Saakshatv Oshoyisam episode 1

ಓಶೋ’ಯಿಸಂ Saakshatv Oshoyisam episode 1

ಓಶೋ ಎಂದರೆ ಯಾರು? ಬುದ್ಧನಾಗಲು ಹೊರಟ, ಸೆಕ್ಸ್‌ ಗುರುವೆಂದು ಕರೆಸಿಕೊಂಡ ಓಶೋ ಯಾರಿಗೆ ಅರ್ಥವಾದರು? Saakshatv Oshoyisam episode 1

ಸರಳವಾಗಿ ಓಶೋ ಎಂದರೆ ಉನ್ನತ ಅರಿವಿನ ಬೌದ್ಧ ಭಿಕ್ಕು ಎಂಬರ್ಥ ಬರುತ್ತದೆ. ನಮ್ಮ ಸಂಸ್ಕೃತದ ಉಪಾಧ್ಯಾಯ ಎನ್ನುವರ್ಥ. ಓಶೋ ಎನ್ನುವುದು ಜಪಾನಿ ಮತ್ತು ಚೀನಿ ಭಾಷೆಗಳಲ್ಲಿ ಮಾಸ್ಟರ್, ಗುರು ಎನ್ನುವರ್ಥದಲ್ಲಿ ವ್ಯಾಖ್ಯಾನಿಸಲ್ಪಡುತ್ತದೆ. ಅಥವಾ ಸಾಗರದಷ್ಟು ಆಳದಲ್ಲಿ ವಿಲೀನವಾಗುವುದು ಎಂದವನು ವಿಲಿಯಂ ಜೇಮ್ಸ್. ಆದರೆ ಓಶೋ ಎಂದರೆ ಗೂಢಾರ್ಥದಲ್ಲಿ ಬೆಳಕು, ಜ್ಞಾನ, ಅನಂತದ ಅರಿವು. ಚಂದ್ರಮೋಹನ್ ಜೈನ್ ಎನ್ನುವ ಅತ್ಯಂತ ಸಾಮಾನ್ಯ ಸಾಧಾರಣ ಮನುಷ್ಯ ಮೊದಲು ಆಚಾರ್ಯ ರಜನೀಶನಾದ, ನಂತರ ಭಗವಾನ್ ರಜನೀಶ ಎಂದು ಕರೆಸಿಕೊಂಡ ಆದರೂ ಆತ ತೃಪ್ತನಾಗಿದ್ದು ಮಾತ್ರ ಕೊನೆಯಲ್ಲಿ ಓಶೋ ಆದ ನಂತರವೇ. ಜಿಡ್ಡು ಕೃಷ್ಣಮೂರ್ತಿಯನ್ನು ಆಧುನಿಕ ಬುದ್ಧ ಎಂದು ಕರೆದ ಈ ಓಶೋ ಯಾರು?
Saakshatv Oshoyisam episode 1

ಓಶೋ ಕುರಿತಾಗಿ ಈವರೆಗೆ ರಚನೆಯಾಗಿರುವುದು ಬರೋಬ್ಬರಿ 1500ಕ್ಕೂ ಹೆಚ್ಚು ಪುಸ್ತಕಗಳು, ಜಗತ್ತಿನ 40 ಭಾಷೆಗಳಲ್ಲಿ ಪ್ರಕಟಗೊಂಡಿವೆ. ಸಾವಿರಾರು ಗಂಟೆಯ ಉಪನ್ಯಾಸಗಳ ವೀಡಿಯೋ ಲಭ್ಯವಿದೆ. ಇಡೀ ಪ್ರಪಂಚದಾದ್ಯಂತ ಸುಮಾರು 200ಕ್ಕೂ ಅಧಿಕ ಓಶೋ ಧ್ಯಾನ ಕೇಂದ್ರಗಳಿವೆ. 60ರ ದಶಕದಲ್ಲಿ ಪ್ರವರ್ಧಮಾನಕ್ಕೆ ಬಂದ ಓಶೋ 80ರ ದಶಕದವರೆಗೆ ಸುಮಾರು 30 ವರ್ಷಗಳ ಕಾಲ ಭಾರತೀಯ ಆಧ್ಯಾತ್ಮಿಕ ಲೋಕದ ಅಧಿಪತ್ಯ ಸಾಧಿಸಿದವರು. ವಿಶ್ವದ 14 ರಾಷ್ಟ್ರಗಳಲ್ಲಿ ಅವರ ಆಧ್ಯಾತ್ಮಿಕ ತತ್ವಗಳ ಬೋಧನೆ ಕಾರ್ಯಾಚರಣೆ ನಡೆದಿತ್ತು. ಓಶೋ ದೈಹಿಕವಾಗಿ ಅಗಲಿದ್ದು 90ರ ದಶಕದಲ್ಲಿ ಆದರೇ ಇಂದಿಗೂ ಭಾರತೀಯ ಡಿವೈನ್‌ ಮಾರುಕಟ್ಟೆಯಲ್ಲಿ ಓಶೋ ಅನ್ನುವ ಹೆಸರಿಗೆ ಇರುವ ತಾಕತ್ತು ಅದ್ಭುತ. ನೆಟ್‌ ಫ್ಲಿಕ್ಸ್‌ ನಲ್ಲಿ ವೈಲ್ಡ್‌ ವೈಲ್ಡ್‌ ಕಂಟ್ರಿ ಎಂದೊಂದು ಡಾಕ್ಯುಮೆಂಟರಿ ಇದೆ. ಸಾಧ್ಯವಾದರೆ ನೋಡಿ. ಓಶೋರ ಜೀವನ ಚರಿತ್ರೆಯನ್ನು ಅದರಲ್ಲೂ ಮುಖ್ಯವಾಗಿ ಪುನಾ ಆಶ್ರಮದಿಂದ ಓರೇಗಾನ್‌ ವರೆಗಿನ ಓಶೋ ಆಧ್ಯಾತ್ಮಿಕ ಯಾತ್ರೆಯನ್ನು ಸಾಧ್ಯವಾದಷ್ಟು ಕ್ಲುಪ್ತವಾಗಿ ಚಿತ್ರಿಸುವ ಪ್ರಯತ್ನ ಮಾಡಲಾಗಿದೆ.

ಓಶೋ ಸನ್ಯಾಸಿಯಲ್ಲದ ಸನ್ಯಾಸಿ, ಸಂತನಲ್ಲದ ಸಂತ, ಗುರುವಲ್ಲದ ಗುರು. ಭಾರತೀಯ ಸಮಾಜದ ಮಡಿವಂತಿಕೆಯನ್ನು ಮೀರಿ ಕಾಮದ ಕುರಿತಾಗಿ ಮಾತನಾಡಿ ವಿವಾದ ಸೃಷ್ಟಿಸಿಕೊಂಡವರು. ಅರಿಷಡ್ವರ್ಗಗಳನ್ನು ಮೀರದೇ ತಮ್ಮದೇ ಆದ ಭ್ರಮಾಲೋಕದಲ್ಲಿ ವಿಹರಿಸಿದವರು. ತಾವು ಧರಿಸುವ ಪೋಷಾಕಿನಿಂದ ಹಿಡಿದು ದುಬಾರಿ ರೋಲ್ಸ್ ರಾಯ್ಸ್ ಕಾರುಗಳ ಸಹಿತ, ದುಬಾರಿ ವಾಚುಗಳ ಸಹಿತ ಸುದ್ದಿಯಾಗುತ್ತಿದ್ದವರು. ತಮ್ಮನ್ನು ಭೇಟಿಯಾಗುತ್ತಿದ್ದ ಗಣ್ಯರಿಂದ ಅನೇಕ ತರಹೇವಾರಿ ದುಬಾರಿ ಗಿಫ್ಟುಗಳನ್ನು ಪಡೆದುಕೊಳ್ಳುತ್ತಿದ್ದವರು. ಓಶೋರನ್ನು ವಿರೋಧಿಸಬೇಕೆ ನಿಮಗೆ ಇಷ್ಟೇ ಸಂಗತಿಗಳು ದಕ್ಕುತ್ತವೆ. ಆದರೆ ಓಶೋರನ್ನು ಇಷ್ಟಪಡುತ್ತೀರಾದರೇ ಅವರ ನೂರಾರು ಸಾವಿರಾರು ಕಥೆಗಳು, ಜೋಕ್ಸುಗಳು, ಉಪಮೆಗಳು, ವಿದ್ವತ್‌ ಪೂರ್ಣ ಉಪನ್ಯಾಸಗಳು ಸಿಗುತ್ತವೆ. ಓಶೋರನ್ನು ಅರ್ಥ ಮಾಡಿಕೊಳ್ಳಲೂ ಒಂದು ಮಟ್ಟಿನ ಪ್ರಬುದ್ಧತೆ ಬೇಕು, ಬೌದ್ಧಿಕವಾಗಿ ಪ್ರಬುದ್ಧರಲ್ಲದವರಿಗೆ ಓಶೋ ನಿಲುಕುವುದಿಲ್ಲ ಎಂದು ಗುರುಗಳಾದ ರವಿ ಬೆಳಗೆರೆ ಸದಾ ಹೇಳುತ್ತಿದ್ದರು.

From sex to superconsciousness ಎಂದ ಓಶೋ ಪೋಲಿಗುರುವಾಗಿಬಿಟ್ಟರು. ಭಾರತದ ಆಧ್ಯಾತ್ಮಿಕ ಮಾರುಕಟ್ಟೆಯನ್ನೇ ತನ್ನ ಕಬ್ಜಾದಲ್ಲಿಟ್ಟುಕೊಂಡಿದ್ದ ಭಗವಾನ್‌ ರಜನೀಶರನ್ನು ಮಡಿವಂತ ಸಮಾಜ ನೇಪಥ್ಯಕ್ಕೆ ಸರಿಸಿಬಿಟ್ಟಿತು. ಕೇವಲ 60 ವರ್ಷಗಳು ಮಾತ್ರ ಬದುಕಿದ್ದ ಓಶೋ ಆದ್ಯಾತ್ಮದ ಜೊತೆ ಬುದ್ದ, ಪ್ರೇಮ, ಸೂಫಿ, ಜೆನ್‌, ಬದುಕು, ಸತ್ಯದರ್ಶನ, ವ್ಯಂಗ್ಯ ವಿಡಂಬನೆ ಎಲ್ಲದರ ಬಗ್ಗೆಯೂ ನಿರರ್ಗಳ ಮಾತಾಡಿದರು. ಆದರೆ ಓಶೋ ಬದುಕಿನ ವೇವ್‌ ಲೆಂತ್‌ ಕುಸಿತದಲ್ಲಿ ಅವರು ಕುಖ್ಯಾತರಾಗಿದ್ದು ಕೇವಲ ಸೆಕ್ಸ್‌ ಗುರು ಎಂದಾಗಿ ಮಾತ್ರ. ಒಂದು ಕಾಲದಲ್ಲಿ ರಾಜನಂತೆ ಮೆರೆದಿದ್ದ ವಿದೇಶಗಳಿಂದ ಗಡಿಪಾರಾಗಿ ಮತ್ತೆ ಪೂನಾದ ಆಶ್ರಮಕ್ಕೆ ಬಂದರು. ಮತ್ತೆ ಮತ್ತೆ ವಿವಾದಗಳನ್ನು ಸೃಷ್ಟಿಸಿಕೊಂಡರು, ಬದುಕಿನ ಜೊತೆ ಸಾವಿನಲ್ಲೂ ನಿಗೂಢವಾಗಿಯೇ ಉಳಿದರು.
Saakshatv Oshoyisam episode 1

ಓಶೋ ಒಂದೇ ಒಂದಕ್ಷರ ಬರೆಯಲಿಲ್ಲ, ಆದರೆ ಅವರು ಮಾತಾಡಿದ ಪ್ರತಿ ವಾಕ್ಯಗಳೂ ಪುಸ್ತಕವಾಗಿ ಆಧ್ಯಾತ್ಮಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡವು. ಅವರು ಮುಕ್ತ ಲೈಂಗಿಕತೆಯನ್ನು ಪ್ರತಿಪಾದಿಸಿದರು, ಲೈಂಗಿಕತೆಯ ಬಗ್ಗೆ, ಕಾಮದ ಬಗ್ಗೆ, ಮೈಥುನದ ಯೋಗಾವಸ್ಥೆಯ ಬಗ್ಗೆ ಮುಕ್ತವಾಗಿ ಮಾತಾಡಿದರು. ಬುದ್ದನಷ್ಟೇ ಕ್ರಿಸ್ತನನ್ನು ಪ್ರೀತಿಸಿದರು. ಪ್ರಸಿದ್ಧಿಯ ತುತ್ತತುದಿಯಲ್ಲೇ ಡಿಪ್ರೆಷನ್‌ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ವಿನೋದ್ ಖನ್ನಾ ಎಂಬ ಸ್ಪುರದ್ರೂಪಿ ನಟನನ್ನು ಶಿಷ್ಯನಾಗಿ ಸ್ವೀಕರಿಸಿ ಬದುಕಿಸಿದರು. ಮೋಹ, ಮತ್ಸರ ಮತ್ತು ಲೋಭಗಳಿಗೆ ತಮ್ಮದೇ ವ್ಯಾಖ್ಯಾನ ನೀಡಿದ ಓಶೋ, ಅರಿಷಡ್ವರ್ಗಗಳನ್ನು ಮೀರುವ ಸ್ಥಿತಿಯನ್ನೇ ಬುದ್ಧ ಎಂದರು. ಪರಂಪರೆಗಳನ್ನು ಗೊಡ್ಡು ಸಂಪ್ರದಾಯಗಳನ್ನು ಖಂಡತುಂಡವಾಗಿ ವಿರೋಧಿಸಿದರು. ಗಾಂಧಿಯನ್ನು, ಸಮಾಜವಾದವನ್ನು ಮತ್ತು ಧರ್ಮವನ್ನು ಮುಚ್ಚುಮರೆಯಿಲ್ಲದೇ ನಿರ್ಭೀಡೆಯಿಂದ ಟೀಕಿಸಿದರು.

ಇಂತಹ ಓಶೋರನ್ನು ಈವರೆಗೆ ಜಗತ್ತಿನ ಸಾವಿರ ಸಾವಿರ ಮಂದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ತಮ್ಮದೇ ಆದ ದೃಷ್ಟಿಕೋನದಲ್ಲಿ ಓಶೋರ ವ್ಯಕ್ತಿತ್ವವನ್ನು ಓರೆಹಚ್ಚಲು ಯತ್ನಿಸಿದ್ದಾರೆ. ಓಶೋ ಯಾರಿಗೆಷ್ಟು ಅರ್ಥವಾದರು? ಒಂದು ಕಾಲದಲ್ಲಿ ನಾನು ಇಷ್ಟ ಪಟ್ಟು ಓದಿದ್ದು ಓಶೋ ಮತ್ತು ಜಿಡ್ಡು ಪುಸ್ತಕಗಳನ್ನೇ. ಓಶೋ ಅಲಿಯಾಸ್‌ ಭಗವಾನ್‌ ಅಲಿಯಾಸ್‌ ಆಚಾರ್ಯ ರಜನೀಶ್‌ ಅವರ ಒಟ್ಟಾರೆ ಬದುಕು, ಚಿಂತನೆ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದ ಕುರಿತಾಗಿ ಈ ಸಂಚಿಕೆಯಿಂದ ಬರೆಯಲು ಪ್ರೇರಣೆಯಾಗಿದೆ; ಇದು ಮೊದಲ ಅಧ್ಯಾಯ, ಒಪ್ಪಿಸಿಕೊಳ್ಳಿ.

-ವಿಶ್ವಾಸ್‌ ಭಾರದ್ವಾಜ್‌ (ವಿಭಾ)
***

#Oshoyisam #ಓಶೋ #ವಿಭಾ

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd