Saakshatv Oshoyisam episode 2

ಓಶೋ ಮಾರ್ಗ Saakshatv Oshoyisam episode 2

ನಿಮ್ಮೊಳಗಿನ ದೇವರನ್ನು ಮರೆತು ಕಾಣದ ದೇವರ ಬಯ್ಯುತ್ತಾ ಕೂತರೇನು ಪ್ರಯೋಜನ? ಬದುಕಿನ ಸವಾಲುಗಳು, ಕಷ್ಟ-ನಷ್ಟಗಳು, ಗಂಡು ಹೆಣ್ಣಿನ ಮನಸ್ಥಿತಿಯ ಕುರಿತು ಓಶೋ ವ್ಯಾಖ್ಯಾನ: Saakshatv Oshoyisam episode 2

“ದೇವರು, ಧರ್ಮ, ಸಂಪ್ರದಾಯ, ಆಸ್ತಿಕತೆಯ ಹಳೆಯ ಕಂತೆ ಪುರಾಣಗಳ ಶಂಖ ಊದದೆ, ಆದ್ಯಾತ್ಮದ ಹೊಸ ಆಯಾಮ ಮನುಷ್ಯ ಬದುಕಿನ ಕುರಿತು ಹೆಚ್ಚು ಮಾತಾಡಿದ್ದೇ ಓಶೋರ ಜನಪ್ರಿಯತೆಯ ಮಾನದಂಡ. ಓಶೋ ತಾನೂ ಎಲ್ಲರಲ್ಲಿ ಒಬ್ಬನಾಗಿ/ಒಬ್ಬಳಾಗಿ ಮನುಷ್ಯ ಜೀವನದ ಕಷ್ಟ ಕೋಟಲೆಗಳ ಕುರಿತು ತನ್ನ ಅಭಿಪ್ರಾಯ ದಾಖಲಿಸುತ್ತಾ ಹೋದರು..”
Saakshatv Oshoyisam episode 2

ಬದುಕು:

ಮನುಷ್ಯ ಜೀವನ ಸುಲಭವಲ್ಲ, ಸರಳವಲ್ಲ ಹಾಗೆಯೇ ಕಷ್ಟವಲ್ಲ-ನಿಕೃಷ್ಟವೂ ಅಲ್ಲ. ಜೀವನದಲ್ಲಿ ಗಂಡು ಮತ್ತು ಹೆಣ್ಣಿನ ಭಾವಗಳು ಭಿನ್ನವೇನಲ್ಲ. ಕಷ್ಟ, ನೋವು, ಅಶಾಂತಿ, ಪರಿತಾಪಗಳು ಗಂಡನ್ನು ಹೇಗೆ ಬಾದಿಸುತ್ತವೋ ಹೆಣ್ಣನ್ನೂ ಅಷ್ಟೇ ನಲುಗಿಸುತ್ತವೆ. ಗಂಡಿಗಿಂತ ಹೆಣ್ಣಿನ ನೋವು ತೀವ್ರ ಅಥವಾ ಹೆಣ್ಣಿಗಿಂತ ಗಂಡಿನ ಸಂಕಷ್ಟುಗಳು ಆಳ ಅಂದುಕೊಂಡರೆ ಮೂರ್ಖತನದ ಮಾತಾದೀತು. ಗಂಡು ಅಂತರ್ಮುಖಿ; ದುಃಖವನ್ನು ನುಂಗಿ ಬದುಕುತ್ತಾನೆ ಎನ್ನುವ ವ್ಯಾಖ್ಯಾನವಾಗಲೀ ಅಥವಾ ಹೆಣ್ಣು ತನ್ನ ನೋವನ್ನು ಪ್ರಕಟಿಸದೇ ಬದುಕುತ್ತಾಳೆ ಎನ್ನುವ ಮಾತುಗಳಾಗಲೀ ಪೂರ್ತಿ ಸತ್ಯವಲ್ಲ. ಸಂದರ್ಭಗಳಿಗನುಗುಣವಾಗಿ ಗಂಡು ಮತ್ತು ಹೆಣ್ಣು ತಮ್ಮ ಪಾಲಿನ ದುಃಖವನ್ನು ತೋರ್ಪಡಿಸಿಕೊಳ್ಳುತ್ತಾರೆ ಅಥವಾ ಅದುಮಿಟ್ಟುಕೊಳ್ಳುತ್ತಾರಷ್ಟೆ.

ಗಂಡಿಗೆ ಗುಂಡಿಗೆ ಗಟ್ಟಿ ಹಾಗಾಗಿ ನೋವು ದುಃಖ ಅಶಾಂತಿಗಳನ್ನು ಒತ್ತಿಟ್ಟುಕೊಳ್ಳುತ್ತಾನೆ ಎನ್ನುವುದನ್ನು ಪೂರ್ಣವಾಗಿ ನಂಬುವುದು ಕಷ್ಟ. ಬಹುತೇಕ ಸಂದರ್ಭದಲ್ಲಿ ಗಂಡು ಒಂದು ಮಟ್ಟಿನ ಸಿಂಪಥಿ ಬಯಸುತ್ತಾನೆ, ಅದರ ನೆರಳಲ್ಲಿ ತಾನು ಪಟ್ಟ ಕಷ್ಟಗಳನ್ನು ಮರೆಯಲು ಬಯಸುತ್ತಾನೆ. ಅದೇ ತರಹ ಬಹಳಷ್ಟು ಸಂದರ್ಭದಲ್ಲಿ ಹೆಣ್ಣು ತನ್ನ ಆಂತರೀಕ ಬೇಗುದಿಯನ್ನು ಸಾಧ್ಯವಾದಷ್ಟು ಮರೆಯಾಗಿಸಿ ತಾನು ಗಟ್ಟಿಗಿತ್ತಿ ಎಂದು ನಿರೂಪಿಸಲು ಹೆಣಗುತ್ತಾಳೆ. ಗಂಡು ಮತ್ತು ಹೆಣ್ಣುಗಳ ನಡುವೆ ಭಾವ ಪ್ರಕಟಣೆಯಲ್ಲಿ ಪರಸ್ಪರ ಸಾಮ್ಯತೆಯೂ ಇದೆ ಪರಸ್ಪರ ವೈರುಧ್ಯವೂ ಇದೆ.

ಬದುಕಿನಲ್ಲಿ ನೋವು, ಸಮಸ್ಯೆ, ಕಷ್ಟ-ನಷ್ಟಗಳು ಹೇಗೆ ಬರುತ್ತವೆ? ಇದೊಂದು ಸಾಮಾನ್ಯ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಗಂಡಿಗಾಗಲೀ ಅಥವಾ ಹೆಣ್ಣಿಗಾಗಲೀ ಆತನ ಅಥವಾ ಆಕೆಯ ಬದುಕಿನ ಶೈಲಿಯಿಂದ? ಬದುಕುವ ವಾತಾವರಣದಿಂದ? ಜೀವನದ ಸ್ಥಿತಿ ಸಂದರ್ಭಗಳಿಂದ? ಹವ್ಯಾಸಗಳಿಂದ? ವರ್ತನೆಗಳಿಂದ? ತೆಗೆದುಕೊಳ್ಳುವ ನಿಲುವು ನಿರ್ಧಾರಗಳಿಂದ? ಇನ್ನೊಬ್ಬರ ಮೇಲಿನ ಅವಲಂಭನೆಯಿಂದ? ಯಾರದ್ದೋ ಪ್ರೇರಣೆಯಿಂದ? ಅದೃಷ್ಟ ಅಥವಾ ವಿಧಿಯಿಂದ? ಬುದ್ದಿಯಿಂದ? ಅಥವಾ ಮನಸಿನಿಂದ? ಜನ್ಮನಕ್ಷತ್ರದಿಂದ? ದೆಸೆ ಅಥವಾ ನಸೀಬಿನಿಂದ? ಈ ಪ್ರಶ್ನೆಗೆ ಸುಲಭವಾಗಿ ಹೀಗೆಯೇ ಎಂದು ಉತ್ತರ ಕೊಡುವುದು ಕಷ್ಟ ಮಾತ್ರವಲ್ಲ ಅಸಾಧ್ಯ. ಆದರೆ ಈ ಪ್ರಶ್ನೆಯ ಮೂಲ ಮಾತ್ರ ಗಂಡಿನದ್ದೋ ಹೆಣ್ಣಿನದ್ದೋ ಬುದ್ದಿ ಅಥವಾ ಮನಸ್ಸು ಎಂದಷ್ಟು ಹೇಳುತ್ತಾರೆ ತಿಳಿದವರು, ಜೀವನಾನುಭವಿಗಳು. Saakshatv Oshoyisam episode 2

ಬದುಕಿನ ಸುದೀರ್ಘ ದಾರಿ ನೇರವಾಗಿ ಖಂಡಿತಾ ಇರಲಾರದು. ಅಲ್ಲಿ ಅಸಂಖ್ಯ ತಿರುವುಗಳಿರಲೇಬೇಕು. ಪ್ರತೀ ತಿರುವಿನಲ್ಲೂ ಒಂದೋ ಯಶಸ್ಸು ಕಾದಿರುತ್ತದೆ ಅಥವಾ ದುಃಖ ನಿಂತಿರುತ್ತದೆ. ಇವುಗಳನ್ನು ದಾಟದೇ ಮುಂದೆ ಸಾಗಲು ಸಾಧ್ಯವಿಲ್ಲ. ಗಂಡಾಗಲೀ ಅಥವಾ ಹೆಣ್ಣಾಗಲೀ ತನ್ನಲ್ಲಿರುವ ಕ್ಷಮತೆಯ ಸಹಾಯದಿಂದ ಇವುಗಳನ್ನು ಎದುರಿಸಲೇಬೇಕು. ಯಶಸ್ಸು ಸಿಕ್ಕವನಿಗೆ ಮುಂದಿನ ತಿರುವಿನಲ್ಲಿ ದುಃಖವೂ ಸಿಗುವ ಸಾಧ್ಯತೆ ಇರಲೇಬೇಕು. ದುಃಖವನ್ನೇ ದಾಟಿದವಳಿಗೆ ಅಂತಿಮ ಗಮ್ಯ ಸುಖವೇ ಆಗಿರಲೂಬಹುದು. ಇಲ್ಲಿ ದುಃಖ ದಾಟಿದ ಹೆಣ್ಣು ಗಟ್ಟಿಗಿತ್ತಿಯಾದರೆ, ಅವಳ ದಾರಿ ದುರ್ಗಮವಾದರೂ ಮುಂದಿನ ತಿರುವನ್ನು ಅರುಸುವ ಕಡೆಗೆ, ನಡಿಗೆ ಕೊಂಚ ದೃಢವಾಗಿರುತ್ತದೆ. ಯಶ ಪಡೆದವನ ದಾರಿ ರಾಜಮಾರ್ಗವೇ ಆಗಿದ್ದರೂ ಅದರ ಅಮಲಿನಲ್ಲಿ ಮೈಮರೆತರೇ, ಗಂಡಿನ ನಡಿಗೆ ಮತ್ತೊಂದು ತಿರುವನ್ನು ದಾಟಲು ನಿಧಾನವಾಗುತ್ತದೆ. ಈ ವಿಚಾರದಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲ. ಇಬ್ಬರದ್ದೂ ಸಮಾನ ಸ್ಥಿತಿ.

ನೋವು ನುಂಗಿ ಬದುಕುವ ಅವನಾಗಲೀ ಅವಳಾಗಲೀ ಯಾರ ಬಳಿಯಾದರೂ ತಾನು ನುಂಗಿದ ನೋವಿನ ಗಾತ್ರವನ್ನು ಅಭಿವ್ಯಕ್ತಪಡಿಸುತ್ತಾರೆಂದರೇ ಅವರಿಗೆ ಆ ಯಾರೋ ಒಬ್ಬರ ಅಗತ್ಯವಿದೆ ಎಂದಷ್ಟೇ ಅರ್ಥ. ಅದರ ಹಿಂದೆ ಅನುಕಂಪ ಪಡೆದುಕೊಳ್ಳುವ ಉದ್ದೇಶವೂ ಇರುತ್ತದೆ ಹಾಗೂ ಸಹಯಾತ್ರೆಯ ಆಮಂತ್ರಣವೂ ಇರುತ್ತದೆ. ಅದೇ ಗಂಡು ಅಥವಾ ಹೆಣ್ಣು ತಾನು ಅನುಭವಿಸಿದ ಕಷ್ಟವನ್ನು ಮುಚ್ಚಿಟ್ಟು ಮುಂದೆ ನಡೆಯುತ್ತಿದ್ದಾನೆ/ಳೆ ಎಂದರೆ ಅದು ಅವನೊಳಗಿನ/ಅವಳೊಳಗಿನ ಆಂದೋಳನದ ಅಪ್ರಕಟಿತ ಸ್ಥಿತಿಯಷ್ಟೇ ಆಗಿರದೇ ಅವನು/ಅವಳು ತನ್ನೊಳಗೆ ತಾನು ಏನೋ ಮಥಿಸುತ್ತಿದ್ದಾನೆ/ಳೆ, ತಾನು ಮತ್ತಷ್ಟು ಗಟ್ಟಿಯಾಗುವ ಪ್ರಯತ್ನದಲ್ಲಿದ್ದಾನೆ/ಳೆ ಎನ್ನುವ ಅರ್ಥವೂ ಹೌದು. ಹಾಗೂ ತನ್ನ ನೋವು ತನಗಷ್ಟೇ ಸೀಮಿತವಾಗಿರಲಿ ಅದನ್ನು ಜಗತ್ತಿಗೆ ತೋರ್ಪಡಿಸಿ ಆಗಬೇಕಾಗಿದ್ದೇನಿಲ್ಲ ಎನ್ನುವ ವೈರಾಗ್ಯವೂ ಆಗಿರಬಹುದು. ಅಥವಾ ತಾನು ತನ್ನ ಕಷ್ಟ ನಷ್ಟಗಳನ್ನು ಹೇಳಿಕೊಂಡ ಮಾತ್ರಕ್ಕೆ ತನ್ನ ವ್ಯಕ್ತಿತ್ವದ ಗಟ್ಟಿತನ ಶಿಥಿಲವಾಗಬಹುದು ಎನ್ನುವ ಆತಂಕವೂ ಇರಬಹುದು.

ಗಂಡಲ್ಲಾಗಲೀ ಅಥವಾ ಹೆಣ್ಣಲ್ಲಾಗಲೀ ಇನ್ನೊಂದು ವರ್ಗವಿದೆ. ಬದುಕಿನ ಸವಾಲುಗಳಿಗೆ ಸಿಕ್ಕು ನರಳಿದ ಬಳಲಿದ ಆ ಜೀವಗಳಿಗೆ ಒಂದು ಮಟ್ಟಿಗಿನ ಜಿಗುಪ್ಸೆ, ವೈರಾಗ್ಯ ಮೂಡಿರುತ್ತದೆ. ಅವರು ಸವಾಲುಗಳನ್ನು ಎದುರಿಸಲು ಹಿಂಜರಿಯುತ್ತಾರೆ. ಅವರಿಗೆ ತಮ್ಮೊಳಗಿನ ಆತ್ಮಶಕ್ತಿಯನ್ನು ಉದ್ದೀಪನಗೊಳಿಸುವ ಇಚ್ಛಾಶಕ್ತಿಯೇ ಮರೆತುಹೋಗಿರುತ್ತದೆ. ತಮಗೆ ಎದುರಾದ ನೋವುಗಳಿಗೆಲ್ಲಾ ಯಾರನ್ನಾದರೂ ದೂಷಿಸುವುದನ್ನೇ ರೂಢಿ ಮಾಡಿಕೊಳ್ಳುತ್ತಾರೆ. ಹಾಗೆ ಅವರಿಗೆ ಸುಲಭವಾಗಿ ಸಿಗುವ ವಸ್ತು ದೇವರು. ತಮಗೆ ಒದಗಿದ ಕಷ್ಟಗಳಿಗೆಲ್ಲಾ ತಾವು ನಂಬಿದ ದೇವರೇ ಕಾರಣ ಎಂದು ದೂಷಿಸುತ್ತಾರೆ. ದೇವರನ್ನು ಬಯ್ದು ಬಯ್ದು ಸುಸ್ತಾದ ನಂತರ ತಮ್ಮ ಪಾಲಿನ ಅದೃಷ್ಟವನಗ್ನು ಹಳಿದುಕೊಳ್ಳಲು ಆರಂಭಿಸುತ್ತಾರೆ. ತಮ್ಮ ನಸೀಬು ಚೆನ್ನಾಗಿಲ್ಲ, ಹುಟ್ಟಿದ ನಕ್ಷತ್ರ ಚೆನ್ನಾಗಿಲ್ಲ, ಗ್ರಹಗತಿಗಳು ಉತಯ್ತಮವಾಗಿಲ್ಲ ಹೀಗೆ ತಮ್ಮನ್ನು ತಾವೇ ನಿಂದಿಸಿಕೊಳ್ಳುತ್ತಾ ತಮ್ಮೊಳಗಿನ ಧೀಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತಾರೆ.
Saakshatv Oshoyisam episode 2

ಅವರಲ್ಲಿ ಕೆಲವರು ಸ್ವಲ್ಪ ಆಶಾವಾದಿಗಳು ಮುಂದು ಅದೇ ದೇವರು ಒಳ್ಳೆಯದನ್ನು ಮಾಡೇ ಮಾಡುತ್ತಾರೆ ಎನ್ನುತ್ತಾ ಕಾಯುತ್ತಾ ಕೂರುತ್ತಾರೆ. ನಮ್ಮ ಮುಕ್ಕೋಟಿ ದೇವರುಗಳ ಮಾರ್ಕೆಂಟಿಂಗ್‌ ಮಾಡುವುದೇ ಇವರು. ಧರ್ಮಗಳು ಗಟ್ಟಿಯಾಗಿ ತಳವೂರಲು ಇವರ ಕೊಡುಗೆಯೇ ಹೆಚ್ಚು. ಜಾತಕ-ಜ್ಯೋತಿಷ್ಯ, ವಾಸ್ತುಶಾಸ್ತ್ರ, ಹಸ್ತಸಾಮದ್ರಿಕೆ, ಡೋಂಗಿ ಬಾಬಾಗಳು, ಪವಾಡ ಪುರುಷರು, ಅವತಾರ ಮಹಿಮರು ಜನಪ್ರಿಯತೆ ಪಡೆದುಕೊಳ್ಳುವುದೂ ಇವರಿಂದಲೇ. ಇವರಿಗೆ ತಕ್ಷಣದ ಪರಿಹಾರವಾಗಿ ಗೋಚರಿಸುವುದು ಒಂದೋ ದೇವರನ್ನು ಬಯ್ಯಬೇಕು ಅಥವಾ ಬಾಬಾಗಳ, ಸನ್ಯಾಸಿಗಳ ಕಾಲಿಗೆ ಬಿದ್ದು ಶರಣುಹೋಗಬೇಕು. ಕಾಣದ ದೇವರನ್ನು ನಿಂದಿಸುತ್ತಾ ತನ್ನೊಳಗಿನ ಪರಮಾತ್ಮನನ್ನು ನಿರ್ಲಕ್ಷಿಸಿಬಿಡುತ್ತಾರೆ. ಇವರಿಗೆ ಅಂಗಾರಮ ಅಮಂಗಳ, ಶನಿ ದರಿದ್ರ, ಬುದ ಮಹಾಸಂಕಷ್ಟ. ರಾಹು-ಕೇತು ವಕ್ರದೃಷ್ಟಿ, ಶುಕ್ರದೆಸೆ, ಗುರುದೆಸೆಗಳ ಜೂಜಲ್ಲಿ ತಮ್ಮ ಬದುಕನ್ನು ಪಣವಿಟ್ಟುಬಿಡುತ್ತಾರೆ. Saakshatv Oshoyisam episode 2

ದೇವರ ಆಯುಷ್ಯವನ್ನು ಹೆಚ್ಚಿಸುವ ಇವರು ಇಡೀ ಬದುಕಿನಲ್ಲಿ ದೇವರನ್ನು ಬಯ್ಯುವ, ಹೊಗಳುವ, ಬೇಡಿಕೆ ಮಂಡಿಸುವ, ಮೊರೆಯಿಡುವ ಹೊರತಾಗಿ ಮತ್ತಿನ್ನೇನೂ ಮಾಡಲಾರರು. ದೇವರನ್ನು ಅತಿಯಾಗಿ ನಂಬುವ ಆಶಾವಾದಿಗಳ ಬದುಕು ಹೀಗೆ ನಿರೀಕ್ಷೆಗಳಲ್ಲೇ ಕಳೆದುಹೋದರೇ, ನಿರಾಶಾವಾದಿಗಳ ಜೀವನ ಮಾತ್ರ ಮತ್ತೇನೋ ಬಡಬಡಿಸುತ್ತದೆ. ಹುಟ್ಟಿದ್ದಾಗಿದೆ, ಕರ್ಮಕಾಂಡಗಳನ್ನು, ಗೃಹಚಾರಗಳನ್ನು ದಾಟಲೇಬೇಕು. ಬಂದ ಕಷ್ಟಗಳೆಲ್ಲವೂ ಬರಲಿ, ಹಾಗೂ ಹೀಗೂ ಬದುಕಿ ಒಂದಿನ ಸತ್ತುಬಿಡೋಣ. ಇಷ್ಟೇ ಅವರ ನಿರ್ಧಾರವೂ ಆಗಿಬಿಡುತ್ತದೆ. ಅದರ ಹೊರತಾಗಿ ಒಂದೇ ಸಲ ತಮ್ಮ ಒಳಗಿನ ಅಂತಃಶಕ್ತಿಯನ್ನು ನಂಬಿ ಒಂದೇ ಒಂದು ಹೆಜ್ಜೆಯನ್ನಾದರೂ ಮುಂದಿಡೋಣ ಎನ್ನುವ ಯತ್ನಕ್ಕೆ ಅವರು ಮುಂದಾಗುವುದೇ ಇಲ್ಲ. ಈ ವರ್ಗದವರಲ್ಲಿ ಗಂಡ ಮತ್ತು ಹೆಣ್ಣು ಇಬ್ಬರೂ ಸಮಾನರಿದ್ದಾರೆ. ಇವರಿಗೆ ನಿಜಕ್ಕೂ ಅಗತ್ಯವಿರುವುದು ಒಬ್ಬ ಸಮರ್ಥ ಮಾರ್ಗದರ್ಶಕ, ಬದುಕಿನ ಮಹಾಸಾಗರವನ್ನು ದಾಟಿಸಬಲ್ಲ ಗುರು.

ವಿಶ್ವಾಸ್‌ ಭಾರದ್ವಾಜ್‌ (ವಿಭಾ)

#Oshoyisam #ಓಶೋ #ವಿಭಾ #ಓಶೋ’ಯಿಸಂ

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd