ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ನಿನ್ನೆ ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆ ವಿಧಾನ ಪರಿಷತ್ ಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಬರೋಬ್ಬರಿ 1,224 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಎಂಟಿಬಿ ನಾಗರಾಜ್, ತಮ್ಮ ಹೆಸರಲ್ಲಿ ಒಟ್ಟು 884 ಕೋಟಿ ಆಸ್ತಿ, ಪತ್ನಿ ಹೆಸರಲ್ಲಿ 331 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಹಾಗೇ ನಾಗರಾಜ್ ತಮ್ಮ ಹೆಸರಲ್ಲಿ 461 ಕೋಟಿ ರೂ. ಚರಾಸ್ತಿ, 416 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಾಂತಕುಮಾರಿ ಹೆಸರಲ್ಲಿ 160 ಕೋಟಿ ರೂ. ಚರಾಸ್ತಿ, 179ಕೋಟಿ ರೂ. ಸ್ಥಿರಾಸ್ತಿ ಇದೆ. ಅಲ್ಲದೇ ಎಂಟಿಬಿ 2.23 ಕೋಟಿ ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನಾಭರಣ ಹೊಂದಿದ್ದಾರೆ.
ಎಂಟಿಬಿ ಆಸ್ತಿ ವಿವರ:
ಎಂಟಿಬಿ ನಾಗರಾಜ್ ಬಳಿ ನಗದು 32.60 ಲಕ್ಷ ರೂ.
ಪತ್ನಿ ಶಾಂತಕುಮಾರಿ ಬಳಿ ನಗದು 45.60 ಲಕ್ಷ ರೂ.
ಎಂಟಿಬಿ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ 20.26 ಕೋಟಿ ರೂ.
ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಮೊತ್ತ 144.41 ಕೋಟಿ ರೂ.
ಪತ್ನಿ ಬ್ಯಾಂಕ್ ಸೇವಿಂಗ್ಸ್ 11.21 ಕೋಟಿ ರೂ.
ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ 34.08 ಕೋಟಿ ರೂ. ಇದೆ.
ಎಂಟಿಬಿ ಬಾಂಡ್ ಮತ್ತು ಷೇರುಗಳ ಮೊತ್ತ 12 ಕೋಟಿ ರೂ. ಆಗಿದ್ದು, ಪತ್ನಿ ಹೆಸರಿನಲ್ಲಿರುವ ವಿವಿಧ ಬಾಂಡ್ ಮತ್ತು ಷೇರುಗಳ ಮೊತ್ತ 70 ಕೋಟಿ ರೂ. ಇದೆ. ಇನ್ನೂ ಎಂಟಿಬಿ 2.48 ಕೋಟಿ ಮೌಲ್ಯದ ವಿವಿಧ ವಾಹನಗಳಿವೆ. ಪತ್ನಿಯು ಕೂಡ 1.72 ಕೋಟಿ ಮೌಲ್ಯದ ವಿವಿಧ ವಾಹನಗಳನ್ನು ಹೊಂದಿದ್ದಾರೆ.
52.75 ಕೋಟಿ ರೂ. ಸಾಲ ಮಾಡಿರುವ ಎಂಟಿಬಿ
ಎಂಟಿಬಿ ನಾಗರಾಜ್ ಅವರ ಕೃಷಿ, ವಿವಿಧ ಕಟ್ಟಡಗಳ ಒಟ್ಟು ಸ್ಥಿರಾಸ್ತಿ ಮೌಲ್ಯ 422.75 ಕೋಟಿ ರೂ. ಆಗಿದೆ. ಪತ್ನಿಯು ಒಟ್ಟು 179 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳ ಒಡತಿ ಆಗಿದ್ದಾರೆ. ಆದರೂ ಎಂಟಿಬಿ 52.75 ಕೋಟಿ ರೂ. ಸಾಲಗಾರ ಆಗಿದ್ದಾರೆ.
ಇದಲ್ಲದೇ ಎಂಟಿಬಿ ಬಳಿ 29.86 ಕೋಟಿ ರೂ. ಮೌಲ್ಯದ 54 ಎಕರೆ ಕೃಷಿ ಭೂಮಿ ಇದೆ. ಪತ್ನಿ ಹೆಸರಲ್ಲಿ 4 ಎಕರೆ ಕೃಷಿ ಭೂಮಿ ಇದ್ದು, ಇದರ ಮೌಲ್ಯ 26 ಕೋಟಿ ರೂ. ಆಗಿದೆ. ಎಂಟಿಬಿ ಹೆಸರಲ್ಲಿ 308 ಕೋಟಿ ರೂ. ಮೌಲ್ಯದ 64.66 ಲಕ್ಷ ಚದರಡಿ ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಲ್ಲಿ 9.50 ಲಕ್ಷ ಚದರಡಿ ಕೃಷಿಯೇತರ ಭೂಮಿ ಇದೆ. ಎಂಟಿಬಿ ಬಳಿ 1.87 ಲಕ್ಷ ಚದರಡಿ ವಾಣಿಜ್ಯ ಕಟ್ಟಡಗಳು ಇವೆ. ಇದರ ಮೌಲ್ಯ 45 ಕೋಟಿ ರೂ. ಇದೆ. ಇದೆಲ್ಲವನ್ನು ಸೇರಿ ಒಟ್ಟು ಬರೋಬ್ಬರಿ 1,224 ಕೋಟಿ ಆಸ್ತಿ ಇದೆ ಎಂದು ಎಂಟಿಬಿ ನಾಗರಾಜ್ ಘೋಷಿಸಿಕೊಂಡಿದ್ದಾರೆ.