RRR, the elephant whisperers : ಆಸ್ಕರ್ ಗೆದ್ದ ಚಿತ್ರಗಳಿಗೆ ರಾಜ್ಯಸಭೆಯಲ್ಲಿ ಅಭಿನಂದನೆ…..
ಸಿನಿ ಪ್ರಪಂಚದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತರಾದ ‘ಆರ್ ಆರ್ ಆರ್’ ಮತ್ತು ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರಗಳಿಗೆ ರಾಜ್ಯಸಭೆಯಲ್ಲಿಂದು ಅಭಿನಂದನೆ ಸಲ್ಲಿಸಲಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಆಸ್ಕರ್ ಪ್ರಶಸ್ತಿ ಕುರಿತು ಪ್ರಸ್ತಾಪಿಸಿದ ಸಭಾಪತಿ ಜಗದೀಪ್ ಧನ್ ಕರ್, ತೆಲುಗಿನ ಆರ್ ಆರ್ ಆರ್ ಚಿತ್ರ ಹಾಗೂ ತಮಿಳಿನ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರಗಳು ಜಾಗತಿಕ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿರುವುದು ದೇಶದ ಗೌರವವನ್ನು ಹೆಚ್ಚಿಸಿದೆ ಎಂದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ ಚಲನಚಿತ್ರ ಸೇರಿದಂತೆ ಕಲೆ ಮತ್ತು ಸಾಂಸ್ಕೃತಿಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇಂದು ಭಾರತ ಜಾಗತಿಕವಾಗಿ ಚಲನಚಿತ್ರ ಕಥೆಗಳ ಕೇಂದ್ರ ತಾಣವಾಗಿ ಅಭಿವೃದ್ಧಿಗೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಲೋಕಲ್ ಫಾರ್ ಗ್ಲೋಬಲ್ ಪರಿಕಲ್ಪನೆ ಅನುಸಾರ ಸ್ಥಳೀಯ ಪ್ರತಿಭೆ ಮತ್ತು ವಿಶೇಷ ಉತ್ಪನ್ನಗಳು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿವೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದರು. ಆರ್ ಆರ್ ಆರ್ ಚಿತ್ರದ ನಾಟು ನಾಟು ಗೀತೆ ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಭಾರತೀಯ ಸಂಗೀತದ ದನಿ ಜಾಗತಿಕ ಮಟ್ಟದಲ್ಲಿ ಅನುರಣಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಸದನ ನಾಯಕ ಪಿಯೂಶ್ ಗೋಯಲ್ ಮಾತನಾಡಿ RRR ಚಿತ್ರದ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ರಾಜ್ಯಸಭೆಯ ಸದಸ್ಯರೂ ಆಗಿರುವುದು ಸದನಕ್ಕೆ ಹೆಮ್ಮೆ ತಂದಿದೆ ಎಂದರು. ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವನ್ನು ಇಬ್ಬರು ಮಹಿಳಾ ನಿರ್ಮಾಪಕರು ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿದ್ದು, ಇದೀಗ ಜಾಗತಿಕ ಪ್ರಶಸ್ತಿ ಗೆಲ್ಲುವ ಮೂಲಕ ನಾರಿಶಕ್ತಿಯ ಅನಾವರಣವಾಗಿದೆ ಎಂದು ತಿಳಿಸಿದರು.
RRR, the elephant whisperers: Congratulations in the Rajya Sabha for the films that won the Oscar.