ಬುದ್ದಿವಂತನೆಂಬ ಡೆಡ್‌ಎಂಡ್‌ಗಿಂತ ಮೂರ್ಖನೆಂಬ ಕಂಟಿನ್ಯೂ ಪ್ರೋಸೆಸ್‌ ಹೆಚ್ಚು ಮಹತ್ವದ್ದು:

1 min read
Saakshatv Oshoyisam episode 7

ಓಶೋಯಿಸಂ:

ಬುದ್ದಿವಂತನೆಂಬ ಡೆಡ್‌ಎಂಡ್‌ಗಿಂತ ಮೂರ್ಖನೆಂಬ ಕಂಟಿನ್ಯೂ ಪ್ರೋಸೆಸ್‌ ಹೆಚ್ಚು ಮಹತ್ವದ್ದು: Saakshatv Oshoyisam episode 7

ಓಶೋ ತಮ್ಮ ಉಪನ್ಯಾಸಗಳಲ್ಲಿ, ಪ್ರವಚನಗಳಲ್ಲಿ ಹಾಗೂ ಸತ್ಸಂಗಗಳಲ್ಲಿ ಮನುಷ್ಯನ ಒಳಗಿನ ಪರಿವರ್ತನೆಯ ಕುರಿತಾಗಿ ಸಾಕಷ್ಟು ಮಾತಾಡಿದ್ದಾರೆ. ಮನುಷ್ಯನ ಅಂತರಂಗದ ಪರಿವರ್ತನೆಯನ್ನು ಒಂದು ರೀತಿಯ ವೈಜ್ಞಾನಿಕ ಕ್ರಾಂತಿ ಎಂದು ಓಶೋ ಬಗೆಯುತ್ತಿದ್ದರು. ತಮ್ಮ ಸಮಕಾಲೀನ ಸಂಗಾತಿಗಳ ಜೀವನದ ನೋವು-ನಲಿವು, ದುಃಖ-ದುಮ್ಮಾನ, ಬೇಸರ-ಹತಾಶೆ, ಅಸಮಧಾನ-ರಾಗ-ದ್ವೇಷ, ಸಂತೋಷ-ಸಂತೃಪ್ತಿ ಎಲ್ಲಾ ಭಾವನೆಗಳನ್ನೂ ಓಶೋ ಅರ್ಥ ಮಾಡಿಕೊಳ್ಳುತ್ತಿದ್ದರು, ತಮ್ಮದೇ ಆದ ದೃಷ್ಟಿಕೋನದಲ್ಲಿ ಆ ಭಾವಗಳಿಗೆ ಒಂದು ತಾತ್ವಿಕವಾದ ವ್ಯಾಖ್ಯಾನ ನೀಡುತ್ತಿದ್ದರು. ಆಧುನಿಕ ಬದುಕಿನ ವೇಗದ ಜಂಜಾಟದಲ್ಲಿ ಮನಸನ್ನು ಪ್ರಶಾಂತವಾಗಿಸಿಕೊಳ್ಳಲು ಮತ್ತು ಬದುಕನ್ನು ನೆಮ್ಮದಿಯಾಗಿಸಿ ಸಹ್ಯಗೊಳಿಸಲು ಧ್ಯಾನದ ವಿಧಾನವನ್ನು ಉಪದೇಶಿಸುತ್ತಿದ್ದರು. ಓಶೋರ ಜೀವನಾನುಭವ, ತಾತ್ವಿಕತೆ, ನಿಲುವು ಮತ್ತು ಬದುಕಿನ ಸಂತಸ, ಸುಖ ಹಾಗೂ ಶಾಂತಿಯ ಕುರಿತಾಗಿ ಓಶೋ ಕಂಡುಕೊಂಡ ಮಾರ್ಗ ಸರಳ ಆದರೆ ಅದನ್ನು ಅನುಸರಿಸಲು ಮತ್ತು ಅನುಭವಿಸಲು ನಾವೂ ಓಶೋರಂತೆಯೇ ಸರಳವಾಗಬೇಕು. ಓಶೋ ಬುದ್ದಿವಂತಿರಿಗಿಂತ ಹೆಚ್ಚು ಮೂರ್ಖರ ವಿಧಾನಗಳನ್ನು ಇಷ್ಟಪಡುತ್ತಿದ್ದರು. Saakshatv Oshoyisam episode 7
Saakshatv Oshoyisam episode 2
ಓಶೋ ಹೇಳುತ್ತಿದ್ದರು, ಇಡೀ ಅಸ್ತಿತ್ವಕ್ಕೆ ಸೇರಿದವರು ನೀವು; ಒಂದು ದೊಡ್ಡ ವಿಶ್ವ ನಿಮ್ಮದು. ಹೀಗಿದ್ದಾಗ ಅತ್ಯಂತ ಕ್ಷುಲ್ಲಕವೆನಿಸುವ ಸಣ್ಣ-ಸಣ್ಣ ವಿಷಯಗಳಿಗೆ ನಿಮ್ಮನ್ನು ನೀವು ಏಕೆ ಸೀಮಿತಗೊಳಿಸಿಕೊಳ್ಳುತ್ತೀರಿ. ಪೂರ್ತಿ ಲಭ್ಯವಾಗುವ ಅವಕಾಶವಿದ್ದಾಗ ಪೂರ್ತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ; ಯಕಃಶ್ಚಿತ ಸಂಗತಿಗಳಿಗೆ ಹಾತೊರೆದು ನಿರಾಶರಾಗಬೇಡಿ. ಓಶೋ ಮಟ್ಟಿಗೆ ಯಶಸ್ಸಿನ ಸರಳ ಸೂತ್ರವೇ ಇದು. ಒಂದಷ್ಟು ಕಾದರೂ ಇಡಿಯಾಗಿ ಪಡೆದುಕೊಳ್ಳುವುದು, ಇಡಿಯಾಗಿ ಜೀವಿಸುವುದು ಮತ್ತು ಪೂರ್ತಿ ಅಸ್ಥಿತ್ವವನ್ನು ಕನವರಿಸುವುದು ಜೊತೆಗೆ ಆ ಪೂರ್ತಿ ಅಸ್ಥಿತ್ವದ ಭಾಗವಾಗಿ ಬದುಕುವುದು.

ಒಬ್ಬ ವ್ಯಕ್ತಿಯನ್ನು (ಅವನನ್ನು ಅಥವಾ ಅವಳನ್ನು) ನೀವು ನಿಜಕ್ಕೂ ಪ್ರೀತಿಸಿದ್ದೇ ಆದರೆ, ನೀವು ಅವರ ವೈಯಕ್ತಿಕ ಜೀವನದಲ್ಲಿ ಖಂಡಿತಾ ಹಸ್ತಕ್ಷೇಪ ಮಾಡುವುದಿಲ್ಲ. ಅವನ ಅಥವಾ ಅವಳ ಆಂತರಿಕ ಪ್ರಪಂಚದ ಗಡಿಗಳನ್ನು ದಾಟಲು ನೀವು ಧೈರ್ಯ ಮಾಡುವುದಿಲ್ಲ; ಕನಿಷ್ಠ ಹಾಗೆ ಯೋಚಿಸುವುದೂ ಇಲ್ಲ. ಪ್ರಾಯಶಃ ಇದೊಂದೇ ನಿಮ್ಮ ಬಾಂದವ್ಯವನ್ನು ಜೀವಂತವಾಗಿಡುವ ಸರಳ ಸೂತ್ರ. ಪ್ರತಿಯೊಬ್ಬರಿಗೂ ಅವರದ್ದೇ ಆದ ಪ್ರತ್ಯೇಕತೆಯಿರುತ್ತದೆ. ಯಾರೂ ಯಾರಿಗೂ ಸ್ವಂತವಾಗುವುದಿಲ್ಲ, ಸ್ವಂತವಾಗಲೂಬಾರದು. ಪ್ರತಿಯೊಬ್ಬರ ಪ್ರತೀ ಪ್ರತ್ಯೇಕತೆಯನ್ನು ಗೌರವಿಸಿದಾಗ ಮಾತ್ರ ಅವರೂ ನಿಮ್ಮ ಬಗೆಗೆ ಅದೇ ಗೌರವದ ಭಾವನೆ ತಳೆಯುತ್ತಾರೆ. ಹೀಗೊಂದು ದಿವ್ಯ ಬಾಂದವ್ಯ ಮೊಳೆತಾಗ ಜೀವನದಲ್ಲಿ ಹರ್ಷ ನೆಲೆಸುತ್ತದೆ, ನೆಮ್ಮದಿ ದಾಖಲಾಗುತ್ತದೆ. ವೈಯಕ್ತಿಕ ಜೀವನ ನೆಮ್ಮದಿಯಿಂದ ಇದ್ದಾಗ ಮಾತ್ರವೇ ಬಾಹ್ಯ ವಿಶ್ವದಲ್ಲಿ ನಿಮ್ಮದೊಂದು ಅಸ್ಥಿತ್ವ ದಾಖಲಾಗಲು ಸಾಧ್ಯ. ಪ್ರತಿ ಸಾಧಕನ ಶಕ್ತಿ ಮತ್ತು ಸಾಮರ್ಥ್ಯಗಳ ಹಿಂದೆ ಅವನ ವಿವೇಕ, ವಿವೇಚನೆ ಮತ್ತು ಜ್ಞಾನ ಮಾತ್ರ ಅಡಗಿರುವುದಿಲ್ಲ; ಅವನ ವೈಯಕ್ತಿಕ ಬದುಕಿನಲ್ಲಿರುವ ನೆಮ್ಮದಿಯೂ ಕಾರಣವಾಗಿರುತ್ತದೆ.

ಬದುಕೆಂದರೇ ಕೇವಲ ಅಗಾಧ ಬುದ್ದಿವಂತಿಕೆಯಲ್ಲ. ನಾವು ಹಾಗಂದುಕೊಂಡೇ ಸೋಲುತ್ತೇವೆ. ಬದುಕಿನಲ್ಲಿ ಗಳಿಸಿಕೊಳ್ಳಲು ಕೊಂಚ ಮೂರ್ಖತನವೂ ಅಗತ್ಯ. ಮನುಷ್ಯ ಮೂರ್ಖನಾಗಿದ್ದಷ್ಟು ಕಾಲ ಹೆಚ್ಚು ಕಲಿಯಲು ಉತ್ಸುಕನಾಗುತ್ತಾನೆ. ಮೂರ್ಖತನ ಮನುಷ್ಯನನ್ನು ಅಹಂಕಾರ ವಿಮುಖನನ್ನಾಗಿಸುತ್ತದೆ. ನಮ್ಮಲ್ಲಿ ಮೂರ್ಖತನ ಇರುವಷ್ಟೂ ದಿನ ನಾವು ವಿದ್ಯಾರ್ಥಿಗಳಾಗಿರುತ್ತೇವೆ. ಮೂರ್ಖನೊಬ್ಬನ ಬದುಕಿನಲ್ಲಿ ಅನಪೇಕ್ಷಿತ ಇಗೋಗಳಿರುವುದಿಲ್ಲ. ಮೂರ್ಖನೊಬ್ಬ ತನ್ನ ಜೀವನವನ್ನು ಆನಂದಿಸುವಷ್ಟು ಒಬ್ಬ ಬುದ್ದಿವಂತ ಪಂಡಿತ ಆನಂದಿಸಲಾರ. ಮೂರ್ಖನ ತಪ್ಪುಗಳು ಹಾಗೂ ದೋಷಗಳು ಅವನನ್ನು ಪ್ರಯೋಗಶೀಲನನ್ನಾಗಿಸುತ್ತದೆ. ಅವನು ಎಡುವುತ್ತಲೇ ಸರಿಯಾದ ದಾರಿ ಹುಡಕಿಕೊಳ್ಳುತ್ತಾನೆ. ಅವನ ಬದುಕು ಅವನ ಪೀಳಿಗೆಗೆ ನಿಜವಾದ ಮಾದರಿಯಾಗುತ್ತದೆ. ಸರಳವಾಗಿ ಹೇಳುವುದಾದರೆ ಮೂರ್ಖನ ಜೀವನ ಅವನ ಪೂರ್ಣತ್ವ, ಅವನ ಪ್ರತ್ಯೇಕತೆ ಮತ್ತು ಅವನ ಸ್ವಾತಂತ್ರ್ಯ. ಯಾಕಂದರೆ ಮೂರ್ಖನನ್ನು ಯಾರೂ ಅನುಸರಿಸುವುದಿಲ್ಲ, ಮೂರ್ಖನಿಗೆ ಯಾರ ಮರ್ಜಿಯೂ ಇಲ್ಲ, ಮುಲಾಜೂ ಇಲ್ಲ, ಸಮಾಜಕ್ಕೆ ಅಂಜಬೇಕಾದ ಅಗತ್ಯವೂ ಇಲ್ಲ. ಒಬ್ಬ ಬುದ್ಧಿವಂತ ವ್ಯಕ್ತಿಯ ಯಶಸ್ಸು ಆತನ ಒಳನೋಟವನ್ನು ಅವಲಂಬಿಸಿರುತ್ತದೆ; ಅವನು ತನ್ನ ಅಸ್ತಿತ್ವವನ್ನು ನಂಬುತ್ತಾನೆ. ಹಾಗೂ ತನ್ನನ್ನು ಮಾತ್ರ ಪ್ರೀತಿಸುತ್ತಾನೆ, ಗೌರವಿಸಿಕೊಳ್ಳುತ್ತಾನೆ. ಆದರೆ ಮೂರ್ಖನ ಯಶಸ್ಸು ಅವನ ಪ್ರಯೋಗದ ಮೇಲೆ ನಿಂತಿರುತ್ತದೆ. ಅವನು ಹತ್ತಾರು ಮೂರ್ಖರ ಮಾತು ಕೇಳುತ್ತಾನೆ. ಎಲ್ಲರನ್ನೂ ಪ್ರೀತಿಸುತ್ತಾನೆ, ಎಲ್ಲರನ್ನೂ ಗೌರವಿಸುತ್ತಾನೆ.

ಉತ್ಕಟ ಭಾವನೆಗಳೆಂದರೆ ಏನು ಅನ್ನುವುದನ್ನು ನಿಮ್ಮನ್ನು ಪ್ರೀತಿಸುವವರಿಂದ ಕಂಡುಕೊಳ್ಳಬೇಕಾಗಿಲ್ಲ. ನೀವು ಯಾರೆಂದು ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನ ಭಾವಪರವಶತೆ ಮತ್ತೊಂದಿಲ್ಲ. ಅಸಲಿಗೆ ಈ ಸೃಜನಶೀಲರಾಗಿರುವುದು ಎಂದರೆ ನಿಮ್ಮ ಜೀವನವನ್ನು ಹೆಚ್ಚಾಗಿ ಪ್ರೀತಿಸುವುದು ಎಂದಷ್ಟೆ ಅರ್ಥ. ಜೀವನ ಸರಳವಾಗಿದ್ದಷ್ಟೂ ಸಂಭ್ರಮ ಸಂತೋಷ ಹೆಚ್ಚಾಗಿರುತ್ತದೆ. ಬದುಕನ್ನು ವಿನಾಕಾರಣ ಕಷ್ಟಕರವಾಗಿಸಿಕೊಳ್ಳುವುದು ಅಥವಾ ಕ್ಲಿಷ್ಟವಾಗಿಸಿಕೊಳ್ಳುವುದು ಮೂರ್ಖತನ ಅಲ್ಲ ಅದು ಬುದ್ದಿವಂತಿಕೆ. ಉದಾಹರಣೆ ಸಹಿತ ಹೇಳುವುದಾದರೆ ಆಗಲು ಪ್ರಯತ್ನಿಸುವುದು ಮತ್ತು ಆಗಿಯೇ ಬಿಡುವುದು ಎರಡರ ಮಧ್ಯೆ ಒಂದು ಸ್ಪಷ್ಟವಾದ ವ್ಯತ್ಯಾಸವಿದೆ. ಆಗಲು ಪ್ರಯತ್ನಿಸುವುದು ಮೂರ್ಖನ ಕೆಲಸ, ಆಗೇ ಬಿಡುವುದು ಬುದ್ದಿವಂತಿಕೆ. ಆಗಿಬಿಟ್ಟ ಅಂದರೆ ಮುಗಿದುಹೋದ. ಅಲ್ಲಿಗೆ ಅವನಿಂದ ಮತ್ತೆ ಆಗುವಿಕೆಗಳು ಸಂಭವಿಸುವುದಿಲ್ಲ. ಆದರೆ ಆಗಲು ಪ್ರಯತ್ನಿಸುತ್ತಲೇ ಇರುವವನಿಂದ ಎಷ್ಟೋ ಆಗುವಿಕೆಗಳು ಆಗುತ್ತಲೇ ಇರುತ್ತವೆ. ಆಗಿಬಿಡುವುದು ಎಂದರೆ ಡೆಡ್‌ ಎಂಡ್‌, ಆಗಲು ಪ್ರಯತ್ನಿಸುತ್ತಲೇ ಇರುವುದು ಕಂಟಿನ್ಯೂ ಪ್ರೊಸೆಸ್; ನಿರಂತರ ಪ್ರಕ್ರಿಯೆ. ಬದುಕಿನ ಕ್ರಿಯಾಶೀಲತೆ, ಚಲನಶೀಲತೆ ಮತ್ತು ಸೃಜನಶೀಲತೆ ಇರುವುದೇ ಈ ಕಂಟಿನ್ಯೂ ಪ್ರೊಸೆಸ್‌ ಅಥವಾ ನಿರಂತರ ಪ್ರಕ್ರಿಯೆಯಲ್ಲಿ. ಮೂರ್ಖನ ಬದುಕು ನಿರಂತರ ಪ್ರಕ್ರಿಯೆ ಅದೊಂದು ನದಿಯ ಹಾಗೆ. ಹಾಗಾಗಿಯೇ ನಾವೆಲ್ಲರೂ ಮೂರ್ಖರಾಗಿದ್ದಷ್ಟೂ ಕ್ರಿಯಾಶೀಲರಾಗಿರುತ್ತೇವೆ.

ಜೀವನದಲ್ಲಿ ಎಂದೂ ಕೋಪಗೊಳ್ಳಬೇಡಿ; ಕೋಪ ನಿಮ್ಮ ಸೃಜನಶೀಲತೆಯನ್ನು ನಾಶಮಾಡುತ್ತದೆ. ಪ್ರಕೃತಿಯ ಒಂದು ರಹಸ್ಯವೇನೆಂದರೆ ಯಾರ ಜೀವನವು ಯಾರನ್ನು ನಿರಾಶೆಗೊಳಿಸುವುದಿಲ್ಲ. ಜೀವನ ಎಂದರೆ ಅದು ಅವಕಾಶಗಳ ದೊಡ್ಡ ಮಾರುಕಟ್ಟೆ. ಅಲ್ಲಿ ಒಂದಲ್ಲ ಒಂದು ಅವಕಾಶಗಳು ಲಭ್ಯವಿರುತ್ತವೆ. ಕೆಲವು ಪುಕ್ಕಟೆ ಸಿಗುತ್ತವೆ ಇನ್ನೂ ಕೆಲವಕ್ಕೆ ಒಂದು ಮೌಲ್ಯವಿರುತ್ತದೆ. ಬುದ್ದಿವಂತ ಮೌಲ್ಯವಿರುವುದನ್ನು ಕೊಂಡುಕೊಳ್ಳುತ್ತಾನೆ ಕಾರಣ ಆ ಮೌಲ್ಯದ ಎರಡು ಪಟ್ಟು ಮೌಲ್ಯವನ್ನು ಸಂಪಾದಿಸಿಕೊಳ್ಳುವುದು ಅವನ ಉದ್ದೇಶವಾಗಿರುತ್ತದೆ. ಆದರೆ ನಮ್ಮ ಮೂರ್ಖನಿದ್ದಾನಲ್ಲ, ಅವನು ಸದಾ ಪುಕ್ಕಟೆ ಸಿಗುವ ಅವಕಾಶಕ್ಕಾಗಿ ಕಾಯುತ್ತಾನೆ, ಅರಸುತ್ತಾನೆ, ನಿರೀಕ್ಷಿಸುತ್ತಾನೆ. ಕಳೆದುಕೊಳ್ಳುವ ಭಯ ಅವನಿಗಿರುವುದಿಲ್ಲ ಹಾಗಾಗಿ ಸುಲಭವಾಗಿ ಸಿಗಬಹುದಾದ ಅವಕಾಶವನ್ನು ಕಷ್ಟ ಪಟ್ಟು ಗಳಿಸಿಕೊಳ್ಳುತ್ತಾನೆ. ಆ ಅವಕಾಶವೇ ಅವನ ಬದುಕನ್ನು ನಿರ್ಧರಿಸುತ್ತದೆ, ಜೀವನಾನುಭವ ಕಲಿಸುತ್ತದೆ ಮತ್ತು ಇತರೆ ಮೂರ್ಖರೊಂದಿಗೆ ಬಾಂದವ್ಯಗಳನ್ನು ಬೆಸೆಯುತ್ತದೆ. ಹೀಗಾಗಿ ಮೂರ್ಖ ಸದಾ ಸುಖಿ.
Saakshatv Oshoyisam episode 1
ಓಶೋ ಸದಾ ಒಂದು ಸಲಹೆ ನೀಡುತ್ತಾರೆ, ಬದುಕಿನಲ್ಲಿ ಎಲ್ಲವೂ ಕಳೆದುಹೋಯಿತಾ? ಹೋಗಲಿ ಬಿಡಿ. ಆದರೂ ಒಂದಷ್ಟು ಉಳಿಯುತ್ತದಲ್ಲ, ಉಳಿದುಕೊಂಡಿರುವುದನ್ನು ನೋಡಿ. ಅದೇ ನಿಮ್ಮ ಪಾಲಿನ ನಿಜವಾದ ನಿಧಿ. ಕಳೆದು ಹೋದ ಸಂಗತಿ, ವಸ್ತು ಅಥವಾ ಭಾವಗಳನ್ನು ನೆನದು ಕೊರಗುವುದರಿಂದ ಉಳಿದ ಅಸ್ಥಿತ್ವವನ್ನೂ ನೀವು ಕಳೆದುಕೊಳ್ಳುತ್ತೀರಿ. ಜೀವನ ಸಮೃದ್ಧ ಅಭಯಾರಣ್ಯ. ಇಲ್ಲಿ ಕಳೆದು ಹೋಗಿದ್ದು ಮತ್ತೆ ಇಲ್ಲಿಯೇ ಸಿಗುತ್ತದೆ. ಇಲ್ಲಿ ಎಲ್ಲವೂ ವಿಫುಲವಾಗಿದೆ, ಇರುವ ಉಳಿದ ಅಸ್ಥಿತ್ವವನ್ನು ಜೋಪಾನ ಮಾಡಿಕೊಳ್ಳಿ. ನಿಮ್ಮ ಭವಿಷ್ಯಕ್ಕೆ ಅದೇ ಕೀಲಿಕೈ. ಶೂನ್ಯ ಎನ್ನುವ ಅಸ್ಥಿತ್ವ ಇರುವುದೇ ಇಲ್ಲ. ಹತ್ತರ ಬದಲು ಒಂದು ಉಳಿದಿರುತ್ತದೆ, ಅದು ಶೂನ್ಯವಾಗಿರುವುದಿಲ್ಲ. ಆ ಒಂದನ್ನು ಮತ್ತೆ ಹತ್ತು ಮಾಡುವ ಅವಕಾಶವನ್ನು ಬದುಕು ಕೊಡುತ್ತದೆ. ಕಳೆದು ಹೋದ ಹತ್ತನ್ನು ನೆನಪಿಸಿ ಕೊರಗುತ್ತಾ ಇರುವ ಒಂದನ್ನೂ ಕಳೆದುಕೊಳ್ಳುವುದು ಮೂರ್ಖರ ಕೆಲಸವಲ್ಲ ಅದು ಬುದ್ದಿವಂತರ ಕೆಲಸ. ಅದು ನಿಜವಾದ ಹತಾಶೆ, ಆಗ ಬುದ್ದಿವಂತ ಖಿನ್ನತೆಗೆ ಜಾರುತ್ತಾನೆ. ಆದರೆ ಕಳೆದುಕೊಳ್ಳಲು ಏನೂ ಇಲ್ಲದ ಮೂರ್ಖನಿಗೆ ಇದೊಂದು ಸೋಲು ಮಾತ್ರ. ಮತ್ತೆ ಗೆಲ್ಲಲು ಹೊಸ ಪ್ರಯೋಗದೊಂದಿಗೆ ಅವನು ಸಿದ್ಧನಾಗುತ್ತಾನೆ. “ನಾನೂ ಒಬ್ಬ ಮೂರ್ಖನೇ ಹಾಗಾಗಿಯೇ ಮೂರ್ಖರನ್ನು ಪ್ರೀತಿಸಿದಷ್ಟು ಪಂಡಿತರನ್ನು ಪ್ರೀತಿಸಲಾರೆ” ಎನ್ನುತ್ತಿದ್ದರು ಓಶೋ.

-ವಿಶ್ವಾಸ್‌ ಭಾರದ್ವಾಜ್‌

#Oshoyisam #ಓಶೋ #ವಿಭಾ

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd