ಭಾರತ-ಪಾಕಿಸ್ತಾನ ಸಂಘರ್ಷ ಕುರಿತು ಬ್ರಿಟನ್ ಸಲಹೆಗೆ ಖಡಕ್ ಪ್ರತಿಕ್ರಿಯೆ: ಆಂತರಿಕ ಭದ್ರತೆ ವಿಚಾರದಲ್ಲಿ ಯಾವುದೇ ರಾಷ್ಟ್ರದ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ – ಎಸ್. ಜೈಶಂಕರ್
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉಲ್ಬಣಗೊಂಡಿರುವ ಉದ್ವಿಗ್ನತೆಯ ಕುರಿತಾಗಿ ಜಾಗತಿಕ ನಾಯಕರಿಂದ ವ್ಯಕ್ತವಾಗಿರುವ ಕಳವಳಕ್ಕೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಏಕತೆ, ಸೌಹಾರ್ದತೆ ಹಾಗೂ ಆಂತರಿಕ ಭದ್ರತೆ ಸಂಬಂಧವಾಗಿರುವ ವಿಷಯಗಳಲ್ಲಿ ಯಾವುದೇ ಪರಮಾಪ್ತ ರಾಷ್ಟ್ರದ ಸಲಹೆ ಅಥವಾ ಹಸ್ತಕ್ಷೇಪವನ್ನು ಭಾರತ ಒಪ್ಪಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಪಹಲ್ಗಾಮ್ ಉಗ್ರದಾಳಿ ಹಿನ್ನೆಲೆಯಲ್ಲಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಎಂಬ ಸೇನಾ ಕಾರ್ಯಾಚರಣೆಯ ಬಳಿಕ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಉದ್ವಿಗ್ನತೆ ತಾಳಿದ್ದು, ಇದರ ಕುರಿತು ಹಲವು ಪಾಶ್ಚಾತ್ಯ ರಾಷ್ಟ್ರಗಳು ತಮ್ಮದೇ ಮಿತಿಯಲ್ಲಿ ಚಿಂತನೆ ವ್ಯಕ್ತಪಡಿಸುತ್ತಿವೆ.
ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರನ್ನು ಭೇಟಿಯಾದ ಜೈಶಂಕರ್, ಭಯೋತ್ಪಾದನೆಗೆ ವಿಶ್ವದಾದ್ಯಾಂತ ಶೂನ್ಯ ಸಹಿಷ್ಣುತೆ ಇರಬೇಕೆಂದು ದೃಢವಾಗಿ ತಿಳಿಸಿದ್ದಾರೆ. “ಭಾರತವು ತನ್ನ ಆಂತರಿಕ ಭದ್ರತೆಗಾಗಿ ನಿಗ್ರಹದ ನಿಲುವುಗಳನ್ನು ಅನುಸರಿಸುತ್ತಿದ್ದು, ಈ ಕುರಿತು ಬೇರೆಯವರ ಸಲಹೆ ಅಥವಾ ಮಧ್ಯಸ್ಥಿಕೆ ಅಪೇಕ್ಷಿತವಲ್ಲ” ಎಂದು ಅವರು ಪ್ರತಿಪಾದಿಸಿದರು.
ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲ್ಯಾಮಿ, ಭಾರತ-ಪಾಕಿಸ್ತಾನ ಸಂಘರ್ಷ ಉಲ್ಬಣಗೊಂಡರೆ ಯಾರೂ ಗೆಲ್ಲುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ ಹಿನ್ನಲೆಯಲ್ಲಿ, ಜೈಶಂಕರ್ ಈ ಮಾತುಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ಅವಶ್ಯ. ಶಾಂತಿಯ ಹೆಸರಿನಲ್ಲಿ ಭಯೋತ್ಪಾದಕರಿಗೆ ರಕ್ಷಣೆಯ ವಾತಾವರಣ ಒದಗಿಸಬಾರದು” ಎಂದು ಹೇಳಿದ್ದಾರೆ.
ಈ ಮಧ್ಯೆ, ಪಾಕಿಸ್ತಾನಕ್ಕೆ IMF ನೀಡಿರುವ ಆರ್ಥಿಕ ನೆರವಿನ ವಿಷಯವನ್ನೂ ಅವರು ಉಲ್ಲೇಖಿಸಿದ್ದು, “ಈ ಹಣವನ್ನು ಪಾಕಿಸ್ತಾನ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆ ಇದೆ ಎಂಬ ಆತಂಕ ತಜ್ಞರಿಂದ ವ್ಯಕ್ತವಾಗುತ್ತಿದೆ. ಇಂತಹ ರಾಷ್ಟ್ರಗಳಿಗೆ ನೆರವು ನೀಡುವುದನ್ನು ತಡೆಯುವುದು ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿ” ಎಂದು ಅವರು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
ಜೈಶಂಕರ್ ಅವರು ರಷ್ಯಾ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ನಡೆಸಿದ ಸಂವಾದಗಳಲ್ಲಿಯೂ ಇದೇ ನಿಲುವನ್ನು ಪುನರಾವರ್ತಿಸಿದ್ದಾರೆ. ಭಾರತವು ಭಯೋತ್ಪಾದನೆ ಎಂಬ ಸಾಮಾನ್ಯ ಶತ್ರುವನ್ನು ಎದುರಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ನಾವು ಶಾಂತಿಯ ಪರ ಇದ್ದೇವೆ, ಆದರೆ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದಾಗಿ ಅವರು ಟ್ವೀಟ್ ಮೂಲಕ ವಿವರಿಸಿದ್ದಾರೆ.








