ಬೆಂಗಳೂರು ನಗರದ ಭಾರತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಕಿರುಕುಳ ಮತ್ತು ರಾಜಕೀಯ ಪ್ರಭಾವದ ಆರೋಪಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣವನ್ನು ಇದೀಗ ರಾಜ್ಯ ಸರ್ಕಾರ CID (ಅಪರಾಧ ತನಿಖಾ ವಿಭಾಗ) ಗೆ ವರ್ಗಾಯಿಸಿದೆ.
ರಾಜ್ಯ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸುವ ಜವಾಬ್ದಾರಿಯನ್ನು CID ಗೆ ವಹಿಸಿದೆ. ಈ ಕ್ರಮದಿಂದ ಪ್ರಕರಣದಲ್ಲಿ ಸತ್ಯಾಂಶ ಬಹಿರಂಗವಾಗುವ ನಿರೀಕ್ಷೆ ಹೆಚ್ಚಾಗಿದೆ.
ಇದರ ನಡುವೆ ಪ್ರಕರಣದ ಪ್ರಮುಖ ಆರೋಪಿ A1 ಜಗದೀಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ವಜಾಗೊಳಿಸಲಾಗಿದೆ.
ಇದೇ ವೇಳೆ A5 ಆರೋಪಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ವಿರುದ್ಧ ಸಾಕ್ಷ್ಯ ಸಂಗ್ರಹಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಶಾಸಕರಿಗೂ ಈ ಹತ್ಯೆಗೂ ಸಂಬಂಧವಿದೆ ಎಂಬ ಅನುಮಾನವಿದ್ದು, ಇದನ್ನು ದೃಢಪಡಿಸಲು ಸಾಕ್ಷ್ಯ ಶೋಧನೆ ಆರಂಭವಾಗಿದೆ.
ಪ್ರಕರಣದ ಹಿನ್ನೆಲೆ: ಬಿಕ್ಲು ಶಿವ, ಬೆಂಗಳೂರು ರೌಡಿ ಶೀಟರ್ ಆಗಿದ್ದು, ಹಲವು ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಇತ್ತೀಚೆಗೆ ನಡೆದಿದ್ದ ಹತ್ಯೆಯು ರಾಜಕೀಯ ಪ್ರಭಾವದಿಂದ ಸಂಭವಿಸಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಇದೀಗ CID ತನಿಖೆ ಆರಂಭವಾಗುತ್ತಿದ್ದಂತೆಯೇ, ಹಲವಾರು ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.








