ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಲು ಸಿದ್ಧವಾಗಿದೆ Saaksha Tv
(ಜರ್ಮನಿ): ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಲು ಯೋಜನೆ ಸಿದ್ಧವಾಗಿದೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್ಬರ್ಗ್ ಶನಿವಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ರಷ್ಯಾದ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲು ಯೋಜನೆಯನ್ನು ರೂಪಿಸಿಕೊಂಡಿದೆ. ಉಕ್ರೇನ್ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಉಕ್ರೇನ್ ವಿರುದ್ಧ ರಷ್ಯಾ ಪೂರ್ಣ ಪ್ರಮಾಣದ ದಾಳಿಯನ್ನು ಯೋಜಿಸುತ್ತಿದೆ ಎಂಬ ಕುರಿತು ಕೆಲವು ಸೂಚನೆಗಳು ತಿಳಿಸಿವೆ ಎಂದು ಅವರು ತಿಳಿಸಿದರು.
ಈ ಹಿಂದೆ ವರದಿಯಾದಂತೆ ರಷ್ಯಾ ಯಾವುದೇ ಸೈನ್ಯವನ್ನು ಹಿಂತೆಗೆದುಕೊಳ್ಳುತ್ತಿಲ್ಲ, ಆದರೆ ಉಕ್ರೇನ್ ಗಡಿಯಲ್ಲಿ ರಷ್ಯಾ ತನ್ನ ಸೈನ್ಯ ಜಮಾವಣೆಯನ್ನು ಹೆಚ್ಚಿಗೆ ಮಾಡಿದೆ ಎಂದು ಅವರು ಹೇಳಿದರು.
ಕಳೆದ ಎರಡು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಉಕ್ರೇನ್ನ ಮೇಲೆ ರಷ್ಯಾ ದಾಳಿ ಮಾಡಲು ನಿರ್ಧರಿಸಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮುಂಬರುವ ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಸಂಭವವಿದೆ.
ಈಗಾಗಲೇ ಪುಟಿನ್ ಸೇನಾ ಕಸರತ್ತು ನಡೆಸಲು ಸೂಚನೆ ನೀಡಿದ್ದಾರೆ. ಒಂದು ವೇಳೆ ರಷ್ಯಾ ಆಕ್ರಮಣ ಮಾಡಿದರೆ ಅದರ ವಿರುದ್ಧ ಬೃಹತ್ ಆರ್ಥಿಕ ಮತ್ತು ರಾಜತಾಂತ್ರಿಕ ನಿರ್ಬಂಧಗಳನ್ನು ಹೇರುವುದಾಗಿ ಅವರು ಎಚ್ಚರಿಸಿದ್ದರು.
ಉಕ್ರೇನ್ ವಿರುದ್ಧ ರಷ್ಯಾ ಪೂರ್ಣ ಪ್ರಮಾಣದ ದಾಳಿ ನಡೆಸಲು ಯೋಜಿಸುತ್ತಿದೆ ಎಂಬ ಕುರಿತು ಕೆಲವು ಸೂಚನೆಗಳಿಂದ ತಿಳಿದು ಬಂದಿದೆ ಎಂದು ಮ್ಯೂನಿಚ್ ಭದ್ರತಾ ಸಮ್ಮೇಳನದ ವೇಳೆ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ಬರ್ಗ್ ತಿಳಿಸಿದರು.
ಇನ್ನೂ ರಷ್ಯಾ ದಾಳಿ ಎದುರಿಸಲು ಉಕ್ರೇನ್ ಸನ್ನದ್ದವಾಗುತ್ತಿದ್ದು, ಅಮೇರಿಕದ ಬೆಂಬಲದೊಂದಿಗೆ ತನ್ನ ನಾಗರಿಕರು ಕೂಡ ಯುದ್ದದಲ್ಲಿ ಹೋರಾಡಲು ಸನ್ನದ್ದಗೊಳಿಸುತ್ತಿದೆ.









