ಹಲವು ವಿಶೇಷತೆಗಳ ಹತ್ತೂರು ಒಡೆಯನ‌ ಪುತ್ತೂರು ಜಾತ್ರೆ

1 min read
Saakshatv special Puttur jatre

ಹಲವು ವಿಶೇಷತೆಗಳ ಹತ್ತೂರು ಒಡೆಯನ‌ ಪುತ್ತೂರು ಜಾತ್ರೆ

ಪುತ್ತೂರು ಸೀಮೆಯ ಒಡೆಯ, ಕಾರಣಿಕ ದೈವ, ಇತಿಹಾಸ ಪ್ರಸಿದ್ಧ ಮಹತೋಬರ್ ಶ್ರೀ ಮಹಾಲಿಂಗೇಶ್ವರನಿಗೆ ಈಗ ಜಾತ್ರೆಯ ಸಂಭ್ರಮ.

Puttur jatre

ಹತ್ತೂರು ಕೊಟ್ಟರೂ ಪುತ್ತೂರು ಕೊಡೆ ಎಂಬ ಮಾತು ಪುತ್ತೂರಿಗೆ ಇರುವ ವಿಶೇಷತೆಯನ್ನು ತೋರಿಸುತ್ತದೆ. ಈ ವಿಶೇಷತೆಗೆ ಕಾರಣ ಇಲ್ಲಿನ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಈ ಕ್ಷೇತ್ರಕ್ಕೆ ತನ್ನದೇ ಆದ ಹಲವಾರು ವೈಶಿಷ್ಟ್ಯಗಳಿವೆ.

ಪುತ್ತೂರು ಮಹಾಲಿಂಗೇಶ್ವರ ಕೇವಲ ಪುತ್ತೂರಿಗೆ ಮಾತ್ರವಲ್ಲ ಹತ್ತೂರಿಗೂ ಒಡೆಯ. ‌ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರು ಸ್ಮಶಾನ ಇರುವ ಮತ್ತೊಂದು ದೇವಾಲಯವೆಂದರೆ ಅದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಪುತ್ತೂರಿನ ಜನರ ದೈನಂದಿನ ದಿನಚರಿ ಮಹಾಲಿಂಗೇಶ್ವರನ ನಾಮ ಸ್ಮರಣೆಯಿಲ್ಲದೆ ಪ್ರಾರಂಭವಾಗುವುದಿಲ್ಲ. ಪುತ್ತೂರಿನ ಜನರು ಜಗತ್ತಿನಲ್ಲಿ ಎಲ್ಲೇ ಇರಲಿ, ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲುತ್ತದೆ.

Saakshatv special Puttur jatre

ಹಿಂದೆ ಪಾರಂಗತರಾದ ಶೈವ ಸಂಪ್ರದಾಯದ ವೃದ್ಧ ವಿಪ್ರಾರೊಬ್ಬರು ಕಾಶೀ ಕ್ಷೇತ್ರದಿಂದ ಶಿವಲಿಂಗವೊಂದನ್ನು ಪಡೆದುಕೊಂಡು ಅದನ್ನು ಅರ್ಚಿಸುತ್ತಾ ದಕ್ಷಿಣಾ ಪಥದಲ್ಲಿ ಸಂಚರಿಸುತ್ತಾ ಮೊದಲು ಭಂಡಾರಿ ಹಿತ್ತಿಲು ಎಂದು ಕರೆಯಲಾಗುತ್ತಿದ್ದ ಪ್ರದೇಶಕ್ಕೆ ಬಂದರಂತೆ. ಆಗ ಮಧ್ಯಾಹ್ನದ ಸಮಯವಾಗಲು, ಭೋಜನಕ್ಕಿಂತ ಮೊದಲು ಶಿವಲಿಂಗಾರ್ಚನೆಯನ್ನು ಸಂಪ್ರದಾಯವನ್ನಾಗಿಟ್ಟುಕೊಂಡಿದ್ದ ಆ ವೃದ್ಧ ವಿಪ್ರರು ತಾನು ಹೊತ್ತು ತಂದ ಸೂರ್ಯಪ್ರಭೆಯಿಂದ ಕಂಗೊಳಿಸುವ ಸುಂದರಾಕೃತಿಯ ಶಿವಲಿಂಗವೊಂದನ್ನು ನೆಲದಲ್ಲಿಟ್ಟು ಪೂಜಿಸಲಾರಂಭಿಸಿದರಂತೆ. ನಂತರ ಮುಂದಿನ ಪ್ರಯಾಣಕ್ಕೆ ಅಣಿಯಾಗಿ ಆ ಲಿಂಗವನ್ನು ಎತ್ತಲು ಪ್ರಯತ್ನಿಸಿದಾಗ ಅದು ಕದಲಲಿಲ್ಲವಂತೆ.
ಆಗ ಅವರು ಅಲ್ಲಿಯ ಬಂಗರಾಜನಿಗೆ ತನ್ನ ಕಷ್ಟವನ್ನು ಹೇಳಿಕೊಳ್ಳಲು, ಅವನ ಸೇವಕರಿಗಾಗಲಿ ಅವನು ಕಳುಹಿಸಿದ ಪಟ್ಟದ ಆನೆಗಾಗಲಿ ಆ ಶಿವಲಿಂಗವನ್ನು ಅಲುಗಾಡಿಸಲಾಗಲಿಲ್ಲವಂತೆ. ಶಿವಲಿಂಗವನ್ನು ಅಲುಗಾಡಿಸಲು ಪ್ರಯತ್ನಿಸಿದ ಆನೆಯ ದೇಹವು ಛಿದ್ರ ಛಿಧ್ರವಾಗಿ ಪುತ್ತೂರು ಪಟ್ಟಣದ ಸುತ್ತಲೂ ಚೆಲ್ಲಿ ಬಿದ್ದವೆಂದೂ, ಆ ಪ್ರದೇಶಗಳೇ ಕೊಂಬೆಟ್ಟು, ಕರಿಯಾಲ, ತಾರ್ಜಾಲು, ಕೈಪಳ, ಬೀದಿಮಜಲು, ತಾಳೆಪಾಡಿ, ಕಾರಿಯಲಕಾಡು, ಬೆರಿಪದವು ಮೊದಲಾದವು ಎಂಬ ನಂಬಿಕೆ ಇಲ್ಲಿನ ಜನರದ್ದು.
Saakshatv special Puttur jatre

ಪುತ್ತೂರು ಕ್ಷೇತ್ರದ ಮತ್ತೊಂದು ವಿಶೇಷತೆ ದೇವಾಲಯ ಹಿಂಭಾಗದಲ್ಲಿರುವ ಸದಾ ಹಸಿರಿನಿಂದ ಕಂಗೊಳಿಸುವ ಕೆರೆ. ದೇವಾಲಯದ ಪಶ್ಚಿಮಕ್ಕೆ ಇರುವ ಕೆರೆಯಲ್ಲಿ ಅದರ ಆಳ ಎಷ್ಟೇ ಆದರೂ ನೀರು ಸಿಗದೇ ಇದ್ದ ಸಮಯದಲ್ಲಿ, ವರುಣ ದೇವರಿಗೆ ಪೂಜೆ ಸಲ್ಲಿಸಿ ಕೆರೆಯೊಳಗೆ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ಮಾಡಬೇಕು ಎಂದು ತಿಳಿದುಬಂತು. ಅದರಂತೆ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಯಿತು. ಬ್ರಾಹ್ಮಣರು ಊಟ ಮಾಡುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ.‌ ಸೇರಿದ ಜನರು ಊಟದ ಎಲೆಯನ್ನು ಹಾಗೆಯೇ ಬಿಟ್ಟು ಎದ್ದು ಹೊರಗೆ ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗುಳುಗಳು ಮುತ್ತುಗಳಾಗಿ ಬೆಳೆದವು ಎಂದೂ, ಮುತ್ತುಗಳು ಬೆಳೆದ ಊರು ಮುತ್ತೂರು ಎಂದಾಗಿ, ಕ್ರಮೇಣ ಜನರ ಬಾಯಲ್ಲಿ ಪುತ್ತೂರು ಎಂದಾಯಿತೆಂದು ಇಲ್ಲಿನ ಜನರು ಹೇಳುತ್ತಾರೆ.
ಈ ಕ್ಷೇತ್ರದ ಮತ್ತೊಂದು ವಿಶೇಷತೆ ಮಹಾಲಿಂಗೇಶ್ವರನ ಎದುರು ಇರುವ ಮೂರುವರೆ ಕಾಲಿನ ನಂದಿ.‌ ಇದರ ಉಳಿದ ಅರ್ಧ ಕಾಲು ಕಲ್ಲಿನ ರೂಪದಲ್ಲಿ ಗದ್ದೆಯಲ್ಲಿದೆ.


ಹಿಂದೆ ಶಿವನ ವಾಹನವಾದ ನಂದಿ, ಕ್ಷೇತ್ರದ ಗದ್ದೆಯಲ್ಲಿ ಬೆಳೆಯುತ್ತಿದ್ದ ಭತ್ತ ಪೈರುಗಳನ್ನು ರಾತ್ರಿ ವೇಳೆ ತಿನ್ನುತ್ತಿತ್ತು. ಇದರಿಂದಾಗಿ ಪೈರು ನಷ್ಟವಾಗಲು ಹೇಗಾದರೂ ಮಾಡಿ ನಂದಿಯನ್ನು ಹಿಡಿಯಬೇಕು ಎಂದು ಜನರು ನಿರ್ಧರಿಸಿದರಂತೆ. ಒಂದು ರಾತ್ರಿ ನಂದಿ ಪೈರು ತಿನ್ನುತ್ತಿರಲು ಜನರು ಅದರ ಕಾಲನ್ನು ಕಡಿದು ಬಿಟ್ಟರಂತೆ. ರಕ್ತದ ಮಡುವಲ್ಲಿ ನಂದಿ ಮಹಾಲಿಂಗೇಶ್ವರ ನ ಬಳಿ ಬಂದು ಮೊರೆ ಇಡಲು, ಮಹಾದೇವ ಆ ನಂದಿಗೆ ಕಲ್ಲಿನ ರೂಪ ಕೊಟ್ಟು ತನ್ನ ಬಳಿ ಇರಿಸಿಕೊಂಡ ಎಂಬ ಪ್ರತೀತಿ ಇಲ್ಲಿದೆ.

ಪ್ರತಿ ವರ್ಷ ಏಪ್ರಿಲ್ 1 ರಂದು ಗೊನೆ ಕಡಿದು ಏಪ್ರಿಲ್ 10ರಂದು ಸಾಂಪ್ರದಾಯಿಕ ಧ್ವಜಾರೋಹಣ ನಡೆಯುವುದರೊಂದಿಗೆ ಪ್ರಾರಂಭವಾಗುವ ಪುತ್ತೂರು ಜಾತ್ರೆಯು 9 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿನ ಭಕ್ತವೃಂದ‌ ಜಾತ್ರೆಯ ಹತ್ತು ದಿನಗಳ ಕಾಲ ವೃತವನ್ನು ಪಾಲಿಸುತ್ತಾ ಮಹಾಲಿಂಗೇಶ್ವರನ ನಾಮವನ್ನು ಸ್ತುತಿಸುತ್ತಾರೆ.

Saakshatv special Puttur jatre

ಪುತ್ತೂರಿನ ಜನರು ಜಗತ್ತಿನ ಯಾವುದೇ ಮೂಲೆಯಲ್ಲಿರಲಿ ಜಾತ್ರೆಯ ಸಮಯದಲ್ಲಿ ಮಾತ್ರ ಅವರು ಪುತ್ತೂರಿನ ಜಾತ್ರೆ ಗದ್ದೆಯಲ್ಲಿ ನೋಡಸಿಗುವುದು ಸಾಮಾನ್ಯ ಸಂಗತಿ.

ಈ ದಿನಗಳಲ್ಲಿ ಮಹಾಲಿಂಗೇಶ್ವರ ಪ್ರತಿನಿತ್ಯ ತನ್ನ ಭಕ್ತರ ಮನೆ ಬಾಗಿಲಿಗೆ ಬಂದು ದರ್ಶನ ಕೊಡುವುದು ಇಲ್ಲಿನ ವಿಶೇಷ. ಏಪ್ರಿಲ್ 16ರಂದು ದೂರದ ಬಲ್ನಾಡು ದೈವಸ್ಥಾನದಿಂದ ದಂಡನಾಯಕ ಮಲರಾಯರನ್ನು ಒಳಗೊಂಡ ತನ್ನ ಭಂಡಾರದೊಂದಿಗೆ ಉಳ್ಳಾಲ್ತಿ ಅಮ್ಮ ಪುತ್ತೂರು ಒಡೆಯನ‌ ರಥೋತ್ಸವ ನೋಡಲು ಆಗಮಿಸುತ್ತಾಳೆ.‌ ತನ್ನ ರಥೋತ್ಸವ ನೋಡಲು ಆಗಮಿಸಿದ ದೈವಗಳ ಭಂಡಾರವನ್ನು ಸ್ವತಃ ದೇವರೇ ದೇವಾಲಯದ ಹೊರಾಂಗಣಕ್ಕೆ ಬಂದು ಬರಮಾಡಿಕೊಳ್ಳುವ ಭಾವುಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಣ್ಣೆರಡು ಸಾಲದು.
Saakshatv special Puttur jatre

ನಂತರ ಸಣ್ಣ ರಥೋತ್ಸವ, ಕೆರೆ ಆಯನ ನಡೆದು ಏಪ್ರಿಲ್ 17ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆಯಾಗಿ
ರಾತ್ರಿ ಪ್ರಸಿದ್ಧ ಪುತ್ತೂರು ಬೆಡಿ ಪ್ರದರ್ಶನ ನಡೆಯುತ್ತದೆ. ನಂತರ ದೇವರ ಬ್ರಹ್ಮ ರಥೋತ್ಸವ.

ದೇವರು ಬ್ರಹ್ಮರಥದಿಂದ ಇಳಿದು ಬಂದ ನಂತರ ದೈವಗಳೊಂದಿಗೆ ಕಟ್ಟೆ ಸವಾರಿ ನಡೆಯುತ್ತದೆ. ಬಳಿಕ ದೈವಗಳು ಬಲ್ನಾಡಿನೆಡೆ ಹೆಜ್ಜೆ ಹಾಕಿದರೆ, ದೇವರು ಪೇಟೆ ಸವಾರಿ ಮುಂದುವರಿಸುತ್ತಾರೆ.

Saakshatv special Puttur jatre
ಏಪ್ರಿಲ್ 18ರಂದು ಸಂಜೆ ಅಂಗಳತ್ತಾಯ ಎಂಬ ದೈವವನ್ನು ಕರೆದು, ದೇವಾಲಯದ ರಕ್ಷಣೆಯನ್ನು ವಹಿಸಿ ದೇವರು ಅವಭೃತ ಸ್ನಾನಕ್ಕೆ ವೀರಮಂಗಲದೆಡೆ ಸಾಗುತ್ತಾರೆ. ಮರುದಿನ ಬೆಳಿಗ್ಗೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ದೇವರು ಆಗಮಿಸಿದ ಬಳಿಕ ಧ್ವಜ ಆರೋಹಣ ನಡೆದು ಜಾತ್ರೆಗೆ ತೆರೆ ಬೀಳುತ್ತದೆ.

Saakshatv special Puttur jatre

ಕಳೆದ ಬಾರಿ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ಮಹಾಲಿಂಗೇಶ್ವರನ ಸನ್ನಿಧಾನಕ್ಕೆ ಪ್ರವೇಶವಿರಲಿಲ್ಲ, ರಥೋತ್ಸವದ ಸಂಭ್ರಮವಿರಲಿಲ್ಲ. ಆದರೆ ಈ ಬಾರಿ ಸರ್ಕಾರದ ನಿಯಮಗಳಿಗನುಸಾರವಾಗಿ ಪುತ್ತೂರು ಒಡೆಯನಿಗೆ ಜಾತ್ರೋತ್ಸವ ನಡೆಯುತ್ತಿದೆ. ಮುಂದಿನ ವರ್ಷವಾದರೂ, ಮಹಾಲಿಂಗೇಶ್ವರನ ದಯೆಯಿಂದ ಬಂದಿರುವ ಕಷ್ಟ ಪರಿಹಾರವಾಗಿ ಕೊರೋನಾ ಮಹಾಮಾರಿ ಈ ಜಗತ್ತಿನಿಂದ ದೂರವಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ…

ಬನ್ನಿ, ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕಾದ ಪುತ್ತೂರು ಒಡೆಯನ ಜಾತ್ರಾ ಸಂಭ್ರಮದಲ್ಲಿ ಪಾಲ್ಗೊಂಡು ಸರ್ವೇಶ್ವರನ ಕೃಪೆಗೆ ಪಾತ್ರರಾಗೋಣ. ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಮಹಾಲಿಂಗೇಶ್ವರನ ವೈಭವದ ಜಾತ್ರೋತ್ಸವದಲ್ಲಿ ಸಂಭ್ರಮಿಸೋಣ.

#Saakshatv  #Putturjatre  #putturmahalingeshwara

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd