ಬೆಂಗಳೂರು, ಮೇ 21 : ದಿನದಿಂದ ದಿನಕ್ಕೆ ಏರುತ್ತಿರುವ ಕೊರೊನಾ ಪ್ರಕರಣಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಮತ್ತು ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ ಪ್ರಕ್ರಿಯೆಯನ್ನು ಚುರುಕು ಗೊಳಿಸುವ ಉದ್ದೇಶದಿಂದ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯು ಕೊರೊನಾ ವೈರಸ್ ಸೋಂಕು ತಪಾಸಣೆಗೆ ‘ಮಿತ್ರ’ ಎಂಬ ರೋಬೊಟಿಕ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಕೊರೋನಾ ವೈರಸ್ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು ಮತ್ತು ಶೀತವಿದ್ದರೆ, ತಪಾಸಣೆ ನಡೆಸುವ ರೋಬೊ ಸಂವಹನದ ಮೂಲಕ ಮಾಹಿತಿ ನೀಡುತ್ತದೆ. ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಆಸ್ಪತ್ರೆ ಪ್ರವೇಶಿಸುವ ಸಂದರ್ಭದಲ್ಲಿ ರೋಬೊ ’ಮಿತ್ರ‘ ಥರ್ಮಲ್ ಪರೀಕ್ಷೆ ಜತೆ ಇತರ ಪ್ರಾಥಮಿಕ ತಪಾಸಣೆಯನ್ನು ಕೂಡ ನಡೆಸುತ್ತದೆ. ಅಷ್ಟೇ ಅಲ್ಲ ಚಿಕಿತ್ಸೆಗೆಂದು ಬರುವ ರೋಗಿಗಳನ್ನು ಮತ್ತು ಅವರ ಮನೆಯವರನ್ನು ರೋಬೊ ತಪಾಸಣೆ ನಡೆಸುತ್ತದೆ.
ರೋಗಿಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಕೊರೊನಾ ಸೋಂಕಿತರಿದ್ದರೆ, ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ಹರಡುವ ಸಾಧ್ಯತೆ ಬಹಳಷ್ಟಿರುತ್ತದೆ. ಇದೀಗ ರೋಬೊ ’ಮಿತ್ರ‘ ಅಳವಡಿಸಿರುವುದರಿಂದ ಆರೋಗ್ಯ ಸಿಬ್ಬಂದಿಗಳಿಗೆ ಸ್ವಲ್ಪ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಫೋರ್ಟಿಸ್ ಆಸ್ಪತ್ರೆಯ ವಲಯ ನಿರ್ದೇಶಕ ಡಾ.ಮನೀಶ್ ಮಟ್ಟೂ ಅವರು ರೋಬೊ ’ಮಿತ್ರ‘ನ ಬಗ್ಗೆ ಮಾತನಾಡಿದ್ದು, ಜಗತ್ತಿನಾದ್ಯಂತ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ವೈದ್ಯರು ಹಾಗೂ ಇತರೆ ಸಿಬ್ಬಂದಿಯಲ್ಲಿ ಸೋಂಕು ಪ್ರಮಾಣ ಅಧಿಕವಾಗಿದೆ. ಇದರಿಂದ ಕೊರೊನಾ ವೈರಸ್ ವಿರುದ್ಧದ ಹೋರಾಟ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಬೊಟಿಕ್ ತಪಾಸಣೆ ಸೂಕ್ತವೆಂದು ನಮಗನಿಸಿತು‘ ಎಂದು ಹೇಳಿದ್ದಾರೆ.
ರೋಬೊ ’ಮಿತ್ರ‘ ದ ಮೂಲಕ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿಯೇ ರೋಗಿಗಳು, ಅವರ ಆರೈಕೆಗಾಗಿ ಬರುವವರು ಮತ್ತು ನಮ್ಮ ವೈದ್ಯಕೀಯ ಸಿಬ್ಬಂದಿಗಳನ್ನು ತಪಾಸಣೆ ನಡೆಸುತ್ತಿದ್ದೇವೆ. ಈ ಪ್ರಕ್ರಿಯೆಯಿಂದಾಗಿ ಕೊರೊನಾ ಸೋಂಕು ತಗುಲಿರುವ ಯಾವುದೇ ವ್ಯಕ್ತಿ ಆಸ್ಪತ್ರೆಯ ಒಳಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಈ ರೋಬೊಟಿಕ್ ಕೊರೊನಾ ತಪಾಸಣೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತಿದ್ದು ಮೊದಲ ರೋಬೊ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಇದ್ದು, ಆಸ್ಪತ್ರೆ ಒಳ ಬರುವ ವ್ಯಕ್ತಿಯ ಹೆಸರು ನೋಂದಾಯಿಸಿಕೊಂಡು ಮೊಬೈಲ್ ಸಂಖ್ಯೆ ಪಡೆದುಕೊಳ್ಳುತ್ತದೆ. ನಂತರ ದೇಹದ ಉಷ್ಣಾಂಶ ತಪಾಸಣೆ ನಡೆಸಲಿದ್ದು, ಕೆಮ್ಮು ಮತ್ತು ಶೀತಕ್ಕೆ ಒಳಗೊಂಡಂತೆ ಕೊರೊನಾ ವೈರಸ್ ಸೋಂಕುಗೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ವ್ಯಕ್ತಿಯಲ್ಲಿ ಕೆಮ್ಮು ಮತ್ತು ಶೀತದಂತಹ ಯಾವುದೇ ಲಕ್ಷಣಗಳು ಕಂಡು ಬರದಿದ್ದು, ಉಷ್ಣಾಂಶ ಸಾಮಾನ್ಯ ಸ್ಥಿತಿಯಲ್ಲಿದ್ದರೆ ಮಾತ್ರ ಈ ರೊಬೊ ಅವರಿಗೆ ಆಸ್ಪತ್ರೆ ಪ್ರವೇಶಿಸುವ ಪಾಸ್ ನ ಪ್ರಿಂಟ್ ಕೊಡುತ್ತದೆ. ಈ ಪಾಸ್ ನಲ್ಲಿ ತಪಾಸಣೆ ನಡೆಸಿದ ಫಲಿತಾಂಶ, ವ್ಯಕ್ತಿಯ ಹೆಸರು, ಫೋಟೊ ಇರುತ್ತದೆ.
ತಪಾಸಣೆಯ ವೇಳೆ ವ್ಯಕ್ತಿಯ ದೇಹದ ಉಷ್ಣಾಂಶ ಅಧಿಕವಿದ್ದರೆ ಅಥವಾ ಶೀತ ಮತ್ತು ಕೆಮ್ಮು ಇರುವುದು ಕಂಡು ಬಂದರೆ, ರೋಬೊ ‘ತಪಾಸಣೆ ಪ್ರಕ್ರಿಯೆ ಅನುತ್ತೀರ್ಣ‘ ಎಂದು ನಮೂದಿಸಿ ಪಾಸ್ ನೀಡಿ, ಮುಂದಿನ ರೋಬೊದ ಬಳಿ ಹೋಗುವಂತೆ ಸಲಹೆ ನೀಡುತ್ತದೆ ಮತ್ತು ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ಈ ಮೊದಲೇ ಎರಡನೇ ರೋಬೊ ಗೆ ರವಾನಿಸಿರುತ್ತದೆ. ‘ ತಪಾಸಣೆ ಅನುತ್ತೀರ್ಣ’ ಪಾಸ್ ಹಿಡಿದ ವ್ಯಕ್ತಿ ಎರಡನೇ ರೋಬೊ ಬಳಿ ಬರುತ್ತಿದ್ದಂತೆ, ಆ ವ್ಯಕ್ತಿಯ ವಿವರಗಳು ತೆರೆದುಕೊಳ್ಳುತ್ತದೆ. ಫೀವರ್ ಕ್ಲಿನಿಕ್ ನಲ್ಲಿರುವ ವೈದ್ಯರಿಗೆ ವಿಡಿಯೋ ಮೂಲಕ ಸಂಪರ್ಕ ಕಲ್ಪಿಸಿ, ವೈದ್ಯರು ವ್ಯಕ್ತಿಯನ್ನು ಮಾತನಾಡಿಸಿ ಹೆಚ್ಚಿನ ಮಾಹಿತಿ ಪಡೆಯುವಂತೆ ಮಾಡುತ್ತದೆ. ರೋಬೊ ’ಮಿತ್ರ‘ ವ್ಯಕ್ತಿಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಇಲ್ಲದಿದ್ದ ಪಕ್ಷದಲ್ಲಿ ಆಸ್ಪತ್ರೆಯ ಒಳಗೆ ಹೋಗಲು ಅನುಮತಿ ನೀಡುತ್ತದೆ ಮತ್ತು ಕೊರೊನಾ ವೈರಸ್ ಸೋಂಕು ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ಮಾಹಿತಿ ನೀಡಿ, ವ್ಯಕ್ತಿಯನ್ನು ಮುಂದಿನ ಚಿಕಿತ್ಸೆಗೆ ಕಳಿಸುತ್ತದೆ.








