ಸೈಕಲ್…….
ಬಾಲ್ಯದ ಡ್ರೀಮ್.. ಕನಸು.. ಸಪನಾ….
ನಾವು ಸಣ್ಣವರಿರೋವಾಗ ಬೈಸಿಕಲ್ ಬಿಡೋಕೆ ಬರೋನು ಒಂಥರಾ ಸ್ಕೂಲನಲ್ಲಿ ಯುವರಾಜ ಥರಾ ಆದ್ರೆ ಡಬಲ್ ರೈಡ್ ಮಾಡೋನು ಮಹಾರಾಜಾ ಹಾಗೇ! ಸೈಕಲ್ ಬಿಡುವವನನ್ನು ನೋಡೋವಾಗ ಹೊಟ್ಟೇಲಿ ಇಲಿ ಬಿಟ್ಟಹಾಗೆ, ನಾವ್ಯಾವಾಗ ಇವನ ಹಾಗೆ ಸೈಕಲ್ ಕಲಿಯೋದು, ಒಂದು ಕೈಯಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ಶೋ ಆಫ್ ಲುಕ್ ಕೊಡೋದು ಅಂತ. ಮುದ್ರಾಡಿ ಶಾಲೆ, ಪಕ್ಕದ ಮೈದಾನ ಮತ್ತು ಹಳೇಬೀಡು ಮೈದಾನ ಬೈಸಿಕಲ್ ಕಲಿಯೋರ ಫ್ಯಾವರಿಟ್ ಸ್ಪಾಟ್ ಆಗಿತ್ತು. ಹೌದು ಸೈಕಲ್ ನಮ್ಮ ಬಾಲ್ಯದ ಗೆಳೆಯ. ಅದರ ಹಿಂದೆ ಸಿಹಿಯಾದ ಬಾಲ್ಯದ ನೆನಪು ಇದೆ. ಅದನ್ನು ಓಡಿಸುವುದೊಂದು ಪ್ರತಿಷ್ಠೆ. ವಾಲ್ ಪೇಡಲ್ ಮಾಡಿಕೊಂಡು ನಮಗೆ ಸೈಕಲ್ ಓಡಿಸುವುದನ್ನು ಹೇಳಿಕೊಟ್ಟದ್ದು ನಮ್ಮ ಸ್ಕೂಲ್ ಸೀನಿಯರ್ಸ್!
ಅಂದು ನಮಗಿದ್ದದ್ದು ಮುದ್ರಾಡಿಯ ಪ್ರೈಮರಿ ಶಾಲಾ ಮೈದಾನ ಎಂಬ ಇಂಟರ್ನ್ಯಾಷನಲ್ ಸ್ಟೇಡಿಯಂ! ಅದಕ್ಕೆ ಆಗ ಕಂಪೌಂಡ್ ಇರಲಿಲ್ಲ. ಅಲ್ಲಿ ಸೈಕಲ್ ಓಡಿಸುವ ಸಂಭ್ರಮವೇ ಬೇರೆ ಮತ್ತು ಪ್ರತಿಷ್ಠೆ ವಿಷಯ ಕೂಡಾ! ಮೊದಲು ದೂಡಿಕೊಂಡು , ಹಿಂದೊಬ್ಬ ಆಧಾರವಾಗಿ ಹಿಡಿದುಕೊಂಡು ನಡೆಯುತ್ತಾ, ಕಾಲಿನಿಂದ ವಾಲ್ ಪೆಡಲ್ ತುಳಿಯುತ್ತಾ ಮುಂದೆ ಸಾಗುತ್ತಿದ್ದಂತೆಯೇ ಅಸಾಧ್ಯವಾದದ್ದನ್ನು ಸಾಧಿಸಿದೆವೇನೋ ಎಂಬ ಪ್ರತಿಷ್ಠೆಯ ಸಂಭ್ರಮ. ಆಗಿನ ಕಾಲಕ್ಕೆ ಸೈಕಲ್ ಕೂಡಾ ನಮ್ಮ ಪಾಲಿಗೆ ಪ್ರತಿಷ್ಠೆಯ ವಿಷಯ ಆಗಿತ್ತು. ಸೈಕಲ್ ವೇಗ ಹೆಚ್ಚಿಸಿ ಅಲ್ಲಲ್ಲಿ ಪಲ್ಟಿ ಹೊಡೆದು ಬಿದ್ದು ಉಳಿದೋರ ಎದ್ರು ಮುಜುಗರ ಅನುಭವಿಸಿದ್ದು ಒಂದು ಹಳೇ ನೆನಪು ಆಮೇಲೆ ಮತ್ತೆ ಸಾವರಿಸಿಕೊಂಡು ಎದ್ದು ಮತ್ತಷ್ಟು ವೇಗವಾಗಿ ಓಡಿಸಿ ಹೀರೋ ಫೋಸ್ ನೀಡಿ ಮಜಾ ತಗೋತಾ ಇದ್ವಿ. ಬಲ್ಲಾಡಿ, ಉಪ್ಪಳ, ಜರುವತ್ತು, ಬಚ್ಚಪ್ಪು ಹೀಗೇ ಬೇರೆ ಬೇರೆ ಏರಿಯಾ ಸುತ್ತಾಡ್ತಾ ಇದ್ವಿ. ಸ್ಕೂಲಗೇ ಸೈಕಲನಲ್ಲಿ ಬರೋದು ಅಂದ್ರೆ ಅವನ/ಅವಳ ಮನೆ ಸ್ಥಿತಿವಂತರದ್ದು ಅಂತ ಅರ್ಥ ಆ ಕಾಲದಲ್ಲಿ.
ಮುದ್ರಾಡಿಯಲ್ಲಿ ಸೈಕಲ್ ಬಾಡಿಗೆ ಕೊಡ್ತಾ ಇದ್ದ ಅಂಗಡಿ ಅಂದ್ರೆ ಮಂಜುನಾತೆರ್ನ ಸೈಕಲ್ ಶಾಪ್!ಪ್ರಸ್ತುತ ಮುದ್ರಾಡಿಯ ಎಲ್ಲಾ ವಯಸ್ಸಿನ ಯುವಕರು, ಮಧ್ಯವಯಸ್ಕರು ಮತ್ತು ಹಿರಿಯರು ಬೈಸಿಕಲ್ ಬಿಡಲು ಕಲಿತ್ತಿದಿದ್ರೆ ಅದು ಕಾಮತ್ ಸೈಕಲ್ ಶಾಪನ ಬೈಸಿಕಲ್ ನಿಂದಾಗಿ. ಬಸ್ ಇಲ್ಲದೆ ಪಕ್ಕದ ಊರಿಗೆ ಹೋಗ್ಬೇಕಾದ್ರೆ ಕಾಮತರ ಸೈಕಲ್, ಅರ್ಜೆಂಟಗೆ ಮನೆಗೆ ಸಾಮಾನು ತಗೊಂಡು ಹೋಗಬೇಕಾದ್ರೆ ಕಾಮತರ ಸೈಕಲ್, ಜಾತ್ರೆ ಮತ್ತು ವಿಶೇಷ ಕಾರ್ಯಕ್ರಮಗಳಿಗೆ ಹೋಗಬೇಕಾದ್ರೆ ಬಳಕೆ ಆಗ್ತಾ ಇದ್ದದು ಇದೇ ಡೈನಮ್ ಇದ್ದ ಬೈಸಿಕಲ್! MTB ಸೈಕಲ್, ATLAS ಸೈಕಲ್,ಹರ್ಕ್ಯುಲಸ್ ಮತ್ತು ಹೀರೋ ಸೈಕಲ್ಗಳು ಕಾಮತರ ಅಂಗಡಿಯ ಫ್ಯಾವರಿಟ್ ಸೈಕಲ್ ಬ್ರಾಂಡಗಳಾಗಿದ್ದವು. ಈ ಬ್ರಾಂಡ್ಗಳು ನನಗೆ ನಂದೂ ಅಂತ ಒಂದ್ ಸೈಕಲ್ ಬೇಕು ಅಂತ ಅನ್ನಿಸೋ ಹಾಗೆ ಮಾಡ್ಸಿದ್ವು.
ಅರ್ಧ ಗಂಟೆಗೆ ಎಂಟಾಣೆ, ಗಂಟೆಗೆ ಒಂದು ರೂಪಾಯಿ ಚಾರ್ಜ್ ಮಾಡ್ತಾ ಇದ್ರು ನಮ್ಮ ಜಮಾನದಲ್ಲಿ. ಆ ಸಮಯದಲ್ಲಿ ನಮ್ಮ ಎಲ್ಲಾ ಅರ್ಜೆಂಟ್ ಕೆಲಸ ಮಾಡ್ಕೊಬೋದಿತ್ತು. ಒಂದು ಬಾಡಿಗೆಗೆ ಹತ್ತು ಫ್ರೆಂಡ್ಸ್ ಬೇಕಾದ್ರೆ ರೈಡ್ ಮಾಡಬೋದಿತ್ತು. ಆದ್ರೆ ಅರ್ಧ ಗಂಟೆಗೆ 5ನಿಮಿಷ ಜಾಸ್ತಿ ಆದ್ರೆ ಪುನಃ ಎಂಟಾಣೆ ಫಿಕ್ಸು! ಅದ್ರಲ್ಲಿ ಡೈನಮ್ ಕೂಡಾ ಇತ್ತು. ಸಾಯಂಕಾಲ 7ಗಂಟೆ ಮೇಲೆ ಹೆಬ್ರಿ,ವರಂಗ ಕಡೆ ಹೋಗುವವರಿದ್ರೆ ಡೈನಮ್ ಹಾಕಿಕೊಂಡ್ರು ಟ್ರಿಣ್ ಟ್ರಿಣ್ ಬೆಲ್ ಮಾಡಿಕೊಂಡು ಹೋಗ್ತಾ ಇದ್ರು. ಕೆಲವು ಸೈಕಲನಲ್ಲಿ ಡೈನಮ್ ಹಾಳಾಗಿದ್ರೆ ಟಾರ್ಚ್ ಗತಿ ಅಗ್ತಾ ಇತ್ತು! ಸ್ವಂತ ಸೈಕಲ್ ತಗೊಂಡಿದ್ರೆ ಅದಿಕ್ಕೆ ದೇವರ ಸಣ್ಣ ಫೋಟೋ ಫಿಕ್ಸ್ ಮಾಡಿ, ಅದಿಕ್ಕೆ ಮಾಲೆ ಹಾಕಿ ಲೈಟಿಂಗ್ ಕೂಡಾ ಫಿಕ್ಸ್ ಮಾಡ್ತಾ ಇರೋದ್ರಲ್ಲಿ ಬೇರೆ ರೀತಿ ಮಜಾ. ಒಂಥರಾ ವಿಜ್ಞಾನಿ ಸರ್ ಎಂ ವಿಶ್ವೇಶ್ವರಯ್ಯ ಲುಕ್!
ಕಾಮತರ ಸೈಕಲ್ ಅಂಗಡಿ ಎಂಬ ಸೈಕಲ್ ಪ್ರಯೋಗ ಶಾಲೆ ನಮ್ಮ ಬಾಲ್ಯದ ಕುತೂಹಲದ ಕೇಂದ್ರ. ಎಷ್ಟೇ ಹಳೆಯ ಗುಜಿರಿ ಸೈಕಲ್ ಇದ್ದರೂ ಅದನ್ನೂ ಪೂರ್ತಿ ಕಿತ್ತುಹಾಕಿ, ಅದಿಕ್ಕೆ ಸರ್ಜರಿ ಮಾಡಿ, ಆಪರೇಷನ್ ಮಾಡಿ, ರಾಡ್ ಕೊಟ್ಟು ಮೇಲೊಂದು ಬಣ್ಣ ಬಳಿದು ಹೊಚ್ಚ ಹೊಸ ಸೈಕಲ್ ಸಿದ್ಧಪಡಿಸುತ್ತಾ ಇದ್ದರು. ಒಂಥರಾ ಸೈಕಲ್ ಇಂಜಿನಿಯರ್ ಹಾಗೇ! ಅವರ ನಿವೃತ್ತಿ ನಂತರ ಅವರ ಮಗ ಗಣೇಶ್ ಅಣ್ಣ ಹೊಸ ಪೀಳಿಗೆಯ ಇಂಜಿನಿಯರ್ ಆಗಿ ಒಳ್ಳೇ ಸೇವೆ ನೀಡ್ತಾ ಇದ್ರು ಮತ್ತು ಅದ್ರ ಜತೆ ಬೈಕಗೆ ಪಂಕ್ಚರ್ ಹಾಕೋ ಕೆಲಸ ಕೂಡಾ ಮಾಡ್ತಾ ಇದ್ರು.
ಯಡಿಯೂರಪ್ಪ, ಕುಮಾರಸ್ವಾಮಿಗಳು ಮಂತ್ರಿಗಳಾಗಿದ್ದ ಸಮಯದಲ್ಲಿ ಕೊಟ್ಟ ಸೈಕಲ್ಗಳು ಮತ್ತೊಮ್ಮೆ ಬಚ್ ಪನ್ ನೆನಪುಗಳನ್ನು ಮರುಕಳಿಸಿದವು. ಈಗಲೂ ಮನೆಯಲ್ಲಿ ಒಂದು ಕಾರ್ ಮತ್ತು 3ಬೈಕ್ ಇದ್ರೂ ಇದ್ದರೂ ಅಟ್ಲಾಸ್ ಗೋಲ್ಡ್ ಲೈನ್ ಸೂಪರ್ ನಮ್ಮನ್ನು ಕಾಡಿದಷ್ಟು ಇನ್ನುಳಿದವು ಕಾಡಲಾರವು.ಈಗ
ಹಲವರ ಮನೆಯಲ್ಲಿ ಸೈಕಲ್ ಇನ್ನೂ ಇದೆ ಆದರೆ ವಯಸ್ಸು ಮುಪ್ಪಾಗಿದ್ದರಿಂದ ಮೂಳೆ ಸವೆದು, ಸೊಂಟ ಮುರಿದು ಮೂಲೆ ಸೇರಿದೆ. ಮತ್ತೊಮ್ಮೆ ಸೈಕಲ್ ಯುಗ ಮರುಕಳಿಸಲಿ ಮತ್ತು ಮಾಲಿನ್ಯ ಕಡಿಮೆ ಆಗಲಿ ಎಂದು ಬೈಸಿಕಲ್ ಪ್ರಿಯರ ಆಶಯ.
✍️ಪ್ರಶಾಂತ್ ಎಂ.
#Saakshatv #bicycle #childhood