ಸಲಾರ್ ನಲ್ಲಿ ರಾಕಿ ಬಾಯ್ ದರ್ಶನ; ಅತಿಥಿ ಪಾತ್ರದಲ್ಲಿ ನಟಿಸ್ತಾರ ಯಶ್ ?
ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಲಾರ್’ ಚಿತ್ರದಲ್ಲಿ ನಟ ಯಶ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.
ಸಲಾರ್ ಸಿನಿಮಾ ನಿರ್ದೇಶಕರು ಪ್ರಭಾಸ್ ಮತ್ತು ಯಶ್ ಇಬ್ಬರನ್ನು ಒಂದೇ ಫ್ರೇಮ್ ನಲ್ಲಿ ತರುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ ಚಿತ್ರದ ರಾಕಿ ಭಾಯ್ ಪಾತ್ರದಲ್ಲಿಯೇ ಯಶ್, ಸಲಾರ್ನಲ್ಲಿ ದರ್ಶನ ನೀಡಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ವದಂತಿಗಳು ಖಚಿತವಾದರೇ ಪ್ಯಾನ್ ಇಂಡಿಯಾ ನಾಯಕರುಗಳು ಪ್ರಭಾಸ್ ಮತ್ತು ಯಶ್ ಇಬ್ಬರು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಕೆಜಿಎಫ್ ಸರಣಿಗೂ ಸಲಾರ್ ಗೂ ಕನೆಕ್ಷನ್ ಇದೆ ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಿದೆ. ಕೆಜಿಎಫ್ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಅವರ ಮಲ್ಟಿ ಯೂನಿವರ್ಸ್ ಸಿನಿಮಾದ ಹೇಳಿಕೆ ನಂತರ ಇದು ಮತ್ತಷ್ಟು ಧೃಡವಾಗುತ್ತಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ‘ಸಲಾರ್’ ತಯಾರಾಗುತ್ತಿದ್ದು, ಕೆಜಿಎಫ್ ನಲ್ಲಿ ಕಾರ್ಯನಿರ್ವಹಿಸಿದ್ದ ತಾಂತ್ರಿಕ ತಜ್ಞರೇ ಇದರಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಛಾಯಾಗ್ರಾಹಕ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್, ‘ಸಲಾರ್’ ಸಿನಿಮಾಕ್ಕೂ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ.