆಯ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನದಿಗಳ ಜೋಡಣೆ ಮಾಡುವುದು ಎಂದರೆ ಬೆಂಗಳೂರಿನಲ್ಲಿ ಕುಳಿತು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದ ಹಾಗಲ್ಲ ಎಂದು ಹೇಳುವ ಮೂಲಕ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಗತಿ ಪರಿಶೀಲನೆ ಹೆಸರಿನಲ್ಲಿ ರಾಜ್ಯಾದ್ಯಂತ ಜಾಲಿ ಟ್ರಿಪ್ ಮಾಡುತ್ತಿರುವ ಮುಖ್ಯಮಂತ್ರಿಗಳು, ನೀರಾವರಿ ವಿಚಾರದಲ್ಲಿ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕೃಷ್ಣಾ, ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ವಿಚಾರದಲ್ಲಿ ರಾಜ್ಯದ ಪರಮೋಚ್ಛ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಲ್ಲದ ಮಾತು ನಗೆಪಾಟಲು
ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ನದಿ ಜೋಡಣೆಗೆ ರಾಜ್ಯದ ಸಮ್ಮತಿ ಇದೆ ಎಂದು ಹೇಳಿರುವುದು ಅತ್ಯಂತ ಬೇಜವಾಬ್ದಾರಿತನದ ಪರಮಾವಧಿ. ನದಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಸಿಗುವ ನೀರಿನ ಪಾಲು ಎಷ್ಟು ಎಂಬ ಕನಿಷ್ಠ ಮಾಹಿತಿಯೂ ಅವರಿಗೆ ಇಲ್ಲದಿರುವುದು ದುರಂತ. ಕೇವಲ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗುವ ಬದಲು, ನೀರಾವರಿ ತಜ್ಞರು ಅಥವಾ ಇಲಾಖೆಯ ಎಂಜಿನಿಯರ್ ಗಳ ಬಳಿ ಮಾಹಿತಿ ಪಡೆಯಬೇಕಿತ್ತು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಅಲ್ಲ ಇದು ನೀರಿನ ಪ್ರಶ್ನೆ
ನದಿ ಜೋಡಣೆ ಎಂಬುದು ಅತ್ಯಂತ ಸೂಕ್ಷ್ಮ ಮತ್ತು ತಾಂತ್ರಿಕ ವಿಚಾರ. ಇದನ್ನು ಬೆಂಗಳೂರಿನಲ್ಲಿ ಸೈಟು ಮಾರುವ ರಿಯಲ್ ಎಸ್ಟೇಟ್ ದಂಧೆಯಂತೆ ನೋಡಬಾರದು. 2023ರ ಕೇಂದ್ರದ ಡಿಪಿಆರ್ ಪ್ರಕಾರ ಕರ್ನಾಟಕಕ್ಕೆ ಹನಿ ನೀರು ಸಿಕ್ಕಿರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಸುದೀರ್ಘ ಹೋರಾಟದ ಫಲವಾಗಿ ರಾಜ್ಯಕ್ಕೆ ಕೇವಲ 15 ಟಿಎಂಸಿ ನೀರು ದಕ್ಕಿದೆ. ಸತ್ಯ ಹೀಗಿರುವಾಗ ರಾಜ್ಯದ ಸಮ್ಮತಿ ಇದೆ ಎಂದು ಹೇಳಲು ಯಾವ ಆಧಾರವಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಜನರ ಕಿವಿಗೆ ಹೂವು ಇಡುವ ಪ್ರಯತ್ನ
ಹಿಂದೆ ಕಾಂಗ್ರೆಸ್ ನಾಯಕರು ವಿಧಾನಸಭೆಗೆ ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದಿದ್ದರು. ಆದರೆ ಈಗಿನ ಮುಖ್ಯಮಂತ್ರಿಗಳು ಇಡೀ ರಾಜ್ಯದ ಜನರ ಕಿವಿಗೆ ಹೂವು ಇಡಲು ಹೊರಟಿದ್ದಾರೆ. ತುಂಗಭದ್ರಾ ಹೂಳು ತೆಗೆಯುವ ವಿಚಾರದಲ್ಲಿ ನೆರೆ ರಾಜ್ಯಗಳ ಜೊತೆ ಚರ್ಚೆ ಮಾಡಿದ್ದೇನೆ ಎನ್ನುವ ಸಿಎಂ, ರಾಜ್ಯದ ಜನತೆಗೆ ಅಥವಾ ವಿರೋಧ ಪಕ್ಷಗಳಿಗೆ ಯಾವುದೇ ಮಾಹಿತಿ ನೀಡದೆ ಎಲ್ಲವನ್ನೂ ಕತ್ತಲೆಯಲ್ಲಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ದಾನಶೂರ ಕರ್ಣನಾಗಬೇಡಿ
ನಮ್ಮ ರಾಜ್ಯದ ಹಣದಲ್ಲಿ ಯೋಜನೆ ಜಾರಿಯಾಗಿ, ನೀರು ಮಾತ್ರ ನೆರೆ ರಾಜ್ಯಗಳಿಗೆ ಹರಿಯುವಂತೆ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಇದ್ದಕ್ಕಿದ್ದಂತೆ ಉದಾರತೆ ಬಂದಂತಿದೆ. ಅಕ್ಕಪಕ್ಕದ ರಾಜ್ಯಗಳ ವಿರುದ್ಧ ಸಂಘರ್ಷ ಮಾಡುವುದನ್ನು ಬಿಟ್ಟು, ನಮ್ಮ ಪಾಲಿನ ನೀರನ್ನು ಬಿಟ್ಟುಕೊಡುವ ದಾನಶೂರ ಕರ್ಣನಂತೆ ವರ್ತಿಸುತ್ತಿರುವುದು ಕನ್ನಡಿಗರಿಗೆ ಮಾಡುವ ದ್ರೋಹ ಎಂದು ಎಚ್ಚರಿಸಿದ್ದಾರೆ.
ನೀರಾವರಿ ಜ್ಞಾನದ ಅಗತ್ಯವಿದೆ
ಸಿಎಂ ಅವರೇ, ನಿಮಗೆ ಮಾಹಿತಿ ಇಲ್ಲದಿದ್ದರೆ ನಿಮ್ಮದೇ ಪಕ್ಷದ ನಾಯಕ ಹೆಚ್ ಕೆ ಪಾಟೀಲ್ ಅವರ ಬಳಿ ಕೇಳಿ. ಅವರು ಕೃಷ್ಣಾ ಕಣ್ಣೀರ ಕಥೆ ಎನ್ನುವ ಪುಸ್ತಕ ಬರೆದಿದ್ದಾರೆ. ಕನಿಷ್ಠ ಅವರ ಸಲಹೆಯನ್ನಾದರೂ ಪಡೆಯಿರಿ. ನೀರಿನ ಹಂಚಿಕೆಯ ಮಿತಿ ನಿಗದಿಯಾಗದೆ ಯೋಜನೆಕ್ಕೆ ಒಪ್ಪಿಗೆ ಕೊಟ್ಟರೆ ಮುಂದಿನ ಪೀಳಿಗೆ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.








