ಉಕ್ರೇನ್ ಮೇಲೆ ರಷ್ಯಾ ದಾಳಿ ವಿಶ್ರಾಂತಿ ಪಡೆಯುತ್ತಿಲ್ಲ. ಬುಧವಾರ ಕೂಡ ದಾಳಿ ನಡೆದಿದೆ. ಘಟನೆಯಲ್ಲಿ ಕನಿಷ್ಠ 17 ಜನ ಸಾವನ್ನಪ್ಪಿ, ಸುಮಾರು 60ಕ್ಕೂ ಅಧಿಕ ನಾಗರಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರ ಉಕ್ರೇನ್ ನ ಚೆರ್ನಿಹಿವ್ ನಗರ ಗುರಿಯಾಗಿಸಿಕೊಂಡು ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ದಾಳಿ ವೇಳೆ ಆಸ್ಪತ್ರೆಗೂ ಹಾನಿಯಾಗಿದೆ. ಜನನಿಬಿಡ ಪ್ರದೇಶದಲ್ಲಿಯೇ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಹೀಗಾಗಿ ಇಂತಹ ದೊಡ್ಡ ಮಟ್ಟದ ಅನಾಹುತವೊಂದು ನಡೆದಿದೆ.
ಉಕ್ರೇನ್ ನ ಚೆರ್ನಿವ್‌ನ ಹಂಗಾಮಿ ಮೇಯರ್ ಒಲೆಕ್ಸಾಂಡರ್ ಲೋಮಿಕೊ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬುಧವಾರ ಬೆಳಿಗ್ಗೆ ರಷ್ಯಾ ಈ ದಾಳಿ ನಡೆಸಿದೆ. ಜನನಿಬಿಡ ಪ್ರದೇಶದಲ್ಲಿಯೇ ಮೂರು ಪ್ರಬಲ ಸ್ಫೋಟಗಳು ಸಂಭವಿಸಿವೆ. ಹೀಗಾಗಿ ಬಹುಮಹಡಿ ಕಟ್ಟಡ ಕುಸಿಯುವಂತಾಗಿದೆ ಎಂದು ಹೇಳಿದ್ದಾರೆ.
ರಷ್ಯಾದ ಕ್ಷಿಪಣಿ ಪ್ರಯೋಗಗಳನ್ನು ಹಿಮ್ಮೆಟ್ಟಿಸಲು ಈ ಬಾರಿ ನಮಗೆ ಆಗಲಿಲ್ಲ. ಏಕೆಂದರೆ ನಮ್ಮ ಬಳಿ ಕ್ಷಿಪಣಿಗಳು ಖಾಲಿಯಾಗಿವೆ. ಉಕ್ರೇನ್ ನಲ್ಲಿ ವಾಯುರಕ್ಷಣಾ ವ್ಯವಸ್ಥೆಯ ಕೊರತೆ ಇದೆ. ಹೀಗಾಗಿ ರಷ್ಯಾದ ಮೂರು ಕ್ಷಿಪಣಿಗಳನ್ನು ತುಂಡರಿಸಲು ಸಾಧ್ಯವಾಗಲಿಲ್ಲ. ಬೇರೆ ದೇಶಗಳ ನೆರವು ಕೂಡಲೇ ದೊರಕಿದ್ದರೆ, ಈ ದುರಂತವನ್ನು ತಪ್ಪಿಸಿ, ರಷ್ಯಾಗೆ ಹಿನ್ನಡೆ ಮಾಡಬಹುದಿತ್ತು ಎಂದು ಕೂಡ ಅವರು ಹೇಳಿದ್ದಾರೆ.
ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಟ್ರಿಪಿಲ್ಸ್ಕಾ ವಿದ್ಯುತ್ ಸ್ಥಾವರ ಗುರಿಯಾಗಿಸಿಕೊಂಡು ರಷ್ಯಾ 11 ಕ್ಷಿಪಣಿ ಹಾರಿಸಿದೆ. ಏಳು ಕ್ಷಿಪಣಿಗಳನ್ನು ನಾಶಪಡಿಸಿದ್ದೇವೆ ಎಂದಿದ್ದಾರೆ. ಅಲ್ಲದೇ, ಉಕ್ರೇನಿಯನ್ ಪಾಶ್ಚಿಮಾತ್ಯ ದೇಶಗಳಿಗೆ ದಾಳಿಯ ಗಂಟೆಗಳ ನಂತರ ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಕರೆ ನೀಡಿದ್ದಾರೆ.