“ನನಗೆ ಕೆಲಸ ಮಾಡಲು ಬಿಡಲಿಲ್ಲ, ತವರು ಮನೆ ತೊರೆದು ಹೋಗ್ತಿದ್ದೀನಿ” : ರೋಹಿಣಿ ಸಿಂಧೂರಿ ಭಾವುಕ
ಮೈಸೂರು : ಮೈಸೂರಿನ ಜನ ನನ್ನನ್ನು ಮನೆ ಮಗಳಂತೆ ಕಂಡಿದ್ದಾರೆ. ತವರು ಮನೆ ಬಿಟ್ಟು ಹೋಗುವ ಭಾವನೆ ನನಗೆ ಆಗುತ್ತಿದೆ. ಮೈಸೂರಿಗೆ ಜನತೆಗೆ ನನ್ನ ಧನ್ಯವಾದಗಳು ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಭಾವನಾತ್ಮಕ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲಾ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ.
ಈ ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಈ ವರ್ಗಾವಣೆ ಆಗಿದೆ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ ಎಂದು ಭಾವುಕರಾದರು.
ಇದೇ ವೇಳೆ ಭೂ ಮಾಫಿಯಾ ಬಗ್ಗೆ ಮಾತನಾಡಿ, ನನಗೆ ಕೆಲಸ ಮಾಡಲು ಬಿಡಲಿಲ್ಲ. ಕೆಲವರು ಅನಗತ್ಯವಾಗಿ ತೊಂದರೆ ಕೊಟ್ಟರು. ಭೂಮಿ ಒತ್ತುವರಿ ತೆರವು ಮಾಡಲು ನಾನು ಪ್ರಯತ್ನ ಮಾಡಿದ್ದೆ.
ಕೆರೆಗಳನ್ನು ಉಳಿಸೋದು, ಸರ್ಕಾರಿ ಭೂಮಿ ರಕ್ಷಣೆ ಮಾಡೋದು ನನ್ನ ಆದ್ಯತೆ ಆಗಿತ್ತು. ಆ ನಿಟ್ಟಿನಲ್ಲಿ ಮೊದಲ ದಿನದಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಕೇರ್ಗಳ್ಳಿ ಕೆರೆಯ ಒತ್ತುವರಿ ತೆರವು ಮಾಡಿ ನೀರು ತುಂಬಿಸಲು ಪ್ರಯತ್ನಿದ್ದೆ.
ಅದರ ಜತೆಗೆ ಸರ್ವೇ ನಂ. 4ರ 1500 ಎಕರೆ ಜಾಗ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‍ನಲ್ಲೂ ಒಳ್ಳೆಯ ಲಾಯರ್ ಇಟ್ಟು ಹೋರಾಟ ಮಾಡುತ್ತಿದ್ದೇವೆ. ಕೋವಿಡ್ ನಿಯಂತ್ರಣಕ್ಕೂ ಪ್ರಾಮುಖ್ಯತೆ ಕೊಟ್ಟು ಕೆಲಸ ಮಾಡಿದ್ದೇನೆ.
ವ್ಯಾಕ್ಸಿನೇಷನ್‍ನಲ್ಲಿ ಮೈಸೂರು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜುಲೈ ವೇಳೆಗೆ ಮೈಸೂರನ್ನು ಕರೊನಾ ಮುಕ್ತ ಅಂತ ಘೋಷಣೆ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಶಿಲ್ಪಾ ನಾಗ್ ಬಗ್ಗೆ ಮಾತನಾಡಿ, ಶಿಲ್ಪಾನಾಗ್ ಬಗ್ಗೆ ನನಗೆ ಅನುಕಂಪ ಇದೆ. ಅವರ ಮಾತಲ್ಲಿ ಇನ್‍ಸೆಕ್ಯೂರಿಟಿ ಕಾಣಿಸುತ್ತಿದೆ. ಆ ಹತಾಸೆಯಿಂದಲೇ ಅವರು ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ.
ಅವರ ನನಗೆ ಮರಕ ಉಂಟಾಗುತ್ತಿದೆ. ಅಷ್ಟು ಮಾತ್ರ ಹೇಳಬಲ್ಲೆ, ಅದರಾಚೆಗೆ ನಾನು ಏನೂ ಹೇಳಲಾರೆ. ಐಎಎಸ್ ಅಧಿಕಾರಿಗಳಾದವರಿಗೆ ಪ್ರತಿಯೊಂದಕ್ಕೂ ಪ್ರೊಸೀಜರ್ ಇದೆ. ಆ ಚೌಕಟ್ಟಿನಲ್ಲೇ ನಾನು ಕೆಲಸ ಮಾಡಿದ್ದೇನೆ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ.









