ಮುಕ್ತ ಮೈಥುನದಿಂದ ಸಮಾಧಿ ಸ್ಥಿತಿ; ನಿಗ್ರಹ, ನಿಯಂತ್ರಣಗಳಿಲ್ಲದ ಮುಕ್ತ ಧ್ಯಾನ ಸರ್ವಶ್ರೇಷ್ಠ: “ಜಗತ್ತೇ ಸೆಕ್ಸ್‌ ಗುರು ಎಂದು ಕರೆದ ಓಶೋ ಸಮರ್ಥಿಸಿದ್ದು, ಲೈಂಗಿಕ ಬದುಕಿನ ಮಾಧ್ಯಮದ ಮೂಲಕ ಅಲೌಕಿಕ ಧ್ಯಾನದ ಪರಾಕಷ್ಠೆಯ ತೃಪ್ತಿ”

1 min read
Saakshatv Oshoyisam episode 1

ಮುಕ್ತ ಮೈಥುನದಿಂದ ಸಮಾಧಿ ಸ್ಥಿತಿ; ನಿಗ್ರಹ, ನಿಯಂತ್ರಣಗಳಿಲ್ಲದ ಮುಕ್ತ ಧ್ಯಾನ ಸರ್ವಶ್ರೇಷ್ಠ:
“ಜಗತ್ತೇ ಸೆಕ್ಸ್‌ ಗುರು ಎಂದು ಕರೆದ ಓಶೋ ಸಮರ್ಥಿಸಿದ್ದು, ಲೈಂಗಿಕ ಬದುಕಿನ ಮಾಧ್ಯಮದ ಮೂಲಕ ಅಲೌಕಿಕ ಧ್ಯಾನದ ಪರಾಕಷ್ಠೆಯ ತೃಪ್ತಿ”
Saakshatv Oshoyisam episode 8

ಸೆಕ್ಸ್‌ ಅನ್ನು ರಾ ಎನರ್ಜಿ ಅಥವಾ ಕಚ್ಛಾ ಶಕ್ತಿ ಎಂದವರು ಓಶೋ. ಪ್ರೀತಿಯ ಕುರಿತಾಗಿ ಯಾರೂ ತಕರಾರು ತೆಗೆಯದಷ್ಟು ಅದ್ಭುತವಾದ ವ್ಯಾಖ್ಯಾನ ಮಾಡಿದ ಓಶೋ “ಪ್ರೀತಿ ಅಪಾಯಕಾರಿಯೇ ಹೊರತು ಸೆಕ್ಸ್ ಅಲ್ಲ” ಎನ್ನುವ ಮೂಲಕ ತಮ್ಮ ಅಭಿಮಾನಿಗಳು, ಅನುಯಾಯಿಗಳಲ್ಲಿ ಗೊಂದಲ ಹುಟ್ಟಿಸಿದ್ದರು. ಓಶೋರ ಪರಿಕಲ್ಪನೆಗಳು ಮತ್ತು ಚಿಂತನೆಗಳು ಆಗಾಗ್ಗೆ ಬದಲಾಗುತ್ತಿತ್ತು. ಹಾಗಾಗಿಯೇ ಓಶೋರನ್ನು ಪೂರ್ಣವಾಗಿ ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅವರನ್ನು ಮಡಿವಂತ ಜಗತ್ತು ಪೊಲಿ ಗುರು, ಸೆಕ್ಸ್‌ ಗುರು ಅಂದಾಗಲೂ ಅವರು ತಲೆ ಕಡೆಸಿಕೊಳ್ಳಲಿಲ್ಲ. ಕಾರಣ ಮುಕ್ತ ಮೈಥುನವೆಂಬುದು ಕೇವಲ ಸುಖಪ್ರಾಪ್ತಿಗೆ ಮಾತ್ರವಲ್ಲ, ಅದೊಂದು ಧ್ಯಾನಸ್ಥ ಸ್ಥಿತಿ, ಅದೊಂದು ಯೋಗ ಸಮಾಧಿ ಅನ್ನುವ ಭಿನ್ನ ಅಲೋಚನೆ ಓಶೋರದ್ದಾಗಿತ್ತು. Saakshatv Oshoyisam episode 8
Saakshatv Oshoyisam episode 7

ಸಂಭೋಗವನ್ನು ಯೋಗವನ್ನಾಗಿ, ಧ್ಯಾನವನ್ನಾಗಿ ಪರಿವರ್ತಿಸಬೇಕು. ಈ ಪರಿವರ್ತನೆಯಲ್ಲಿ ಅತೀಂದ್ರಿಯ ಆಯಾಮವಿರುತ್ತದೆ. ಸಂಭೋಗದ ಇಚ್ಛೆಯನ್ನು ನಮ್ಮ ಧರ್ಮಗಳು ನಿಗ್ರಹಿಸುತ್ತ ಬಂದಿವೆ. ಹೀಗೆ ನಿಗ್ರಹಿಸುವುದರಿಂದ ಸಹಜ ಫಲಿತಾಂಶ ವಿಕೃತಿಯನ್ನು ಸೃಷ್ಟಿಸುತ್ತದೆ. ತನ್ನ ಲೈಂಗಿಕ ಬಯಕೆಗಳನ್ನು ಅದುಮಿಡುವ ಮನುಷ್ಯ ವಿಪರೀತ ಕಾಮಮೋಹಿಯಾಗುತ್ತಾನೆ, ಅವನಿಗೆ ಸೆಕ್ಸ್‌ ಗೀಳು ಹತ್ತುತ್ತದೆ ಅನ್ನುತ್ತಿದ್ದರು ಓಶೋ. ನನ್ನನ್ನು ʻಸೆಕ್ಸ್ ಗುರುʼ ಎನ್ನುವ ಜನರೇ ಹೀಗೆ ಲೈಂಗಿಕತೆಯ ಗೀಳು ಹೊಂದಿರುವವರು. ನಾನು ಧ್ಯಾನ, ಪ್ರೀತಿ, ದೇವರು, ಪ್ರಾರ್ಥನೆ ಬಗ್ಗೆ ಮಾತನಾಡಿದ್ದಕ್ಕಿಂತ ಹೆಚ್ಚಿನದಾಗಿ ಲೈಂಗಿಕತೆಯ ಬಗ್ಗೆ ಮಾತನಾಡಿಲ್ಲ. ಆದರೆ ದೇವರು, ಪ್ರೀತಿ, ಧ್ಯಾನ, ಪ್ರಾರ್ಥನೆಯ ವಿಚಾರದಲ್ಲಿ ನಾನು ಕೊಟ್ಟ ಉಪನ್ಯಾಸಗಳ ಬಗ್ಗೆ ಆಸಕ್ತಿ ಹೊಂದದ ಈ ಸೋ ಕಾಲ್ಡ್‌ ಸಾಂಸ್ಕೃತಿಕ, ಶೀಲವಂತ ಜನ, ನಾನು ಮುಕ್ತ ಲೈಂಗಿಕತೆಯ ಬಗ್ಗೆ ಏನನ್ನಾದರೂ ನಾಲ್ಕು ಮಾತಾಡಿದ ತಕ್ಷಣವೇ ಹದ್ದಿನಂತೆ ಮೈ ಮೇಲೆ ಎಗರುತ್ತಾರೆ. ಇವೆಲ್ಲವೂ ಅವರಲ್ಲಿ ತುಂಬಿಕೊಂಡಿರುವ ವಿಕೃತಿಯ ಲಕ್ಷಣಗಳು ಅನ್ನುತ್ತಿದ್ದರು.

ಓಶೋರವರ ಮುನ್ನೂರಕ್ಕೂ ಹೆಚ್ಚಿನ ಆಧ್ಯಾತ್ಮಿಕ ಪುಸ್ತಕಗಳಲ್ಲಿ ಕೇವಲ ಒಂದು ಪುಸ್ತಕ ಮಾತ್ರ ಮುಕ್ತ ಲೈಂಗಿಕತೆಗೆ ಸಂಬಂಧಿಸಿದೆ. ಅದು ಕೂಡ ಸಂಪೂರ್ಣವಾಗಿ ಅಲ್ಲ. ಆ ಪುಸ್ತಕದ ಹೆಸರು ʻಸೆಕ್ಸ್‌ನಿಂದ ಸೂಪರ್‌ಪ್ರಜ್ಞೆʼ. ಅದರ ಆರಂಭ ಮಾತ್ರ ಲೈಂಗಿಕತೆಯಿಂದ ಶುರುವಾಗುತ್ತದೆ; ನೀವು ಅದರ ಹಿಂದಿನ ತಾತ್ಪರ್ಯವನ್ನು ಅರ್ಥಮಾಡಿಕೊಳ್ಳುತ್ತಾ ಆಳವಾಗಿ ಹೋದಂತೆ, ಅದು ಅತಿಪ್ರಜ್ಞೆಯ ಕಡೆಗೆ, ಸಮಾಧಿಯ ಕಡೆಗೆ ಚಲಿಸುತ್ತದೆ. ಆದರೆ ವಿಚಿತ್ರವೆಂದರೆ ಓಶೋರವರ ಉಳಿದೆಲ್ಲಾ ಪುಸ್ತಕಗಳಿಗಿಂತ ಹೆಚ್ಚು ಮಾರಾಟವಾಗಿರುವುದೇ ಈ ಪುಸ್ತಕ. ಈ ಪುಸ್ತಕ ಲಕ್ಷಾಂತರ ಜನರನ್ನು ತಲುಪಿದೆ. ಇನ್ನೊಂದರ್ಥದಲ್ಲಿ ಹೇಳಬೇಕೆಂದರೆ ಅವರ ಮೈಥುನಕ್ಕೆ ಸಂಬಂಧಪಟ್ಟ ಈ ಪುಸ್ತಕವನ್ನು ಓದದ ಒಬ್ಬನೇ ಒಬ್ಬ ಹಿಂದೂ, ಜೈನ ಸಂತ, ಇತರೆ ಧರ್ಮಗಳ ಧರ್ಮಗುರುಗಳು, ಮಹಾತ್ಮರು ಭಾರತದಲ್ಲಿಲ್ಲ. ಇದನ್ನು ಎಲ್ಲ ಭಾಷೆಗಳಲ್ಲಿ ಎಲ್ಲಾ ರೀತಿಯಲ್ಲೂ ಟೀಕಿಸಲಾಗಿದೆ, ವಿಶ್ಲೇಷಿಸಲಾಗಿದೆ, ಖಂಡಿಸಲಾಗಿದೆ. ಅದರ ವಿರುದ್ಧವೂ ಅನೇಕ ಪುಸ್ತಕಗಳು ಬರೆಯಲಾಗಿದೆ. ವಿಪರ್ಯಾಸವೆಂದರೆ ಆ ಪುಸ್ತಕದ ಅಸಲು ವಸ್ತುವೇನು ಅನ್ನುವುದನ್ನು ಬಿಟ್ಟು ಕೇವಲ ಮೈಥುನದ ವಿಷಯದಲ್ಲಿ ಮಾತ್ರ ವಿಶ್ಲೇಷಣೆ, ವಿಮರ್ಶೆ ನಡೆದಿದೆ. ಭಾರತದ ಅನೇಕ ಧಾರ್ಮಿಕ ಗುರುಗಳು ಕೇವಲ ಇದೊಂದು ಪುಸ್ತಕದ ಆಧಾರದಲ್ಲಿ ಓಶೋರನ್ನು ʻಸೆಕ್ಸ್ ಗುರು’ ಎಂದು ಲೇಬಲ್‌ ಮಾಡಿಬಿಟ್ಟರು. ಓಶೋ ಹೇಳುವ ಪ್ರಕಾರ ಅವರೆಲ್ಲರೂ ಸೆಕ್ಸ್‌ ಗೀಳಿನಲ್ಲಿ ಬಳಲುತ್ತಿದ್ದರು. ಹೀಗೆ ನಿರ್ಭೀಡೆಯಿಂದ ತಮಗನ್ನಿಸಿದನ್ನು ಹೇಳಿದವರು, ಬರೆದವರು, ಸಮರ್ಥಿಸಿದವರು, ತಾನೆ ಹುಟ್ಟುಹಾಕಿದ ವಿವಾದವನ್ನು ಅರಗಿಸಿಕೊಂಡವರು ಓಶೋ.

ಸ್ವಚ್ಛಂದ ಲೈಂಗಿಕತೆಯಿಂದ ಅಲೌಕಿಕ ಧ್ಯಾನ ಸಾಧ್ಯ ಎಂದು ಬಗೆದವರು ಓಶೋ. ಸಂಭೋಗದಿಂದ ಸಮಾಧಿ ಸ್ಥಿತಿಯ ಕುರಿತು ಅವರ ಕಲ್ಪನೆಯನ್ನು ಪ್ರಯೋಗ ಮಾಡಿದವರು ಯಾರಾದರೂ ಇದ್ದರೆ ಖಂಡಿತಾ ಓಶೋರ ವಾದವನ್ನು ತಳ್ಳಿಹಾಕುವುದಿಲ್ಲ. ಈ ಸಂದರ್ಭದಲ್ಲಿ ಲೈಂಗಿಕತೆಯ ಆಸೆ ಕ್ರಮೇಣ ಕಡಿಮೆ ಪರಿಣಾಮವನ್ನು ಬೀರುತ್ತದೆ. ಅದರಿಂದ ಧ್ಯಾನ ಸಿದ್ಧಿಸುತ್ತದೆ. ಹೀಗೆ ಹುಟ್ಟುವ, ಬೆಳೆಯುವ ಧ್ಯಾನದಿಂದ ಹೊಸ ಬಾಗಿಲು ತೆರೆಯುತ್ತದೆ ಮತ್ತು ಕ್ರಮೇಣ ಲೈಂಗಿಕತೆಯ ಪ್ರಜ್ಞೆ ಮಸುಕಾಗುತ್ತದೆ ಎನ್ನುವುದು ಓಶೋರ ವಾದವಾಗಿತ್ತು. ಇಲ್ಲಿ ಲೈಂಗಿಕತೆಯಲ್ಲ ಧ್ಯಾನಸ್ಥ ಸ್ಥಿತಿ ಮಾತ್ರ ಉತ್ಕೃಷ್ಟ. ಇಲ್ಲಿ ಮೈಥುನವೆಂಬುದು ಮರದಿಂದ ಒಣ ಎಲೆಗಳು ಉದುರಿ ಬೀಳುವ ಪ್ರಕ್ರಿಯೆಯಂತೆ. ಎಲೆಗಳು ಉದುರುವುದನ್ನು ಮರವು ಎಂದಿಗೂ ಅರಿಯುವುದಿಲ್ಲ. ಹಾಗೆಯೇ ಲೈಂಗಿಕತೆಯಿಂದ ಯಾಂತ್ರಿಕ ಬಯಕೆ ಮಾಸುತ್ತದೆ, ಮತ್ತದು ನಿಮ್ಮ ಗಮನಕ್ಕೆ ಬಾರದೆ ನಡೆಯುತ್ತದೆ ಎನ್ನುತ್ತಿದ್ದರು ಅವರು.

ಲೈಂಗಿಕತೆಯನ್ನು ಧ್ಯಾನದ ಮಾಧ್ಯಮ ಮಾಡಿಕೊಳ್ಳಿ; ಲೈಂಗಿಕತೆಯನ್ನು ಧ್ಯಾನದ ವಸ್ತುವನ್ನಾಗಿಸಿ. ಸಂಭೋಗದ ಸ್ಥಿತಿಯನ್ನು ಪವಿತ್ರ ದೇವಸ್ಥಾನವೆಂದಾಗಿ ಪರಿಗಣಿಸಿ. ನೀವು ಕೇವಲ ಆ ಬಾಹ್ಯ ಲೌಕಿಕದ ಇಚ್ಛೆಯನ್ನು ಮೀರಿ ಪರಿವರ್ತನೆಗೊಳ್ಳುತ್ತೀರಿ. ಆ ಬಳಿಕ ಅಲ್ಲಿ ಲೈಂಗಿಕತೆ ಇರುವುದಿಲ್ಲ, ಯಾವುದೇ ನಿಗ್ರಹ, ಯಾವುದೇ ಉತ್ಕೃಷ್ಟತೆ ಇರುವುದಿಲ್ಲ. ನಿಮ್ಮ ಗಮನಕ್ಕೆ ಬಾರದೆಯೇ ಸೆಕ್ಸ್ ಕೇವಲವೆನಿಸುತ್ತದೆ. ಅಪ್ರಸ್ತುತ, ಅರ್ಥಹೀನ ಕ್ರಿಯೆಯಾಗುತ್ತದೆ. ನೀವು ಅದನ್ನು ಮೀರಿ ಬೆಳೆದಿರುತ್ತೀರಿ. ನೀವು ತಲುಪಬೇಕಾದ ಗಮ್ಯವನ್ನು ತಲುಪುವ ಏಕಾಗ್ರತೆ ಮೈಥುನದಿಂದ ಸಿದ್ಧಿಸುತ್ತದೆ. ಓಶೋ ಇದಕ್ಕೊಂದು ಉದಾಹರಣೆ ಕೊಡುತ್ತಾರೆ, ಸೆಕ್ಸ್‌ ಅಥವಾ ಸಂಭೋಗ ಕ್ರಿಯೆಯನ್ನು ಬೆಳೆಯುತ್ತಿರುವ ಮಗುವಿನ ಆಟಕ್ಕೆ ಹೋಲಿಸುತ್ತಾರೆ. ಆಟವಾಡುವ ಮಗುವಿಗೆ ಆಟ ಮಾತ್ರ ಮುಖ್ಯವೇ ಹೊರತು ಆಟಿಕೆಗಳಲ್ಲ. ಸಂಭೋಗದ ಮಾಧ್ಯಮಗಳು ಆಟಿಕೆಗಳಿದ್ದಂತೆ, ಮಗು ಏನನ್ನೂ ನಿಗ್ರಹಿಸಿಕೊಳ್ಳುವುದಿಲ್ಲವಲ್ಲ, ಹಾಗೆಯೇ ಸಂಭೋಗವನ್ನೂ ನಿಯಂತ್ರಿಸಬಾರದು. ಲೌಕಿಕ ಬದುಕಿನಲ್ಲಿ ಅಲೌಕಿಕ ತೃಪ್ತಿ ಧ್ಯಾನ, ಯೋಗ ಮತ್ತು ಸಮಾಧಿ ಸ್ಥಿತಿಗಳಿಗೆ ಇದೂ ಒಂದು ವೇದಿಕೆ ಮತ್ತು ಇದು ಪ್ರಭಾವಶಾಲಿ ವೇದಿಕೆ ಅನ್ನುತ್ತಿದ್ದರು ಅವರು. Saakshatv Oshoyisam episode 8

ಹೆಚ್ಚು ಧ್ಯಾನ ಮಾಡಬೇಕು ಎಂದರೆ ಹೆಚ್ಚು ಸಂಭೋಗ ಮಾಡುವುದು ಅನ್ನುವುದು ಅರ್ಥವಲ್ಲ. ನಿಮ್ಮ ಒಂದು ಮೈಥುನ ಕ್ರಿಯೆಯಲ್ಲಿ ಏಕಾಗ್ರತೆ ಸಿದ್ಧಿಸಬೇಕು. ಸ್ವಯಂಪ್ರೇರಿತವಾಗಿ ಲೈಂಗಿಕತೆಯನ್ನು ಧ್ಯಾನದ ಕಲೆಯನ್ನಾಗಿಸಿ, ಪ್ರಜ್ಞಾಪೂರ್ವಕವಾಗಿ ತನ್ಮಯತೆ ಸಾಧಿಸಲು ಪ್ರಯತ್ನಿಸಿ ಶಕ್ತಿ ಪ್ರವಹಿಸಲು ಹೊಸ ಮೂಲ ಸೃಷ್ಟಿಯಾಗುತ್ತದೆ. ಲೈಂಗಿಕತೆಯು ನಿಮಗೆ ಆಕರ್ಷಣೆಯನ್ನು ನೀಡುತ್ತದೆಯಲ್ಲ, ಅದು ನಂತರ ಧ್ಯಾನದ ಆಕರ್ಷಣೆಯತ್ತ ಪಲ್ಲಟವಾಗುತ್ತದೆ. ಮೊದಲು ಮೈಥುನದೆಡೆಗೆ ಹರಿವ ಶಕ್ತಿ, ನಂತರ ಧ್ಯಾನದೆಡೆಗೆ ಹರಿಯುತ್ತದೆ. ಹೀಗೆ ಧ್ಯಾನ ಸಮಾಧಿ ಸಾಧ್ಯವಾದಾಗ, ದೈವಿಕ ಸ್ಥಿತಿಯ ಬಾಗಿಲು ತೆರೆಯುತ್ತದೆ. ಇದೇ ಓಶೋರ ಸಂಭೋಗದಿಂದ ಸಮಾಧಿ ವಸ್ತುವಿನ ದೈವದತ್ತ ಹೆಜ್ಜೆಗಳು.

ಓಶೋ ತಮ್ಮ ಕೆಲವು ಪ್ರವಚನಗಳಲ್ಲಿ ಲೈಂಗಿಕತೆಯನ್ನು ಹೇಗೆ ಉತ್ಕೃಷ್ಟಗೊಳಿಸಬಹುದು ಮತ್ತು ಆಧ್ಯಾತ್ಮಿಕಗೊಳಿಸಬಹುದು ಎನ್ನುವ ಸರಳ ಸೂತ್ರಗಳನ್ನು ಹೇಳಳಿಕೊಡುತ್ತಿದ್ದರು. ಮುಕ್ತ ಮೈಥುನ ಹೊಂದಲು ಮೊದಲು ಪ್ರೀತಿಸಿ, ನಂತರ ದೈಹಿಕವಾಗಿ ಬೆರೆಯಿರಿ, ಅಸಹ್ಯಗಳನ್ನು ಮೀರಿ ಮಿಲನ ಹೊಂದಿರಿ. ಈ ಕ್ರಿಯೆಯಲ್ಲಿ ನೀವು ತಾದಾತ್ಮ್ಯತೆ ಸಾಧಿಸಿದಾಗ ಗಮನವನ್ನು ಧ್ಯಾನದ ಕಡೆಗೆ ಹೊರಳಿಸಿ. ಆಗ ಸಿದ್ಧಿಸುವ ಏಕಾಗ್ರತೆ ಮತ್ತು ಏಕತಾನತೆಯಿಂದ ನೀವು ಸುಲಭವಾಗಿ ಸಮಾಧಿ ಸ್ಥಿತಿಯ ಕಡೆಗೆ ಹೊರಳಬಹುದು. ಅದು ಉನ್ನತ ಮಟ್ಟದ ಪ್ರಜ್ಞೆಯ ಹರಿವು. ಅದು ಪ್ರಕೃತಿಯ ಸಹಜ ಕ್ರಿಯೆ, ಆ ಹಂತವನ್ನು ಅಸಹ್ಯಪಟ್ಟುಕೊಳ್ಳದೇ ತಲುಪಿಕೊಂಡರೆ ಧ್ಯಾನ ಸುಲಭ ಎನ್ನುತ್ತಿದ್ದರು ಓಶೋ.
Saakshatv Oshoyisam episode 2
ಓಶೋರ ಇನ್ನೊಂದು ವಿಭಿನ್ನ ಚಿಂತನೆಯೆಂದರೆ ಪ್ರೀತಿ ಎನ್ನುವುದು ಸೆಕ್ಸ್‌ ಅಥವಾ ಮೈಥುನದ ಮುನ್ನುಡಿ. ಪ್ರೀತಿ ಲೈಂಗಿಕತೆಯ ಕ್ರಿಯೆಗೆ ನೆಲವನ್ನು ಸಿದ್ಧಪಡಿಸುತ್ತದೆ. ಸೆಕ್ಸ್‌ ಮತ್ತು ಪ್ರೀತಿಗಳನ್ನು ಬೇರೆ ಬೇರೆಯಾಗಿ ನೋಡಿದಾಗ ಮುಕ್ತ ಮೈಥುನ ಸಾಧ್ಯವಿಲ್ಲ. ಪ್ರೀತಿ ಅನ್ನುವುದು ನಂತರದ ಸಂಭವನೀಯ ಸಂಭೋಗ ಕ್ರಿಯೆಯ ಮುನ್ನುಡಿ ಅಥವಾ ಪೀಠಿಕೆ. ಮೈಥುನದ ಪರಾಕಾಷ್ಠೆಯಲ್ಲೇ ಸಮಾಧಿ ಸ್ಥಿತಿಯಿದೆ. ಹಾಗಂತ ವೀರ್ಯ ಸ್ಖಲನ ಪರಾಕಾಷ್ಠೆಯಲ್ಲ, ಅದೊಂದು ಸಹಜ ಪ್ರಕೃತಿಯ ನಡವಳಿಕೆ ಮಾತ್ರ. ಮಕ್ಕಳಿಗೆ ಜನ್ಮ ನೀಡುವುದು ಪರಾಕಾಷ್ಠೆಯಲ್ಲ, ಅದು ಒಂದು ಪರಿಣಾಮ ಮಾತ್ರ. ಒಟ್ಟು ದೇಹದ ಒಳಗೊಳ್ಳುವಿಕೆ: ಮನಸ್ಸು, ದೇಹ, ಆತ್ಮಗಳ ಸಮ್ಮಿಲನ ನಿಜವಾದ ಪರಾಕಾಷ್ಠೆ ಅನ್ನುವುದು ಓಶೋ ಸಮರ್ಥಿಸುತ್ತಿದ್ದ ವಾದ.

ಇಷ್ಟನ್ನೂ ಹೇಳುವ ಓಶೋ, ತಾವು ಪ್ರೀತಿಗೂ ವಿರೋಧಿಯಲ್ಲ, ಮುಕ್ತ ಲೈಂಗಿಕತೆಯ ವಿರೋಧಿಯೂ ಅಲ್ಲ. ಹೀಗಾಗಿಯೇ ನಾನು ಧ್ಯಾನದ ಕುರಿತಾಗಿ ಉನ್ನತ ಆಯಾಮದಲ್ಲಿ ಮಾತಾಡಲು ಸಾಧ್ಯವಿದೆ. ಪ್ರೀತಿ, ಸಂಭೋಗಗಳಿಗಿಂತ ದೊಡ್ಡ ಆನಂದ ನನಗೆ ಧ್ಯಾನದಲ್ಲಿ ಸಿಗುತ್ತದೆ. ನೀವು ಆ ಆನಂದವನ್ನು ಅನುಭವಿಸಬೇಕಿದ್ದರೆ ಮೊದಲು ಅದರ ಹಿಂದಿನ ಪ್ರೀತಿ ಮತ್ತು ಮೈಥುನವನ್ನು ದಾಟಿ ಬರಬೇಕು. ನಿಗ್ರಹ, ನಿಯಂತ್ರಣಗಳಿಲ್ಲದ ಮುಕ್ತ ಧ್ಯಾನ ಸರ್ವಶ್ರೇಷ್ಠ. ನಿಮ್ಮ ಲೈಂಗಿಕ ಜೀವನದಲ್ಲಿ ನೀವು ಧ್ಯಾನಸ್ಥರಾಗಲು ಸಾಧ್ಯವಾದರೆ ನೀವು ಅಲೌಕಿಕ ಆನಂದ ನೀಡುವ ಉನ್ನತ ಮಟ್ಟದ ಸಮಾಧಿ ಸ್ಥಿತಿ ತಲುಪಲು ಸಾಧ್ಯವಿದೆ ಅನ್ನುವುದು ಓಶೋರ ನಿಲುವಾಗಿತ್ತು.

-ವಿಶ್ವಾಸ್ ಭಾರದ್ವಾಜ್‌

#Oshoyisam #ಓಶೋ #ವಿಭಾ

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd