`ಸಿಕ್ಸರ್ ಸರ್ದಾರನಾಗಲು ರೋಹಿತ್ ಗೆ ಬೇಕು 10 ಸಿಕ್ಸ್
ಟೀಮ್ ಇಂಡಿಯಾದ ಓಪನರ್ ರೋಹಿತ್ ಶರ್ಮಾ ಟಿ20 ವಿಶ್ವಕಪ್ ನಲ್ಲಿ ಹೊಸ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲ ವಿಸ್ವಕಪ್ ಗೆದ್ದ ತಂಡದಲ್ಲಿದ್ದ ಏಕೈಕ ಆಟಗಾರನಾಗಿರುವ ರೋಹಿತ್ ಈಗ ಸಿಕ್ಸರ್ಗಳ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಯುಎಇನಲ್ಲಿ ಟೀಮ್ ಇಂಡಿಯಾ ಪರ ಇರುವ ಸಿಕ್ಸರ್ ಗಳ ದಾಖಲೆ ಮುರಿಯಲು ರೋಹಿತ್ ಶರ್ಮಾಗೆ ಇನ್ನು 10 ಸಿಕ್ಸರ್ಗಳು ಬೇಕಿವೆ.
ಟಿ20 ವರ್ಲ್ಡ್ಕಪ್ನಲ್ಲಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಯುವಿ ಟಿ20 ವಿಶ್ವಕಪ್ನಲ್ಲಿ 31 ಪಂದ್ಯಗಳಿಂದ 33 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಯುವರಾಜ್ ಸಿಂಗ್ ನಿರ್ಮಿಸಿದ್ದಾರೆ.
ಆದರೆ ಯುವಿಯ ಈ ದಾಖಲೆ ಮುರಿಯಲು ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಇನ್ನು ಬೇಕಿರುವುದು ಕೇವಲ 10 ಸಿಕ್ಸ್ಗಳು ಮಾತ್ರ. 28 ಪಂದ್ಯಗಳಿಂದ 24 ಸಿಕ್ಸ್ ಸಿಡಿಸಿರುವ ರೋಹಿತ್ ಶರ್ಮಾ ಈ ಬಾರಿ 10 ಸಿಕ್ಸ್ ಬಾರಿಸಿದ್ರೆ, ಟೀಮ್ ಇಂಡಿಯಾ ಪರ ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
ಲೀಗ್ ಹಂತದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳಲ್ಲಿ ರೋಹಿತ್ ಸಿಕ್ಸರ್ ಸಿಡಿಸಿದರೆ ಟೀಮ್ ಇಂಡಿಯಾದ ಗೆಲುವು ಸುಲಭವಾಗುವುದು ಮಾತ್ರವಲ್ಲದೆ ರೋಹಿತ್ ಹೆಸರಿನಲ್ಲಿ ದಾಖಲೆ ಸೃಷ್ಟಿಯಾಗಲಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕ್ ವಿರುದ್ಧ ಅಕ್ಟೋಬರ್ 24ರಂದು ಆಡುವ ಮೂಲಕ ಟೂರ್ನಿಯನ್ನು ಆರಂಭಿಸಲಿದೆ. ಭಾರತ ಸೂಪರ್ 12 ರ ಗ್ರೂಪ್ 2ರಲ್ಲಿ ಸ್ಥಾನ ಪಡೆದಿದೆ.