ಹಂಪಿಯ ದೃಶ್ಯ ವೈಭವ ಚಿತ್ರೀಕರಣಕ್ಕೆ ದಿನವೊಂದಕ್ಕೆ 1 ಲಕ್ಷ ರೂ ಶುಲ್ಕ..!
ಹಂಪಿ… ಕರ್ನಾಟಕ ಮಾತ್ರವಲ್ಲ.. ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿರುವ ಐತಿಹಾಸಿಕ ತಾಣ. ಹಂಪಿಯ ಶಿಲ್ಪ ವಾಸ್ತು ಶಿಲ್ಪ ಮತ್ತು ಅಲ್ಲಿನ ಪರಿಸರಗಳನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನ ಬರುತ್ತಿದ್ದಾರೆ.
ಇನ್ನು ಸಿನಿಮಾಗಳಲ್ಲಿ ಹಂಪಿಯ ದೃಶ್ಯ ವೈಭವಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಣ ಮಾಡಲಾಗುತ್ತಿದೆ.
ಇದೀಗ ಹಂಪಿಯಲ್ಲಿ ಸಿನಿ ತಂಡಗಳು ಚಿತ್ರೀಕರಣಕ್ಕೆ ಸಾಲು ಗಟ್ಟಿ ನಿಂತಿವೆ. ಕಳೆದ ಎರಡು ವರ್ಷಗಳಿಂದ ಹಂಪಿಯಲ್ಲಿ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಕೋವಿಡ್, ಲಾಕ್ ಡೌನ್ ಗಳಿಂದಾಗಿ ಸೈಲೆಂಟ್ ಆಗಿದ್ದ ಚಿತ್ರ ರಂಗ ಇದೀಗ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿವೆ.
ಇದೀಗ ಹಂಪಿಯಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಈಗಾಗಲೇ 35ಕ್ಕೂ ಹೆಚ್ಚು ಸಿನಿಮಾ ತಂಡಗಳು ಚಿತ್ರೀಕರಣದ ಅನುಮತಿಗಾಗಿ ಅರ್ಜಿ ಸಲ್ಲಿಸಿವೆ. ಅದರಲ್ಲಿ ಎರಡು ಬಾಲಿವುಡ್ ಚಿತ್ರಗಳು ಇವೆ. ಚಿತ್ರೀಕರಣಕ್ಕೆ ಪ್ರತಿ ದಿನ ಒಂದು ಲಕ್ಷ ರೂಪಾಯಿ ಶುಲ್ಕ ವಿಧಿಸಲಾಗಿದೆ. ಹಾಗೇ ಮುಂಗಡವಾಗಿ ಡೆಪಾಸಿಟ್ ಹಣವನ್ನು ಕಟ್ಟಬೇಕಿದೆ.
ಇನ್ನು ಹಂಪಿಯಲ್ಲಿ ಚಿತ್ರೀಕರಣ ಮಾಡಬೇಕಾದ್ರೆ ಕೆಲವೊಂದು ಷರತ್ತುಗಳನ್ನು ಪಾಲಿಸಬೇಕಿದೆ. ಚಿತ್ರ ತಂಡಗಳು ಈ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಇಲ್ಲಿನ ವಾಸ್ತುಶಿಲ್ಪ ಮತ್ತು ಪರಿಸರಕ್ಕೆ ಯಾವುದೇ ರೀತಿಯ ಹಾನಿ ಮಾಡಬಾರದು ಅಂತ ಹಂಪಿ ನಿರ್ವಹಣಾ ಪ್ರಾಧಿಕಾರ ಷರತ್ತು ವಿಧಿಸಿದೆ. ನಿಯಮಗಳನ್ನು ಪಾಲಿಸದಿದ್ರೆ ದಂಡವನ್ನು ಕಟ್ಟಬೇಕಾಗುತ್ತದೆ.
ಒಟ್ಟಿನಲ್ಲಿ ಕೋವಿಡ್ ಮಹಾಮಾರಿಯಿಂದ ತಲ್ಲಣಗೊಂಡಿದ್ದ ಚಿತ್ರ ರಂಗ ಮತ್ತೆ ಶೂಟಿಂಗ್ ಶುರು ಮಾಡಿಕೊಳ್ಳುತ್ತಿವೆ. ಹಾಗೇ ಪ್ರವಾಸಿಗರಿಗೂ ತಮ್ಮ ನೆಚ್ಚಿನ ತಾಣ ಹಂಪಿಯನ್ನು ಕಣ್ತುಂಬಿಕೊಳ್ಳಲು ಬರುವಂತಾಗಿದೆ.