ನೀ ಹೀಂಗ ನೋಡಬ್ಯಾಡ ನನ್ನ…. ನೀ ಹೀಂಗ ನೋಡಿದರ ನನ್ನ….

1 min read
Saakshatv Lahari nee hinga

ನೀ ಹೀಂಗ ನೋಡಬ್ಯಾಡ ನನ್ನ….
ನೀ ಹೀಂಗ ನೋಡಿದರ ನನ್ನ….
Saakshatv Lahari nee hinga

Saakshatv Lahari nee hinga

‘ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ…’

ನನ್ನ ಮನಸ್ಸನ್ನು ಅತಿಯಾಗಿ ತಟ್ಟಿದ, ಇಂದಿಗೂ ಕಣ್ಣಂಚಿನಲ್ಲಿ ಕಂಬನಿ ಹೊತ್ತು ತರುವ ವರಕವಿ ದ.ರಾ.ಬೇಂದ್ರೆಯವರ ಈ ಹಾಡು ನಮ್ಮ ಮುಂದೆ ಮಗುವನ್ನು ಕಳೆದುಕೊಂಡ ತಂದೆಯ ಹೇಳಲಾಗದ ಮೂಕವೇದನೆಯನ್ನು ಬಿಂಬಿಸುತ್ತದೆ. Saakshatv Lahari nee hinga

ನೋವನ್ನು ಸಹ ಕಾವ್ಯಮಯ ಮಾಡಿದ ಶ್ರೇಷ್ಠ ಗ್ರಾಮೀಣ ಸೊಗಡಿನ ಕವಿ ದ.ರಾ.ಬೇಂದ್ರೆಯವರು ಕೆಲವೇ ದಿನಗಳ ಅಂತರದಲ್ಲಿ ತಮ್ಮ ಎರಡು ಎಳೆಯ ಕೂಸುಗಳನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುತ್ತಾರೆ.
ವರಕವಿ ದ.ರಾ.ಬೇಂದ್ರೆ ಮತ್ತು ಲಕ್ಷ್ಮೀಬಾಯಿ ದಂಪತಿಗಳು ತಮ್ಮ ಜೀವನದಲ್ಲಿ ನೊಂದು ಬೆಂದು ಬಳಲಿದ್ದೇ ಹೆಚ್ಚು. ಅವರ 9 ಮಕ್ಕಳಲ್ಲಿ 6 ಮಕ್ಕಳು ಕಣ್ಣಮುಂದೆಯೇ ಮರಣವನ್ನಪ್ಪಿದರು. ಅವರ ಒಂದೂವರೆ ತಿಂಗಳ ಹೆಣ್ಣು ಮಗು ಲಲಿತಾ ಮರಣವನ್ನಪ್ಪಿದ ಸಂದರ್ಭದಲ್ಲಿ ರಚಿತವಾದ ಶೋಕಗೀತೆ ‘ನೀ ಹೀಂಗ ನೋಡಬ್ಯಾಡ ನನ್ನ’.

ಕೊನೆಯುಸಿರೆಳೆದ ಮಗುವನ್ನು ತನ್ನ ತೊಡೆಯ ಮೇಲಿರಿಸಿಕೊಂಡ ಅವರ ಪತ್ನಿ, ಬೇಂದ್ರೆಯವರತ್ತ ದೀನರಾಗಿ ನೋಡುತ್ತಾರೆ. ಆ ನೋಟದಲ್ಲಿ ಅಡಗಿರುವ ಭಾವಗಳೋ ಸಾವಿರಾರು.. ತಾನು ಅತ್ತರೆ ಪತಿಯ ದುಃಖ ಇನ್ನಷ್ಟು ಹೆಚ್ಚಾಗಬಹುದು, ಅವರಲ್ಲಿ ಅಪರಾಧಭಾವ ಕಾಡಬಹುದು ಎಂಬ ಆತಂಕ ಒಂದೆಡೆಯಾದರೆ, ತನ್ನ ಕರುಳ ಕುಡಿ ಕಳೆದುಕೊಂಡ ಬಚ್ಚಿಡಲಾಗದ ತಾಯಿಯ ಹೃದಯದ ಬೇಗುದಿ ಮತ್ತೊಂದೆಡೆ…

Saakshatv Lahari nee hinga

ಇವೆಲ್ಲವನ್ನೂ ತನ್ನೊಳಗೆ ಅಡಗಿಸಿಕೊಂಡು ಮೂಕಳಾಗಿ ತನ್ನೆಡೆ ನೋಡುತ್ತಿರುವ ಪತ್ನಿಯ ಭಾವವನ್ನು ಅರ್ಥೈಸಿಕೊಂಡ ಆ ಕವಿ ಹೃದಯ ಪತ್ನಿಯ ಕಣ್ಣುಗಳನ್ನು ದೃಷ್ಟಿಸಲಾಗದೆ ನೀನು ಈ ರೀತಿಯಲ್ಲಿ ನನ್ನನ್ನು ನೋಡಬೇಡ. ನನಗೆ ನಿನ್ನ ಈ ನೋಟವನ್ನು ಎದುರಿಸುವ ಶಕ್ತಿಯಿಲ್ಲ.. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಾ ನೋಡಲಾರೆ. ನಾನು ಎಷ್ಟೇ ಅಸಹಾಯಕನಾಗಿದ್ದರೂ ಪತಿಯಾಗಿ ಪತ್ನಿಗೆ ಸಮಾಧಾನ ಹೇಳಬೇಕಿರುವುದು ನನ್ನ ಧರ್ಮ. ಆದರೆ ನೀನು ಈ ರೀತಿ ನೋಡುತ್ತಿದ್ದರೆ, ಸಮಾಧಾನ ಮಾಡಲಿಕ್ಕೆಯಾದರೂ ನಿನ್ನ ಕಣ್ಣನ್ನು ಹೇಗೆ ನೋಡಲಿ ಎಂದು ನೋವನ್ನು ವ್ಯಕ್ತಪಡಿಸುತ್ತಾರೆ.

ಪತಿ ಮತ್ತು ಪತ್ನಿ ಸಂಸಾರ ಎಂಬ ಬಂಡಿಯನ್ನು ಎಳೆಯುವ ಎರಡು ಎತ್ತುಗಳು. ಪ್ರತಿ ಸಂಸಾರದಲ್ಲಿ ನೋವು ನಲಿವು ಸಾಮಾನ್ಯ. ಆದರೆ ಕೆಲವೊಮ್ಮೆ ಅಲ್ಲಿ ನೋವೆ ಅಧಿಕವಾಗಿರುತ್ತದೆ. ವರಕವಿ ಬೇಂದ್ರೆಯವರ ಬದುಕಲ್ಲಿ ನೋವೆ ಅಧಿಕವಾಗಿತ್ತು ಎಂಬುದಕ್ಕೆ ಈ ಕವಿತೆ ಒಂದು ನಿದರ್ಶನ.
ದುಃಖದಿಂದ ಆರ್ದ್ರಳಾಗಿರುವ ಪತ್ನಿಗೆ ಹೇಗೆ ಸಂತೈಸಬೇಕು ಎಂದು ದಾರಿಕಾಣದೆ ಅವರು

‘ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?’

ಅಂದರೆ ಸಂಸಾರ ಸಾಗರದಲ್ಲಿ ಲೆಕ್ಕವಿಡಲಾರದಷ್ಟು ದುಃಖವಿದೆ.‌ ಅದು ಅನಿವಾರ್ಯ, ಅದನ್ನು ನಾವು ಅನುಭವಿಸಲೇಬೇಕು…
ಈ ಸಂಸಾರ ಸಾಗರದ ಆಚೆಯ ದಂಡೆ ಹೇಗಿದೆಯೋ ನನಗೆ ತಿಳಿಯದು.. ತೀರಿಕೊಂಡಿರುವ ಮಗು ಹಾಗೆಯೇ ಅಲ್ಲಿ ಮಲಗಿರಲಿ. ಎಲ್ಲವೂ ದೇವರ ಚಿತ್ತ. ಈ ಮಗು ಸಾಯಬೇಕು ಎನ್ನುವುದು ದೇವರ ಇಚ್ಛೆಯಾಗಿರುವಾಗ ಅದನ್ನು ತಡೆಯಲು ನಮ್ಮಿಂದ ಸಾಧ್ಯವೇ? ವಿಧಿಯ ಮುಂದೆ ನಾವು ತೃಣ ಸಮಾನ…‌ ಹಾಗಿರುವಾಗ ಯಾಕೆ ನೀನು ನನ್ನ ವೇದನೆ ಮಡುಗಟ್ಟಿದ ಕಣ್ಣಿನಿಂದ ಮತ್ತೆ ಮತ್ತೆ ನೋಡುತ್ತಿರುವೆ ಎಂದು ಕೇಳುತ್ತಾರೆ.

ತನ್ನ ಕರುಳ ಕುಡಿಯನ್ನು ಕಳೆದುಕೊಂಡ ತಾಯಿಯ ನೋವು ವರ್ಣಿಸಲು ಅಸಾಧ್ಯ. ಅಂತಹ ನೋವು ಯಾವುದೇ ತಂದೆತಾಯಿಗೂ ಬರಬಾರದು. ದುಃಖದಿಂದ ಜರ್ಜರಿತಳಾಗಿ ಜೀವನೋತ್ಸಾಹವನ್ನು ಕಳೆದುಕೊಂಡು ಸಾವಿನ ಕಳೆ ತುಂಬಿರುವ ಪತ್ನಿಯ ಮುಖವನ್ನು ನೋಡುತ್ತಾ ಆತಂಕಿತರಾಗುವ ಬೇಂದ್ರೆಯವರು ‌

‘ತಾಂಬೂಲ ಹಾಕದ ತುಂಬ ಕೆಂಪು ಗಿಡಗಡಕಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನ ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ..’

ತಾಂಬೂಲ ಹಾಕದೇ ಇದ್ದರೂ ಕೆಂಪಾಗಿ ಕಾಣುತ್ತಿದ್ದ ತುಟಿಗಳು ಈಗ ಬಣ್ಣವನ್ನು ಕಳೆದುಕೊಂಡಿದೆ. ಮುಖದ ಕಳೆ ಮಾಸಿ ಮಾರಿ ಕಳೆ ಕಾಣುತ್ತಿದೆ. ಇವಳಿಗೆ ಯಾವುದಾದರೂ ಕೆಟ್ಟ ಗಾಳಿ ತಾಗಿರಬಹುದೇ ಎಂದು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವ ಕವಿ, ಮಗು ಕಳೆದುಕೊಂಡ ಶೋಕದ ಜೊತೆಗೆ ಪತ್ನಿಯನ್ನು ಕೂಡ ಎಲ್ಲಿ ಕಳೆದುಕೊಳ್ಳುವೆನೋ ಎಂಬ ಭೀತಿಯನ್ನು ವ್ಯಕ್ತಪಡಿಸುತ್ತಾರೆ.

ದುಃಖದಿಂದ ಮಡುಗಟ್ಟಿದ ಪತ್ನಿಯನ್ನು ನೋಡಿ ಏನೂ ಮಾಡಲಾಗದ ಅಸಹಾಯಕತೆಯಿಂದ ಕವಿ ಆಕೆಯ ದುಃಖಕ್ಕೆ ನಾನೇ ಕಾರಣವೆಂದು ತಾತ್ಸಾರದಿಂದ ತನ್ನನ್ನು ತಾನೇ ದೂಷಿಸಿಕೊಳ್ಳುತ್ತಾರೆ.

Saakshatv Lahari nee hinga

‘ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ..’

ಒಂದು ಹೆಣ್ಣು ತನ್ನ ಮದುವೆಯ ಸಂದರ್ಭದಲ್ಲಿ ಅದೆಷ್ಟೋ ಕನಸುಗಳನ್ನು ಕಂಡಿರುತ್ತಾಳೆ.‌ ಅದೇ ರೀತಿ ನೀನು ಕೂಡ ಸಾಕಷ್ಟು ಕನಸು ಆಕಾಂಕ್ಷೆಗಳೊಂದಿಗೆ ಮದುವೆಯ ಧಾರೆ ಸಂದರ್ಭದಲ್ಲಿ ನನ್ನ ಕೈಹಿಡಿದು ತಂಪಾಗಿ ಇರುತ್ತೇನೆ ಎಂದು ನಂಬಿದ್ದೆ .‌ ಆದರೆ ಈಗ ನಿನಗೆ ನಾನು ಬೂದಿ ಮುಚ್ಚಿದ ಕೆಂಡವೆಂದು ಗೊತ್ತಾಗಿದೆ. ಆದರೂ ನೀನು ನನ್ನ ಕೈ ಬಿಡುತ್ತಿಲ್ಲ. ನಿನ್ನ ಪಾಲಿಗೆ ಭರವಸೆ ನೀಡುವ ದೇವರು ಎಂದು ಇನ್ನೂ ನನ್ನನ್ನು ನಂಬಿರುವೆಯಾ? ನಿನಗೆ ಭರವಸೆ ನೀಡಲು ನನ್ನಲ್ಲಿ ಏನಾದರೂ ಉಳಿದಿದೆಯೇ.‌ ಆಕಾಶವೇ ಕುಸಿದು ಬಿದ್ದಿರುವಾಗ ಭೂಮಿಗೆ ನೆಲೆ ಎಲ್ಲಿದೆ ಎಂದು ಕವಿ ಹನಿಗಣ್ಣಾಗುತ್ತಾರೆ.

‘ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು,
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ..’

ಜೀವವಿಲ್ಲದೆ ಸತ್ತ ಹೆಣದಂತೆ ನಿಸ್ತೇಜವಾಗಿರುವ ಪತ್ನಿಯನ್ನು ನೋಡುತ್ತಾ ವೇದನೆ ಅನುಭವಿಸುವ ಕವಿ ದ.ರಾ ಬೇಂದ್ರೆ, ಹಾಲಿನಂತೆ ಬಿಳುಪಾದ ಕಣ್ಣುಗಳ ಬಿಳಿಭಾಗ, ನೀಲ ಕಪ್ಪು ಕಣ್ಣಪಾಪೆಗಳ ಒಡತಿಯಾಗಿದ್ದ ನಿನ್ನ ಕಣ್ಣುಗಳು ಇಷ್ಟು ದಿನ ಇಬ್ಬನಿಯಂತೆ ಹೊಳಪಿನಿಂದ ಹೊಳೆಯುತ್ತಿತ್ತು. ಆದರೆ ಇಂದು ಅಲ್ಲಿ ಚೈತನ್ಯವೇ ಬತ್ತಿ ಹೋಗಿ ನಿರ್ಜೀವದಂತೆ ಕಾಣುತ್ತಿರುವ ಈ ಕಣ್ಣುಗಳು ನಿನ್ನದೇ? ಎಂದು ಕೇಳುತ್ತಾರೆ.
ಹುಣ್ಣಿಮೆಯ ಚಂದ್ರನಂತೆ ಪ್ರಕಾಶಮಾನವಾಗಿದ್ದ ಮುಖದಲ್ಲಿ ಪ್ರೇತಕಳೆ ಎದ್ದು ಕಾಣುತ್ತಿದ್ದು, ಮಾನಸಿಕವಾಗಿ ಜೀವವನ್ನು ಕಳೆದುಕೊಂಡಂತಿರುವ ತನ್ನ ಪತ್ನಿಯನ್ನು ನೋಡಿ ಸಂಕಟ ಪಡುತ್ತಾರೆ.

‘ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ’

ಮಗುವಿನ ಸಾವಿನ ಎದುರು ತಾನು ಅಸಹಾಯಕ, ನನ್ನಿಂದ ಪತ್ನಿಯನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ ಎಂದು ಮನಗಂಡ ಕವಿ ದ.ರಾ.ಬೇಂದ್ರೆಯವರು ದುಃಖದ ಅಘಾತದಿಂದ ಸ್ತಬ್ಧಳಾಗಿರುವ ಪತ್ನಿಯ ಬಗ್ಗೆ ಕಳವಳಗೊಳ್ಳುತ್ತಾರೆ. ದುಃಖದಿಂದ ಜರ್ಜರಿತಳಾಗಿದ್ದರೂ ಕಣ್ಣೀರು ಸುರಿಸದೆ ಮೂಕವೇದನೆ ಅನುಭವಿಸುತ್ತಿರುವ ಪತ್ನಿಗೆ ಒಮ್ಮೆ ಅತ್ತು ದುಃಖವನ್ನು ಹೊರಹಾಕು.. ಹುಸಿ ನಗುವಿನಿಂದ ದುಃಖವನ್ನು ಮರೆಮಾಚ ಬೇಡ.. ಕಣ್ಣ ರೆಪ್ಪೆ ಬಡಿದರೆ, ಕಣ್ಣೀರು ಹೊರಬಹುದೆಂದು ಕಣ್ಣು ಅಗಲ ಮಾಡಿ ನನ್ನ ದಿಟ್ಟಿಸುತ್ತಿರುವೆ… ತುಟಿಯನ್ನು ಕಚ್ಚಿ ಬಿಕ್ಕಳಿಕೆಯನ್ನು ತಡೆಯದಿರು… ಪ್ರವಾಹದಂತೆ ನಿನ್ನ ದುಃಖ ಹೊರಬರಲಿ ಎಂದು ಪರಿಪರಿಯಾಗಿ ಸಮಾಧಾನ ಮಾಡುತ್ತಾರೆ.

ಬೇಂದ್ರೆಯವರ ಕವಿತೆಗಳನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಆ ಸಾಲುಗಳನ್ನು ನಾವು ನಮ್ಮಷ್ಟಕ್ಕೆ ಅನುಭವಿಸಿದಾಗ ಅದರ ಭಾವಗಳ ತೀವ್ರತೆ ಗಾಢವಾಗಿ ಮನದಾಳಕ್ಕೆ ಇಳಿಯಲು ಸಾಧ್ಯ.

Saakshatv Lahari nee hinga

ಮಗುವನ್ನು ಕಳೆದುಕೊಂಡು ದೊಡ್ಡ ಆಘಾತದಲ್ಲಿದ್ದರೂ ದುಃಖದ ಮಡುವಿನಲ್ಲಿರುವ ಪತ್ನಿಯನ್ನು ಸಂತೈಸುವ ಸಂದರ್ಭದಲ್ಲಿ ರಚಿತವಾದ ಈ ಹಾಡು ಬೇಂದ್ರೆಯವರು ಸಾಹಿತ್ಯವನ್ನು ಅದೆಷ್ಟರ ಮಟ್ಟಿಗೆ ಜೀವಿಸಿಬಿಟ್ಟಿದ್ದರು ಎಂಬುದಕ್ಕೆ ಸಾಕ್ಷಿ.

ಯಾವುದೇ ಕವನ ಬಿಂಬಿಸುವ ಒಳಾರ್ಥಗಳು ಬೇರೆ ಬೇರೆಯಾಗಿರುತ್ತದೆ. ಕವಿ ಯಾವುದೋ ಸನ್ನಿವೇಶದಲ್ಲಿ ಕವನವನ್ನು ರಚಿಸಿರುತ್ತಾನೆ. ಆದರೆ ಆ ಕಾವ್ಯದ ಸನ್ನಿವೇಶ ಅರಿಯದೆ ಜನರು ಅದಕ್ಕೆ ಬೇರೆಯೇ ಅರ್ಥವನ್ನು ಕಲ್ಪಿಸಿಕೊಳ್ಳುತ್ತಾರೆ ಎಂಬುದಕ್ಕೆ ಈ ಕವಿತೆ ಉದಾಹರಣೆಯಾಗಿದೆ.

ಮಗುವನ್ನು ಕಳೆದುಕೊಂಡ ಶೋಕದ ಸಂದರ್ಭದಲ್ಲಿ ರಚಿಸಲ್ಪಟ್ಟ ಈ ಕವಿತೆ ಈಗ ಹೆಣ್ಣನ್ನು ಛೇಡಿಸುವ ಪ್ರೇಮದ ಕವಿತೆಯಾಗಿ ನೃತ್ಯಕ್ಕೆ ಬಳಸಲಾಗುತ್ತಿರುವುದು ನಿಜಕ್ಕೂ ವಿಪರ್ಯಾಸ.

ಶ್ವೇತಾ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd